ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಬದುಕುಳಿದ ಏಕೈಕ ಪ್ರಯಾಣಿಕ ವಿಶ್ವಾಸ್ ಕುಮಾರ್ ರಮೇಶ್ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. .
ಅಹಮದಾಬಾದ್: ಜೂನ್ 12ರ ಗುರುವಾರ ಸಂಭವಿಸಿದ್ರೆ ಏರ್ ಇಂಡಿಯಾ ವಿಮಾನಪತನದಲ್ಲಿ ಬದುಕುಳಿದ ಏಕೈಕ ಪ್ರಯಾಣಿಕ ಮೃತ್ಯುಂಜಯಿ, ವಿಶ್ವಾಸ್ ಕುಮಾರ್ ರಮೇಶ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ವಿಶ್ವಾಸ್ ಕುಮಾರ್ ರಮೇಶ್ ಜೊತೆಯಲ್ಲಿ ಪ್ರಯಾಣಿಸುತ್ತಿದ್ದ ಅವರ ಸೋದರ ಅಜಯ್ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಇಂಡಿಯಾ ವಿಮಾನ AI 171 ಸೀಟ್ ಸಂಖ್ಯೆ 11A ನಲ್ಲಿ ಕುಳಿತಿದ್ದ ಪ್ರಯಾಣಿಕ ವಿಶ್ವಾಸ್ ಕುಮಾರ್ ರಮೇಶ್ ಪವಾಡದಂತೆ ಬದುಕುಳಿದ್ದರು. ಮಂಗಳವಾರ ತಡರಾತ್ರಿ ವಿಶ್ವಾಸ್ ಕುಮಾರ್ ರಮೇಶ್ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
ಏರ್ ಇಂಡಿಯಾ ಪ್ರಸ್ತಾಪ ತಿರಸ್ಕರಿಸಿದ ಕುಟುಂಬ!
ಈ ಕುರಿತು ಮಾತನಾಡಿರುವ ವೈದ್ಯಕೀಯ ಅಧೀಕ್ಷಕ ಡಾ. ರಾಕೇಶ್ ಜೋಶಿ, ವಿಶ್ವಾಸ್ ಕುಮಾರ್ ರಮೇಶ್ ಉರಿಯುತ್ತಿರುವ ವಿಮಾನದಿಂದ ಹೊರಬರುವಲ್ಲಿ ಯಶಸ್ವಿಯಾಗಿದ್ದಾರೆ . ವಿಮಾನ ಪತನದ ಬಳಿಕ ಆಸ್ಪತ್ರೆಗೆ ದಾಖಲಾದ ಎರಡನೇ ರೋಗಿಯಾಗಿದ್ದಾರೆ. ಆಸ್ಪತ್ರೆಯಿಂದಲೇ ಡಿಯುನಲ್ಲಿರುವ ಮನೆಗೆ ತೆರಳಲು ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಡಲಾಗಿದೆ. ವಿಮಾನಯಾನ ಸಂಸ್ಥೆ ಏರ್ ಇಂಡಿಯಾ, ವಿಶ್ವಾಸ್ ಮತ್ತು ಅವರ ಕುಟುಂಬಕ್ಕೆ ಇಲ್ಲಿ ಹೋಟೆಲ್ ವಸತಿ ವ್ಯವಸ್ಥೆ ಮಾಡಲು ಮುಂದಾಗಿತ್ತು. ಆದರೆ ವಿಶ್ವಾಸ್ ಅವರ ಕುಟುಂಬವು ಏರ್ ಇಂಡಿಯಾದ ಪ್ರಸ್ತಾಪವನ್ನು ತಿರಸ್ಕರಿಸಿತ್ತು. ಅವರು ತಮ್ಮದೇ ಆದ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದಾರೆ ಎಂದು ಡಾ. ರಾಕೇಶ್ ಜೋಶಿ ಹೇಳಿದರು.
11-ಜೆ ಸೀಟ್‌ನಲ್ಲಿ ಕುಳಿತಿದ್ದ ವಿಶ್ವಾಸ್ ರಮೇಶ್ ಕುಮಾರ್ ಸೋದರ ಅಜಯ್ ಮೃತರಾಗಿದ್ದರು. ಡಿಎನ್ಎ ಪರೀಕ್ಷೆ ಬಳಿಕ ಅಜಯ್ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಬುಧವಾರ ಬೆಳಗಿನ ಜಾವ 2:10 ಕ್ಕೆ ಅವರ ದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು ಎಂದು ಶವಾಗಾರ ಸಂಕೀರ್ಣದ ಅಧಿಕಾರಿಗಳು ತಿಳಿಸಿದ್ದಾರೆ. ಅಜಯ್ ಅವರ ಅಂತಿಮ ವಿಧಿವಿಧಾನಗಳನ್ನು ಪೂರೈಸಲು ಶವವನ್ನು ಡಿಯುವಿಗೆ ತೆಗೆದುಕೊಂಡು ಹೋಗಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ವಿಶ್ವಾಸ್ ರಮೇಶ್ ಕುಮಾರ್ ಸಹ ಡಿಯುಗೆ ಹಿಂದಿರುಗಿದ್ದಾರೆ.
ಚಿಕಿತ್ಸೆ ಪಡೆಯುತ್ತಿದ್ದ ಮೂವರು ಸಾವು
ಈ ಭೀಕರ ದುರಂತದಲ್ಲಿ ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿದಂತೆ 241 ಜನರು ಪ್ರಾಣ ಕಳೆದುಕೊಂಡರು. ಇದರೊಂದಿಗೆ ಅನೇಕ ಜನರು ಸ್ಥಳದಲ್ಲೇ ಸಾವನ್ನಪ್ಪಿದರು. ಈ ಅಪಘಾತದಲ್ಲಿ ಕೆಲವರು ಗಾಯಗೊಂಡಿದ್ದಾರೆ. ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಇನ್ನೂ 19 ರೋಗಿಗಳನ್ನು ದಾಖಲಿಸಲಾಗಿದೆ. ಚಿಕಿತ್ಸೆಯ ಸಮಯದಲ್ಲಿ ಮೂವರು ಗಾಯಾಳುಗಳು ಸಾವನ್ನಪ್ಪಿದ್ದಾರೆ.
ವಿಮಾನಗಳ ಹಾರಾಟದಲ್ಲಿ ಅಡಚಣೆ
ಅಹಮದಾಬಾದ್ ವಿಮಾನ ದುರಂತದ ಬಳಿಕ ಹಲವು ಅಂತರಾಷ್ಟ್ರೀಯ ವಿಮಾನಗಳ ಹಾರಾಟದಲ್ಲಿ ಅಡಚಣಯುಂಟಾಗಿತ್ತು. ಭದ್ರತೆ ತಪಾಸಣೆಯಿಂದಾಗಿ ಪ್ರಪಂಚದ ಹಲವೆಡೆ ವಿಮಾನ ಹಾರಾಟದಲ್ಲಿ ಅಡಚಣೆಯುಂಟಾಗಿತ್ತು. ತಾಂತ್ರಿಕ ದೋಷ ಮತ್ತು ಹವಾಮಾನ ವೈಪರೀತ್ಯದಿಂದಾಗಿ ಹಲವು ವಿಮಾನಗಳು ತಮ್ಮ ಪ್ರಯಾಣವನ್ನು ರದ್ದುಗೊಳಿಸಿವೆ.
‘ರ್‍ಯಾಟ್’ ಸಾಕ್ಷಿ
ಏರ್ ಇಂಡಿಯಾ ಡ್ರೀಮ್‌ಲೈನರ್ ವಿಮಾನ ದುರಂತದ ಕುರಿತು ಒಂದೊಂದೇ ಮಾಹಿತಿ ಬಹಿರಂಗವಾಗುತ್ತಿದೆ. ಇದೀಗ, ವಿಮಾನಗಳ ಎರಡೂ ಎಂಜಿನ್ ವೈಫಲ್ಯ ಆದಾಗ ಸಕ್ರಿಯವಾಗುವ ರ್‍ಯಾಂ ಏರ್ ಟರ್ಬೈನ್ (ರ್‍ಯಾಟ್), ವಿಮಾನ ಪತನದ ವೇಳೆ ಕಾರ್ಯ ನಿರ್ವಹಿಸುತ್ತಿತ್ತು ಎಂದು ತಿಳಿದುಬಂದಿದೆ. ಈ ಮೂಲಕ, ಆ ವಿಮಾನದಲ್ಲಿ ಎರಡೂ ಎಂಜಿನ್ ವೈಫಲ್ಯವಾಗಿತ್ತು ಎಂಬುದಕ್ಕೆ ಇನ್ನಷ್ಟು ಪುಷ್ಟಿ ಸಿಕ್ಕಿದೆ.
ಏನಿದು ರ್‍ಯಾಟ್?:
ರ್‍ಯಾಂ ಏರ್ ಟರ್ಬೈನ್(ರ್‍ಯಾಟ್) ಎಂಬುದು ಗಾಳಿಯ ವೇಗದಿಂದ ಕೆಲಸ ಮಾಡುವ ಟರ್ಬೈನ್ ಆಗಿದ್ದು, ವಿಮಾನದ ಎರಡೂ ಎಂಜಿನ್‌ಗಳು ವಿಫಲವಾದಾಗ ತಾನಾಗಿಯೇ ಸಕ್ರಿಯಗೊಳ್ಳುತ್ತದೆ.
ಇದು ಎಂಜಿನ್ ವೈಫಲ್ಯದ ವೇಳೆ ವಿಮಾನಕ್ಕೆ ಪವರ್ ನೀಡಿ ವಿಮಾನದ ವಿಮಾನ ನಿಯಂತ್ರಣ, ಸಂಚಾರ ಮತ್ತು ಸಂವಹನದಂತಹ ನಿರ್ಣಾಯಕ ವ್ಯವಸ್ಥೆಗಳು ಕೆಲಸ ಮಾಡುವಂತೆ ನೋಡಿಕೊಳ್ಳುತ್ತದೆ. ವಿಮಾನ ಚಲಿಸುವಾಗ ಬೀಸುವ ಗಾಳಿ ವೇಗವನ್ನು ಬಳಸಿಕೊಂಡು ತಿರುಗಿ ಇದು ಶಕ್ತಿಯನ್ನು ಉತ್ಪಾದಿಸುತ್ತದೆ. ರ್‍ಯಾಟ್ ಉಪಕರಣವು ಫ್ಯುಸೆಲೇಜ್ (ಯಾಣಿಕರು, ಪೈಲಟ್‌ಗಳಿರುವ ವಿಮಾನದ ಮಧ್ಯದ ಭಾಗ)ನ ಮುಂಭಾಗದ ಬಲಬದಿಯಲ್ಲಿ, ಅಡಿಯಲ್ಲಿ, ರೆಕ್ಕೆಗಳ ಬುಡದಲ್ಲಿ ಇರುತ್ತದೆ.
