ಫುಕೆಟ್‌ನಿಂದ ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. 156 ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರತೆಗೆಯಲಾಗಿದ್ದು, ಪ್ರಾಥಮಿಕ ತನಿಖೆಯಲ್ಲಿ ಯಾವುದೇ ಸ್ಫೋಟಕ ಪತ್ತೆಯಾಗಿಲ್ಲ.
ಗುಜರಾತ್ ನ ಅಹಮದಾಬಾದ್ ನಲ್ಲಿ ನಡೆದ ಏರ್ ಇಂಡಿಯಾ ವಿಮಾನದ ಭೀಕರ ದುರಂತದ ನಡುವೆಯೇ ಥೈಲ್ಯಾಂಡ್‌ನ ಫುಕೆಟ್‌ನಿಂದ ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದೆ. ಬಾಂಬ್ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ, ಶುಕ್ರವಾರ ತುರ್ತು ಭೂಸ್ಪರ್ಶ ಮಾಡಿದೆ ಎಂದು ಫುಕೆಟ್ ವಿಮಾನ ನಿಲ್ದಾಣದ ಅಧಿಕಾರಿಗಳನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ. ವಿಮಾನ ಸಂಖ್ಯೆ AI 379 ಫುಕೆಟ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿದಿದ್ದು, ತುರ್ತು ಯೋಜನೆಗಳ ಪ್ರಕಾರ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತಕ್ಷಣದ ತುರ್ತು ಕ್ರಮವಾಗಿ, ವಿಮಾನದಲ್ಲಿದ್ದ 156 ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರ ಕರೆದುಕೊಂಡು ಬಂದು ವಿಮಾನವನ್ನು ಶೋಧಿಸಲಾಗಿದ್ದು, ಪ್ರಾಥಮಿಕ ತನಿಖೆಯಲ್ಲಿ ಬಾಂಬ್ ಅಥವಾ ಸ್ಫೋಟಕ ಸಾಮಗ್ರಿ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ. ಈ ಹಿಂದೆಯೂ, ವಿಮಾನದಲ್ಲಿ ಬಾಂಬ್ ಬೆದರಿಕೆ ಪತ್ರ ಕಂಡುಬಂದಿದ್ದು, ಅದನ್ನು ಹೊಂದಿದ್ದ ಪ್ರಯಾಣಿಕನನ್ನು ಅಧಿಕಾರಿಗಳು ತನಿಖೆಗೆ ಒಳಪಡಿಸಿದ್ದಾರೆ ಎಂದು ಸ್ಪಷ್ಟವಾಗಿದೆ.
FlightRadar24 ಎಂಬ ಫ್ಲೈಟ್ ಟ್ರ್ಯಾಕರ್ ಮಾಹಿತಿಯ ಪ್ರಕಾರ, ಶುಕ್ರವಾರ ಬೆಳಿಗ್ಗೆ 9:30ಕ್ಕೆ (ಸ್ಥಳೀಯ ಕಾಲಮಾನ) ಫುಕೆಟ್‌ನಿಂದ ದೆಹಲಿಗೆ ಹೊರಟ ವಿಮಾನವು ಅಂಡಮಾನ್ ಸಮುದ್ರದ ಮೇಲಿನಿಂದ ವಿಶಾಲ ವೃತ್ತದಲ್ಲಿ ಹಾರಾಡಿದ ಬಳಿಕ ಮತ್ತೆ ಫುಕೆಟ್‌ನಲ್ಲೇ ಭೂಸ್ಪರ್ಶ ಮಾಡಿತು. ಈ ಘಟನೆ, ಗುರುವಾರ ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಟೇಕ್‌ಆಫ್ ಆದ ಕೆಲವೇ ಸಮಯದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ 290 ಕ್ಕೂ ಹೆಚ್ಚು ಜನರು ಸಾವಿಗೀಡಾದ ಬಳಿಕ ಉಂಟಾಗಿದೆ.
ಥೈಲ್ಯಾಂಡ್‌ನ ವಿಮಾನ ನಿಲ್ದಾಣ ಪ್ರಾಧಿಕಾರ (AOT) ಈ ಬೆದರಿಕೆ ಕುರಿತು ಹೆಚ್ಚಿನ ವಿವರಗಳನ್ನು ನೀಡಿಲ್ಲ. ಏರ್ ಇಂಡಿಯಾ ಪ್ರತಿಕ್ರಿಯೆ ಇನ್ನೂ ಲಭಿಸಿಲ್ಲ. ಹಲವು ವರ್ಷದಲ್ಲಿ, ಭಾರತೀಯ ವಿಮಾನಯಾನ ಸಂಸ್ಥೆಗಳು ಮತ್ತು ವಿಮಾನ ನಿಲ್ದಾಣಗಳಿಗೆ ಸುಮಾರು 1,000 ಕ್ಕೂ ಹೆಚ್ಚು ಬಾಂಬ್ ಬೆದರಿಕೆ ಕರೆಗಳು ಮತ್ತು ಸಂದೇಶಗಳು ಬಂದಿವೆ. ಇದು 2022ರಿಗಿಂತ ಸುಮಾರು 10 ಪಟ್ಟು ಹೆಚ್ಚಾಗಿದೆ.
