ಹೆಸರು ಬದಲಾವಣೆಯಿಂದ ಟಿಪ್ಪು ಪರಂಪರೆ ಅಳಿಸಲಾಗದು: ಒವೈಸಿ, ಪರಂಪರೆ ಬದಲಿಸುವ ಉದ್ದೇಶ ಇಲ್ಲ, ಆತ ಮಹಾನ್‌ ಕ್ರೂರಿ: ಬಿಜೆಪಿ

ಹೈದರಾಬಾದ್‌(ಅ.10):  ಬೆಂಗಳೂರು- ಮೈಸೂರು ನಡುವೆ ಸಂಚರಿಸುವ ಟಿಪ್ಪು ಎಕ್ಸ್‌ಪ್ರೆಸ್‌ ರೈಲಿನ ಹೆಸರನ್ನು ಒಡೆಯರ್‌ ಎಕ್ಸ್‌ಪ್ರೆಸ್‌ ಎಂದು ಬದಲಾಯಿಸಿದ ಸರ್ಕಾರದ ಕ್ರಮವನ್ನು ಎಐಎಂಐಎಂ ಪಕ್ಷದ ನಾಯಕ ಅಸಾದುದ್ದೀನ್‌ ಒವೈಸಿ ಕಟುವಾಗಿ ಟೀಕಿಸಿದ್ದಾರೆ. ಹೆಸರು ಬದಲಾವಣೆ ಮೂಲಕ ಟಿಪ್ಪು ಪರಂಪರೆಯನ್ನು ಅಳಿಸಲಾಗದು ಎಂದು ಕಿಡಿಕಾರಿದ್ದಾರೆ.

ಈ ಬಗ್ಗೆ ಟ್ವೀಟರ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಒವೈಸಿ ‘ಬಿಜೆಪಿ ಸರ್ಕಾರ, ಟಿಪ್ಪು ಎಕ್ಸ್‌ಪ್ರೆಸ್‌ ರೈಲಿನ ಹೆಸರನ್ನು ಒಡೆಯರ್‌ ಎಕ್ಸ್‌ಪ್ರೆಸ್‌ ಎಂದು ಬದಲಾಯಿಸಿದೆ. ಟಿಪ್ಪು, ಬಿಜೆಪಿಯನ್ನು ಕೆರಳಿಸುತ್ತಾನೆ, ಏಕೆಂದರೆ ಆತ ಮೂರು ಬಾರಿ ಬ್ರಿಟಿಷರ ಮೇಲೆ ದಾಳಿ ಮಾಡಿದ್ದ. ಬೇರೊಂದು ರೈಲಿಗೆ ಒಡೆಯರ್‌ ಹೆಸರು ಇಡಬಹುದಿತ್ತು. ಬಿಜೆಪಿ ಎಂದಿಗೂ ಟಿಪ್ಪು ಪರಂಪರೆ ಅಳಿಸಿ ಹಾಕಲಾಗದು. ಜೀವಂತ ಇದ್ದಾಗ ಟಿಪ್ಪು ಬ್ರಿಟಿಷರಿಗೆ ಆತಂಕ ಹುಟ್ಟಿಸಿದ್ದ, ಈಗ ಬ್ರಿಟಿಷರ ಗುಲಾಮರಿಗೂ ಆತಂಕ ಹುಟ್ಟಿಸುತ್ತಿದ್ದಾನೆ’ ಎಂದು ಕಿಡಿಕಾರಿದ್ದಾರೆ.

ಮುಸ್ಲಿಮರ ಜನಸಂಖ್ಯೆ ಕಡಿಮೆಯಾಗ್ತಿದೆ; ನಮ್ಮಿಂದಲೇ ಹೆಚ್ಚು ಕಾಂಡೋಮ್‌ ಬಳಕೆ: Asaduddin Owaisi

ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ ಐಟಿ ಸೆಲ್‌ ಮುಖ್ಯಸ್ಥ ಅಮಿತ್‌ ಮಾಳವೀಯ ‘ಬಿಜೆಪಿಗೆ ಟಿಪ್ಪು ಪರಂಪರೆ ಅಳಿಸಿ ಹಾಕುವ ಉದ್ದೇಶವಿಲ್ಲ. ವಾಸ್ತವವವಾಗಿ ಟಿಪ್ಪುವಿನ ನಿಜವಾದ ಪರಂಪರೆಯನ್ನು ಜನರಿಗೆ ತಿಳಿಸಬೇಕಿದೆ. ಟಿಪ್ಪು ಕೊಡಗಿನ ಕೊಡವರ ಮೇಲೆ, ಮಂಗಳೂರಿನ ಸಿರಿಯನ್‌ ಕ್ರೈಸ್ತರ ಮೇಲೆ, ಕ್ಯಾಥೋಲಿಕ್ಕರ ಮೇಲೆ, ಕೊಂಕಣಿಗಳ ಮೇಲೆ, ಮಲಬಾರ್‌ನ ನಾಸಿರ್‌ ಮೇಲೆ ದೌರ್ಜನ್ಯ ಎಸಗಿದ ಕ್ರೂರಿ’ ಎಂದು ಕಿಡಿಕಾರಿದ್ದಾರೆ.