AIIMS Delhi Server Hack: ಕ್ರಿಪ್ಟೋಕರೆನ್ಸಿಯಲ್ಲಿ 200 ಕೋಟಿ ನೀಡಿ ಎಂದ ಹ್ಯಾಕರ್‌ಗಳು!
ದೇಶದ ಅತಿದೊಡ್ಡ ಸರ್ಕಾರಿ ಆಸ್ಪತ್ರೆ ದೆಹಲಿಯ ಏಮ್ಸ್‌ನ ಪ್ರಮುಖ ಸರ್ವರ್ ಹ್ಯಾಕ್ ಆಗಿ ಆರು ದಿನಗಳ ಕಳೆದಿವೆ. ಈ ನಡುವೆ ಹ್ಯಾಕರ್‌ಗಳು ಸರ್ವರ್‌ಗಳನ್ನು ಪುನಃ ಸ್ಥಾಪನೆ ಮಾಡಲು 200 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.
ನವದೆಹಲಿ (ನ.28): ದೇಶದ ಅತಿದೊಡ್ಡ ಸರ್ಕಾರಿ ಆಸ್ಪತ್ರೆ ದೆಹಲಿಯ ಏಮ್ಸ್‌ನ ಸರ್ವರ್‌ಅನ್ನು ಹ್ಯಾಕ್ ಮಾಡಿ ಅಂದಾಜು 6 ದಿನ ಕಳೆದಿದೆ. ಈ ನಡುವೆ ಹ್ಯಾಕರ್‌ಗಳು ಸರ್ವರ್‌ಗಳನ್ನು ಮರಳಿ ಸ್ಥಾಪನೆ ಮಾಡಲು 200 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದ್ದು, ಈ ಮೊತ್ತವನ್ನು ಕ್ರಿಪ್ಟೋಕರೆನ್ಸಿಯಲ್ಲಿ ನೀಡುವಂತೆ ಅವರು ಹೇಳಿದ್ದಾರೆ. ನವೆಂಬರ್ 23 ರಂದು ದೆಹಲಿಯ ಏಮ್ಸ್‌ನ ಸರ್ವರ್ ಹ್ಯಾಕ್ ಆಗಿತ್ತು. ಇದರಿಂದಾಗಿ ಆಸ್ಪತ್ರೆಯ ಸೇವೆಗಳ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರಿತ್ತು. ಆಸ್ಪತ್ರೆಯ ಒಪಿಡಿ ಮತ್ತು ಐಪಿಡಿಗೆ ಬರುವ ರೋಗಿಗಳು ಚಿಕಿತ್ಸೆ ಪಡೆಯಲು ತೊಂದರೆ ಅನುಭವಿಸುತ್ತಿದ್ದಾರೆ. ಸರ್ವರ್ ಸ್ಥಗಿತದಿಂದಾಗಿ ಆನ್‌ಲೈನ್ ಅಪಾಯಿಂಟ್‌ಮೆಂಟ್ ಬುಕಿಂಗ್ ಮತ್ತು ಟೆಲಿಕನ್ಸಲ್ಟೇಶನ್‌ನಂತಹ ಡಿಜಿಟಲ್ ಸೇವೆಗಳ ಮೇಲೆ ಪರಿಣಾಮ ಬೀರಿವೆ. ಆದಾಗ್ಯೂ, ಈ ಎಲ್ಲಾ ಸೇವೆಗಳನ್ನು ಈಗ ಮೌಖಿಕವಾಗಿಯೇ ನಡೆಸಲಾಗುತ್ತಿದೆ. ಇನ್ನೂ ಸಂಪೂರ್ಣವಾಗಿ ಸರ್ವರ್‌ಅನ್ನು ಕ್ಲೀನ್ ಮಾಡುವ ಪ್ರಕ್ರಿಯೆಗೆ 5 ದಿನಗಳ ಹಿಡಿಯಲಿದೆ. ಅದಾದ ಬಳಿಕ ಆಸ್ಪತ್ರೆಯ ಈ-ಸರ್ವೀಸ್ ಪ್ರಾರಂಭವಾಗಲಿದೆ. ಒಪಿಡಿ, ತುರ್ತುಚಿಕಿತ್ಸಾ ಘಟನ, ಒಳರೋಗಿಗಳ ಪ್ರಯೋಗಾಲಯ ಸೇರಿದಂತೆ ಇತರ ಸೇವೆಗಳು ಈಗ ಮೌಖಿಕವಾಗಿ ನಡೆಯುತ್ತಿದೆ.
ನವೆಂಬರ್ 23 ರಂದು ಏನಾಗಿತ್ತು: ಕಳೆದ ಬುಧವಾರ ಬೆಳಗ್ಗೆ 6.45ಕ್ಕೆ ರೋಗಿಗಳ ವರದಿಗಳಿ ಬರುತ್ತಿಲ್ಲ ಎಂದು ತುರ್ತು ಪ್ರಯೋಗಾಲಯದ ಕಂಪ್ಯೂಟರ್ ಕೇಂದ್ರದಿಂದ ಮೊದಲಿಗೆ ದೂರು ಬಂದಿತ್ತು. ಇದರ ನಂತರ, ಬಿಲ್ಲಿಂಗ್ ಕೇಂದ್ರ ಮತ್ತು ಇತರ ಇಲಾಖೆಗಳಿಂದಲೂ ಇದೇ ರೀತಿಯ ಕರೆಗಳು ಬರಲು ಪ್ರಾರಂಭವಾಗಿದ್ದವು. ಎನ್‌ಐಸಿ ತಂಡ ತನಿಖೆ ನಡೆಸಿದಾಗ ಮುಖ್ಯ ಸರ್ವರ್‌ನಲ್ಲಿ ಯಾವ ದಾಖಲೆಗಳನ್ನೂ ಕೂಡ ತೆರೆಯಲು ಸಾಧ್ಯವಾಗುತ್ತಿಲ್ಲ ಎನ್ನುವ ಮಾಹಿತಿ ತಿಳಿದುಬಂದಿತ್ತು. ಬ್ಯಾಕ್‌ಅಪ್ ಸಿಸ್ಟಮ್ ಮೂಲಕ ಫೈಲ್‌ಗಳನ್ನು ಮರುಸ್ಥಾಪಿಸಲು ತಂಡವು ಮೊದಲು ಪ್ರಯತ್ನಿಸಿದಾಗ, ಅದನ್ನೂ ಕೂಡ ಹ್ಯಾಕ್ ಮಾಡಿದ್ದು ಕಂಡುಬಂದಿದೆ. ನಂತರ ಹೆಚ್ಚಿನ ತನಿಖೆ ನಡೆಸಿದಾಗ, ಕ್ಲೌಡ್‌ನಲ್ಲಿ ಫೈಲ್‌ಗಳನ್ನು ಇರಿಸಲಾಗಿರುವ ಎಕ್ಸ್‌ಟೆನ್ಷನ್ ಅಂದರೆ ಇ-ವಿಳಾಸವನ್ನು ಸಹ ಬದಲಾಯಿಸಲಾಗಿದೆ ಎಂದು ಕಂಡುಬಂದಿದೆ. ಈ ಹಂತದಲ್ಲಿ ಸೈಬರ್ ದಾಳಿ ಆಗಿರುವ ವಿಷಯ ದೃಢಪಟ್ಟಿದೆ. ಇದಕ್ಕಾಗಿ ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT-In) ಸಹಾಯವನ್ನೂ ಪಡೆಯಲಾಗಿದೆ.
ಇದರ ನಂತರ ಇಡಿ ಏಮ್ಸ್‌ನ ಕಂಪ್ಯೂಟರ್ ಸರ್ವರ್‌ಗಳ ಸ್ಕ್ಯಾನಿಂಗ್ ವರ್ಕ್ ಆರಂಭವಾಗಿದೆ. ಪ್ರಸ್ತುತ ಏಮ್ಸ್‌ನಲ್ಲಿರುವ 50 ಸರ್ವರ್‌ಗಳ ಪೈಕಿ 20 ಸರ್ವರ್‌ಗಳನ್ನು ಯಶಸ್ವಿಯಾಗಿ ಸ್ಲ್ಯಾನಿಂಗ್ ಮಾಡಿ ಮುಗಿಸಲಾಗಿದೆ. ಕಂಪ್ಯೂಟರ್ ತಜ್ಞರ ತಂಡ ಈಗಾಗಲೇ, ಏಮ್ಸ್‌ನ ಉಳಿದ ಸರ್ವರ್‌ಗಳ ಕ್ಲೀನಿಂಗ್ ಮಾಡುವ ಪ್ರಕ್ರಿಯೆಯನ್ನು ಸಮರೋಪಾದಿಯಲ್ಲಿ ಮಾಡುತ್ತಿದ್ದಾರೆ. ಎನ್ಐಸಿ ಇ-ಆಸ್ಪತ್ರೆ ಡೇಟಾಬೇಸ್ ಮತ್ತು ಇ-ಆಸ್ಪತ್ರೆಗಾಗಿ ಅಪ್ಲಿಕೇಶನ್ ಸರ್ವರ್ ಅನ್ನು ಮರುಸ್ಥಾಪಿಸಲಾಗಿದೆ. 5000 ಸಿಸ್ಟಂಗಳಲ್ಲಿ ಆಂಟಿವೈರಸ್ ವ್ಯವಸ್ಥೆಯನ್ನು ಮತ್ತೆ ಸ್ಥಾಪನೆ ಮಾಡಲಾಗಿದೆ.
ಕೇಸ್ ದಾಖಲು: ದೆಹಲಿ ಪೊಲೀಸರು ನವೆಂಬರ್ 25 ರಂದು ಪ್ರಕರಣದಲ್ಲಿ ಸುಲಿಗೆ ಮತ್ತು ಸೈಬರ್ ಭಯೋತ್ಪಾದನೆ ಪ್ರಕರಣವನ್ನು ದಾಖಲು ಮಾಡಿದ್ದರು. ತನಿಖಾ ಸಂಸ್ಥೆಗಳ ಶಿಫಾರಸಿನ ಮೇರೆಗೆ ಆಸ್ಪತ್ರೆಯಲ್ಲಿ ಕಂಪ್ಯೂಟರ್‌ಗಳಲ್ಲಿನ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಏಮ್ಸ್ ಸರ್ವರ್‌ನಲ್ಲಿ ಮಾಜಿ ಪ್ರಧಾನಿಗಳು, ಸಚಿವರು, ಹಿರಿಯ ಅಧಿಕಾರಿಗಳು, ನ್ಯಾಯಾಧೀಶರು ಸೇರಿದಂತೆ ಹಲವು ವಿಐಪಿಗಳ ಮಾಹಿತಿ ಸಂಗ್ರಹವಿದೆ.
ಏಮ್ಸ್ ಸರ್ವರ್ ಡೌನ್: ವೈರಸ್ ದಾಳಿ ಶಂಕೆ!
ದೇಶದಲ್ಲಿ ಪ್ರತಿ ತಿಂಗಳು 3 ಲಕ್ಷ ಸೈಬರ್ ದಾಳಿ: ಇತ್ತೀಚೆಗೆ ಇಂಡಸ್ ಫೇಸ್ ನೀಡಿದ್ದ ಪ್ರಮುಖ ವರದಿಯಲ್ಲಿ ದೇಶದಲ್ಲಿ ಪ್ರತಿ ತಿಂಗಳು ಅಂದಾಜು 3 ಲಕ್ಷ ಸೈಬರ್ ದಾಳಿಗಳು ಭಾರತದ ಹೆಲ್ತ್‌ಕೇರ್ ವಲಯದಲ್ಲಿಯೇ ನಡೆಯುತ್ತದೆ. ಇದು ವಿಶ್ವದ 2ನೇ ಗರಿಷ್ಠ ಮಟ್ಟದ ಸೈಬರ್ ದಾಳಿ ಎನಿಸಿದೆ. ಅಮೆರಿಕದಲ್ಲಿ ಪ್ರತಿ ತಿಂಗಳು 5 ಲಕ್ಷ ಸೈಬರ್ ದಾಳಿಗಳು ಹೆಲ್ತ್ ಕೇರ್ ಸೆಕ್ಟರ್‌ನಲ್ಲಿ ನಡೆಯುತ್ತದೆ.
ದಿಲ್ಲಿ ಏಮ್ಸ್‌ಗೆ ಕನ್ನಡಿಗ, ಯಾದಗಿರಿಯ ಡಾ. ಶ್ರೀನಿವಾಸ್ ಮುಖ್ಯಸ್ಥ
ದೆಹಲಿ ಏಮ್ಸ್‌ನ ಆನ್‌ಲೈನ್ ವ್ಯವಸ್ಥೆಯ ಮೇಲೆ ದೊಡ್ಡ ಸೈಬರ್ ದಾಳಿ ಇದು ಎಂದರೂ ತಪ್ಪಲ್ಲ. 8 ವರ್ಷಗಳ ಹಿಂದೆ ಏಮ್ಸ್‌ನ ಡೇಟಾವನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಲಾಗಿತ್ತು. ಆ ಬಳಿಕ ಅಟಲ್ ಬಿಹಾರಿ ವಾಜಪೇಯಿ ಸೇರಿದಂತೆ ಹಲವು ಮಾಜಿ ಪ್ರಧಾನಿಗಳು, ರಾಷ್ಟ್ರಪತಿ, ಉಪರಾಷ್ಟ್ರಪತಿ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಏಮ್ಸ್ ನಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಇವರೆಲ್ಲರ ವೈಯಕ್ತಿಕ ಡೇಟಾವನ್ನು ಏಮ್ಸ್‌ನ ಸರ್ವರ್‌ನಿಂದ ಪ್ರಸ್ತುತ ಹ್ಯಾಕ್ ಮಾಡಿರಬಹುದು ಎನ್ನಲಾಗಿದೆ.