ಆಸ್ಪತ್ರೆ ಎಕ್ಸ್‌ರೇ ಕೋಣೆಯಲ್ಲಿ ವಿವಸ್ತ್ರ ಮಹಿಳೆಯರ ವಿಡಿಯೋ ಸೆರೆ ಹಿಡಿಯುತ್ತಿದ್ದ ಚಾಲಕ, ಕೇಸ್ ಆಗಲೇ ಇಲ್ಲ, ಆಸ್ಪತ್ರೆ ಡೀನ್ ಕಚೇರಿಯ ಚಾಲಕ ರಹಸ್ಯವಾಗಿ ಮೊಬೈಲ್ ಮೂಲಕ ವಿವಸ್ತ್ರ ಮಹಿಳೆಯರ ವಿಡಿಯೋಗಳನ್ನು ಸೆರೆ ಹಿಡಿಯುತ್ತಿದ್ದ. 

ಅಹಮ್ಮದಾಬಾದ್ (ಮಾ.22) ಖಾಸಗಿ ಪ್ರದೇಶ, ಶೌಚಾಲಯ ಸೇರಿದಂತೆ ಕೆಲ ಸ್ಥಳಗಳಲ್ಲಿ ಮೊಬೈಲ್ ಇಟ್ಟು, ಕ್ಯಾಮರಾ ಮಹಿಳೆಯ ವಿಡಿಯೋ ಚಿತ್ರೀಕರಿಸಿ ಫಾರ್ವರ್ಡ್ ಮಾಡುವ, ಬೆದರಿಸುವ ಹಾಗೂ ಸೋಶಿಯಲ್ ಮೀಡಿಯಾ ಮೂಲಕ ಹರಿಬಿಡುವ ಹಲವು ಘಟನೆಗಳು ನಡೆದಿದೆ. ಇದೀಗ ಆಸ್ಪತ್ರೆ ಎಕ್ಸ್‌ರೇ ಕೋಣೆಯಲ್ಲಿ ವಿವಿಸ್ತ್ರ ಮಹಿಳೆಯರ ವಿಡಿಯೋಗಳನ್ನು ರಹಸ್ಯವಾಗಿ ಸೆರೆ ಹಿಡಿಯುತ್ತಿದ್ದ ಘಟನೆ ಗುಜರಾತ್‌ನ ಅಹಮ್ಮದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ಆಸ್ಪತ್ರೆ ಡೀನ್ ಚಾಲಕನೇ ಈ ಕೃತ್ಯ ಎಸಗಿದ್ದಾನೆ. ದುರಂತ ಅಂದರೆ ಈ ಆರೋಪಿ ವಿರುದ್ದ ಯಾವುದೇ ಕೇಸ್ ದಾಖಲಾಗಿಲ್ಲ.

Add Asianetnews Kannada as a Preferred SourcegooglePreferred

ಮಹಿಳಾ ರೋಗಿಗಳೇ ಈತನ ಟಾರ್ಗೆಟ್

ಸೋಲಾ ಸಿವಿಲ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಆಸ್ಪತ್ರೆಯ ಡೀನ್ ಕಚೇರಿಯ ಚಾಲಕ ವಿಷ್ಣು ಮಕ್ವಾನ ಈ ಕೃತ್ಯ ಎಸಗಿದ್ದಾನೆ ಎಂದು ವರದಿಯಾಗಿದೆ. ಆಸ್ಪತ್ರೆಗೆ ಹಲವು ಸಮಸ್ಯೆಗಳಿಂದ ಬರುತ್ತಿದ್ದ ಮಹಿಳಾ ರೋಗಿಗಳೇ ಈತನ ಟಾರ್ಗೆಟ್. ಆಸ್ಪತ್ರೆಯಲ್ಲಿ ಎಕ್ಸ್ ರೇ ಕೋಣೆಯಲ್ಲಿ ಈತ ಮೊಬೈಲ್ ಕ್ಯಾಮೆರಾ ಇಟ್ಟು ರೆಕಾರ್ಡ್ ಮಾಡಿಕೊಳ್ಳುತ್ತಿದ್ದ. ಡೀನ್ ಕಚೇರಿಯ ಚಾಲಕನಾಗಿದ್ದ ಕಾರಣ ಈತನನ್ನು ಯಾರು ಪ್ರಶ್ನೆ ಮಾಡುತ್ತಿರಲಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಈ ಖದೀಮ, ಹಲವು ಮಹಿಳೆಯರ ವಿವಸ್ತ್ರ ವಿಡಿಯೋಗಳನ್ನು ಸೆರೆ ಹಿಡಿಯುತ್ತಿದ್ದ.

ಹಲವು ಮಹಿಳೆಯರ ವಿಡಿಯೋಗಳನ್ನು ಸೆರೆ ಹಿಡಿದಿದ್ದಾರೆ. ಬಳಿಕ ಕೆಲ ವಿಡಿಯೋಗಳನ್ನು ಫಾರ್ವರ್ಡ್ ಮಾಡಿದ್ದಾನೆ. ಮಹಿಳೆಯೊಬ್ಬರು ಎಕ್ಸ್ ರೇ ಕೋಣೆಯಲ್ಲಿ ಪರೀಕ್ಷೆಗೆ ಒಳಗಾಗಿದ್ದ ಸಂದರ್ಭದಲ್ಲಿ ಮೊಬೈಲ್ ಮೂಲಕ ರಹಸ್ಯವಾಗಿ ವಿಡಿಯೋ ಸೆರೆ ಹಿಡಿಯುತ್ತಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಕುಟುಂಬಸ್ಥರಿಗೆ ಹೇಳಿದ್ದಾಳೆ. ಈ ಮೂಲಕ ಘಟನೆ ಬೆಳಕಿಗೆ ಬಂದಿದೆ. ಆಸ್ಪತ್ರೆ ಸಿಬ್ಬಂದಿಗಳು ತಕ್ಷಣ ಎಚ್ಚೆತ್ತುಕೊಂಡಂತೆ ನಟಿಸಿದ್ದಾರೆ. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ.

ಸಂಧಾನ ಮೂಲಕ ಪ್ರಕರಣ ಕ್ಲೋಸ್

ಈತನ ಮೊಬೈಲ್‌ನಲ್ಲಿ ಹಲವು ಮಹಿಳೆಯ ವಿವಸ್ತ್ರ ವಿಡಿಯೋಗಳು ಪತ್ತೆಯಾಗಿದೆ. ಇಷ್ಟೇ ಅಲ್ಲ ಎಕ್ಸ್ ರೇ ಕೋಣೆಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ. ಆದರೆ ಈತನ ಹಿಡಿದು ಪೊಲೀಸರಿಗೆ ಒಪ್ಪಿಸುವ ಬದಲು, ಅಥವಾ ಈತನ ವಿರುದ್ದ ದೂರು ದಾಖಲಿಸುವ ಬದಲು ಮಹಿಳೆ ಹಾಗೂ ಆರೋಪಿ ಚಾಲನಕ ನಡುವೆ ಸಂಧಾನ ಮಾಡಿ ಪ್ರಕರಣವನ್ನೇ ಅಂತ್ಯಗೊಳಿಸಿದ ದುರಂತ ಘಟನೆ ನಡೆದಿದೆ. ಸಂತ್ರಸ್ತ ಮಹಿಳೆ, ಆಕೆಯ ಕುಟುಂಬಸ್ಥರ ಜೊತೆ ಮಾತುಕತೆ ನಡೆಸಲಾಗಿದೆ. ಮಾನ ಮರ್ಯಾದೆ, ಮದುವೆ ಎಂದೆಲ್ಲಾ ಹೆದರಿಸಿ ಪ್ರಕರಣವನ್ನು ಸಂಧಾನದಲ್ಲಿ ಮುಗಿಸಿದ್ದಾರೆ. ಮೊಬೈಲ್‌ನಲ್ಲಿದ್ದ ಹಲವು ಮಹಿಳೆಯರ ವಿಡಿಯೋಗಳನ್ನು ಡಿಲೀಟ್ ಮಾಡಲು ಸೂಚಿಸಿದ್ದಾರೆ.

ಪ್ರಕರಣ ಬೆಳಕಾಗಿ ಬಂದಾಗ ಆಸ್ಪತ್ರೆ ವಿರುದ್ದ ಆಕ್ರೋಶ

ಈ ಘಟನೆ ಬೆಳಕಿಗೆ ಬಂದ ಬಳಿಕ ಆಸ್ಪತ್ರೆ ವಿರುದ್ದ ಭಾರಿ ಆಕ್ರೋಶ ವ್ಯಕ್ತವಾಗಿದೆ. ಇತ್ತ ಟೀಕೆಗಳು ತೀವ್ರಗೊಳ್ಳುತ್ತಿದ್ದಂತೆ ಆಸ್ಪತ್ರೆ ಮಂಡಳಿ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದೆ. ನಾವು ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಲು ತಯಾರಿದ್ದೆವು, ಆದರೆ ಆರೋಪಿ ಚಾಲಕ ಹಾಗೂ ಮಹಿಳೆ ಕುಟುಂಬಸ್ಥರು ಸಂಧಾನ ಮಾಡಿ ಪ್ರಕರಣ ಅಂತ್ಯಗೊಳಿಸಿದ್ದಾರೆ ಎಂದಿದ್ದಾರೆ. ತೀವ್ರ ಆಕ್ರೋಶದ ಬಳಿಕ ಆಂತರಿಕ ವಿಚಾರಣೆಗೆ ಆಸ್ಪತ್ರೆ ಆಡಳಿತ ಮಂಡಳಿ ಸೂಚಿಸಿದೆ.