ಕೊರೋನಾ ಲಸಿಕೆಯಿಂದ ಎಷ್ಟು ಸಮಯ ರಕ್ಷಣೆ? ಏಮ್ಸ್ ವೈದ್ಯರು ಕೊಟ್ಟ ಉತ್ತರವಿದು!
ಕೊರೋನಾ ಲಸಿಕೆಯಿಂದ 8-10 ತಿಂಗಳು ರಕ್ಷಣೆ| ಇನ್ನೂ ಹೆಚ್ಚು ಕಾಲವೂ ರಕ್ಷಣೆ ಸಿಗಬಹುದು: ಏಮ್ಸ್ ನಿರ್ದೇಶಕ| ಲಸಿಕೆಗಳಿಂದ ದೇಹದಲ್ಲಿ ಪ್ರತಿಕಾಯ ವೃದ್ಧಿ
ನವದೆಹಲಿ(ಮಾ.21): ಕೊರೋನಾ ಲಸಿಕೆ ತೆಗೆದುಕೊಂಡರೆ ಎಷ್ಟು ಕಾಲ ಸೋಂಕಿನಿಂದ ರಕ್ಷಣೆ ಸಿಗುತ್ತದೆ ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಏಮ್ಸ್ ಆಸ್ಪತ್ರೆಯ ನಿರ್ದೇಶಕ ಡಾ
ರಣದೀಪ್ ಗುಲೇರಿಯಾ ‘ಕೋವಿಡ್-19 ಲಸಿಕೆ ಪಡೆದರೆ 8ರಿಂದ 10 ತಿಂಗಳ ಕಾಲ ಉತ್ತಮ ರೀತಿಯ ರಕ್ಷಣೆ ಸಿಗಬಹುದು ಅಥವಾ ಇನ್ನೂ ಹೆಚ್ಚು ಕಾಲವೂ ರಕ್ಷಣೆ ಸಿಗಬಹುದು’ ಎಂದು ಹೇಳಿದ್ದಾರೆ.
ಸಮಾರಂಭವೊಂದರಲ್ಲಿ ಶನಿವಾರ ಮಾತನಾಡಿದ ಅವರು, ‘ಕೋವಾಕ್ಸಿನ್ ಮತ್ತು ಕೋವಿಶೀಲ್ಡ್ ಈ ಎರಡೂ ಲಸಿಕೆಗಳು ದೇಹದಲ್ಲಿ ಒಂದೇ ಪ್ರಮಾಣದ ಪ್ರತಿಕಾಯ (ಆ್ಯಂಟಿಬಾಡಿ ಅಥವಾ ರೋಗನಿರೋಧಕ ಶಕ್ತಿ)ಗಳನ್ನು ಉತ್ಪತ್ತಿ ಮಾಡುತ್ತವೆ. ಇವೆರಡೂ ಲಸಿಕೆಗಳು ಉತ್ತಮವಾಗಿವೆ ಮತ್ತು ದೀರ್ಘಾವಧಿ ರಕ್ಷಣೆ ನೀಡುತ್ತವೆ. 8-10 ತಿಂಗಳವರೆಗೆ ಲಸಿಕೆಯಿಂದ ರಕ್ಷಣೆ ಸಿಗಬಹುದು. ಹೀಗಾಗಿ ಯಾವ ಲಸಿಕೆ ಸಿಗುತ್ತದೆಯೋ ಅದನ್ನು ತೆಗೆದುಕೊಳ್ಳಬೇಕು. ಕೊರೋನಾ ಲಸಿಕೆಯಿಂದ ಇಲ್ಲಿಯವರೆಗೆ ಯಾವುದೇ ದೊಡ್ಡ ಅಡ್ಡ ಪರಿಣಾಮ ಕಾಣಿಸಿಲ್ಲ’ ಎಂದರು.
ಮುಂದಿನ 3 ತಿಂಗಳಲ್ಲಿ 50 ವರ್ಷ ಮೇಲ್ಪಟ್ಟಎಲ್ಲರಿಗೂ ಲಸಿಕೆ ವಿತರಣೆ ಆರಂಭಿಸುವ ಉದ್ದೇಶವಿದೆ ಎಂದೂ ಅವರು ತಿಳಿಸಿದರು.
ಇತ್ತೀಚೆಗೆ ಕೆಲವು ದೇಶಗಳಲ್ಲಿ ಲಸಿಕೆ ಬಿಡುಗಡೆ ಮಾಡಿರುವ ಫೈಜರ್ ಲಸಿಕಾ ಕಂಪನಿಯು, ಫೈಜರ್ ಪಡೆಯುವವರಿಗೆ 2-3 ವರ್ಷ ಕೊರೋನಾದಿಂದ ರಕ್ಷಣೆ ಸಿಗಲಿದೆ ಎಂದು ಹೇಳಿತ್ತು.
ಜನರ ನಿರ್ಲಕ್ಷ್ಯವೇ ಕಾರಣ:
‘ಸದ್ಯ ದೇಶದಲ್ಲಿ ಮತ್ತೆ ಸೋಂಕು ಏರಿಕೆಯಾಗುತ್ತಿರುವುದಕ್ಕೆ ಜನರು ಈ ಸಾಂಕ್ರಾಮಿಕ ರೋಗ ಹರಡುವುದು ನಿಂತಿದೆ ಎಂದು ಭಾವಿಸಿರುವುದೇ ಕಾರಣ. ಹೀಗಾಗಿ ಅವರು ಕೊರೋನಾದಿಂದ ರಕ್ಷಣೆ ಪಡೆಯುವ ರೀತಿಯಲ್ಲಿ ನಡೆದುಕೊಳ್ಳುತ್ತಿಲ್ಲ. ಸೋಂಕು ಮತ್ತೆ ಏರಿಕೆಯಾಗುತ್ತಿರುವುದಕ್ಕೆ ಇನ್ನೂ ಸಾಕಷ್ಟುಕಾರಣಗಳಿವೆ. ಆದರೆ, ಮುಖ್ಯ ಕಾರಣ ಜನರ ನಿರ್ಲಕ್ಷ್ಯವೇ ಆಗಿದೆ. ನಾವು ಈಗಲೂ ಅನಗತ್ಯ ಪ್ರಯಾಣವನ್ನು ಕೆಲ ಕಾಲ ಮುಂದೂಡಬೇಕಿದೆ ಎಂದೂ ಗುಲೇರಿಯಾ ಹೇಳಿದರು.
ಪೂರೈಕೆ ಕಮ್ಮಿ ಇರುವ ಕಾರಣ ಎಲ್ಲರಿಗಿಲ್ಲ:
ಇದೇ ವೇಳೆ, ದೇಶದ ಎಲ್ಲಾ ವಯೋಮಾನದ ಜನರಿಗೂ ಏಕೆ ಲಸಿಕೆ ನೀಡುತ್ತಿಲ್ಲ ಎಂಬ ಬಗ್ಗೆ ಸ್ಪಷ್ಟನೆ ನೀಡಿರುವ ನೀತಿ ಆಯೋಗದ ಸದಸ್ಯ ವಿ.ಕೆ.ಪಾಲ್, ಕೊರೋನಾ ಲಸಿಕೆಯ ಪೂರೈಕೆ ಸೀಮಿತವಾಗಿದೆ. ಬೇಕಾದಷ್ಟುಲಸಿಕೆ ಲಭ್ಯವಿದ್ದಿದ್ದರೆ ಎಲ್ಲರಿಗೂ ನೀಡಬಹುದಿತ್ತು. ಈ ಕಾರಣಕ್ಕಾಗಿಯೇ ಆದ್ಯತೆಯ ಮೇಲೆ ನಿರ್ದಿಷ್ಟವಯೋಮಾನದವರಿಗೆ ಲಸಿಕೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.