ಕೃತಕ ಬುದ್ಧಿಮತ್ತೆ (AI) ಸುತ್ತಲಿನ ಅತಿಯಾದ ಉತ್ಸಾಹ ಮತ್ತು ಹೂಡಿಕೆಯು 'ಗುಳ್ಳೆ'ಯನ್ನು ಸೃಷ್ಟಿಸಿದೆ ಎಂದು ಗೂಗಲ್ ಸಿಇಒ ಸುಂದರ್ ಪಿಚೈ ಸೇರಿದಂತೆ ತಂತ್ರಜ್ಞಾನ ದಿಗ್ಗಜರು ಎಚ್ಚರಿಸಿದ್ದಾರೆ. ಈ ಎಐ ಗುಳ್ಳೆ ಒಡೆದರೆ, ಜಾಗತಿಕ ಷೇರು ಮಾರುಕಟ್ಟೆಯ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂಬ ಆತಂಕ

ತಂತ್ರಜ್ಞಾನ ಲೋಕದಲ್ಲಿ ಕ್ರಾಂತಿ ಸೃಷ್ಟಿಸಿರುವ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಬಗ್ಗೆ ಈಗ ತಂತ್ರಜ್ಞಾನ ದಿಗ್ಗಜರೇ ತೀವ್ರ ಎಚ್ಚರಿಕೆಯನ್ನು ನೀಡುತ್ತಿದ್ದಾರೆ. ಈ ಕ್ಷಿಪ್ರ ಬೆಳವಣಿಗೆಯು ಯಾವುದೇ ಕ್ಷಣದಲ್ಲಿ ಸಿಡಿಯಬಹುದಾದ ಒಂದು 'ಗುಳ್ಳೆ' (Bubble) ಎಂದು ಅನೇಕ ತಜ್ಞರು ಕರೆದಿದ್ದಾರೆ. ಒಂದು ಕಡೆ ಕಂಪನಿಗಳು ಸಾವಿರಾರು ಉದ್ಯೋಗಿಗಳನ್ನು ವಜಾ ಮಾಡಿ AI ನಲ್ಲಿ ಬೃಹತ್ ಹೂಡಿಕೆಗಳನ್ನು ಮಾಡುತ್ತಿದ್ದರೆ, ಮತ್ತೊಂದೆಡೆ ಇದು 2000ನೇ ಇಸವಿಯ 'ಡಾಟ್-ಕಾಮ್ ಬಬಲ್'ಗೆ ಹೋಲಿಕೆಯಾಗುತ್ತಿದೆ ಎಂಬ ಭಯ ವ್ಯಕ್ತವಾಗಿದೆ.

ಗೂಗಲ್ ಸಿಇಒ ಸೇರಿ ಪ್ರಮುಖರ ಎಚ್ಚರಿಕೆ ಏನು?

AI ಗುಳ್ಳೆಯ ಬಗ್ಗೆ ಗೂಗಲ್ ಸಿಇಒ ಸುಂದರ್ ಪಿಚೈ ಅವರೇ ಇತ್ತೀಚೆಗೆ ನೇರ ಎಚ್ಚರಿಕೆ ನೀಡಿದ್ದರು. ಬಳಕೆದಾರರು AI ಅನ್ನು ಕುರುಡಾಗಿ ನಂಬಬಾರದು ಮತ್ತು AI ನಲ್ಲಿ ಹೂಡಿಕೆ ಮಾಡುವ ಕಂಪನಿಗಳು ಜಾಗರೂಕರಾಗಿರಬೇಕು ಎಂದು ಅವರು ಸಲಹೆ ನೀಡಿದ್ದರು. ಓಪನ್‌ಎಐ(Open AI) ಸಂಸ್ಥಾಪಕ ಸ್ಯಾಮ್ ಆಲ್ಟ್‌ಮನ್ ಮತ್ತು ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಅವರೂ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. AI ಸುತ್ತಲೂ ಸೃಷ್ಟಿಯಾಗಿರುವ ಈ ಅತಿಯಾದ ಉತ್ಸಾಹ ಮತ್ತು ಬೃಹತ್ ಹೂಡಿಕೆಗಳು, ಇಂಟರ್ನೆಟ್‌ನ ಆರಂಭಿಕ ದಿನಗಳಲ್ಲಿ ಇದ್ದಂತೆಯೇ 'ಗುಳ್ಳೆ' ಒಡೆಯುವ ಸಾಧ್ಯತೆಯನ್ನು ಹೆಚ್ಚಿಸಿದೆ.

ಷೇರು ಮಾರುಕಟ್ಟೆ ಮೇಲೆ ಗಂಭೀರ ಪರಿಣಾಮದ ಭೀತಿ!

AI ತಂತ್ರಜ್ಞಾನವು ಪ್ರಮುಖ ಕಂಪನಿಗಳ ಷೇರು ಮಾರುಕಟ್ಟೆಯಲ್ಲಿ ತೀವ್ರ ಏರಿಕೆಗೆ ಕಾರಣವಾಗಿದೆ. ಒಂದು ವೇಳೆ ಈ AI ಗುಳ್ಳೆ ಒಡೆದರೆ, ಅದು ಜಾಗತಿಕ ಷೇರು ಮಾರುಕಟ್ಟೆಗಳ ಮೇಲೆ ಆಳವಾದ ಮತ್ತು ನೇರ ಪರಿಣಾಮ ಬೀರಬಹುದು ಎಂದು ಮಾರುಕಟ್ಟೆ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರಮುಖ ಕಾರಣಗಳು:

* ಅಮೆರಿಕದ ಷೇರು ಮಾರುಕಟ್ಟೆಯಲ್ಲಿ ಪಟ್ಟಿ ಮಾಡಲಾದ ಕೇವಲ ಏಳು ದೊಡ್ಡ ಕಂಪನಿಗಳಾದ ಆಪಲ್, ಮೈಕ್ರೋಸಾಫ್ಟ್, ಗೂಗಲ್, ಮೆಟಾವರ್ಸ್ ಮತ್ತು ಟೆಸ್ಲಾ ಮಾತ್ರ ಒಟ್ಟು ಮಾರುಕಟ್ಟೆ ಬಂಡವಾಳೀಕರಣದ ಸುಮಾರು 34% ರಷ್ಟನ್ನು ಹೊಂದಿವೆ.

* ಕಳೆದ ವರ್ಷದ ಅತಿದೊಡ್ಡ ಲಾಭಗಳಲ್ಲಿ ಈ ಕಂಪನಿಗಳ ಪಾಲು ಅರ್ಧಕ್ಕಿಂತ ಹೆಚ್ಚಿದೆ.

ಆದ್ದರಿಂದ, ಈ ಕೆಲವೇ ಕೆಲವು ಟೆಕ್ ಕಂಪನಿಗಳಲ್ಲಿನ ಕುಸಿತವು ಒಟ್ಟಾರೆ ಜಾಗತಿಕ ಷೇರು ಮಾರುಕಟ್ಟೆಯ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆಯಿದೆ. AI ಕಲಿಯುವುದು ಮತ್ತು ಬಳಸುವುದು ಮುಖ್ಯವಾದರೂ, AI ಮಾದರಿಗಳು ಅಥವಾ AI-ಚಾಲಿತ ಮುನ್ಸೂಚನೆಗಳ ಮೇಲೆ ಮಾತ್ರ ಹೂಡಿಕೆ ಮಾಡುವುದು ದೊಡ್ಡ ಅಪಾಯಕ್ಕೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.