ಅಹ್ಮದಾಬಾದ್‌ನ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮಡಿದವರದ್ದು ಒಬ್ಬೊಬ್ಬರದ್ದು ಒಂದೊಂದು ಮನಕಲುಕುವ ಕತೆಯಾಗಿದೆ. ಒಬ್ಬರು ಮೊದಲ ಬಾರಿ ಪತಿಯನ್ನು ನೋಡಲು ಲಂಡನ್‌ಗೆ ಹೊರಟವರಾಗಿದ್ದರೆ, ಮತ್ತೊಬ್ಬರು ಮತ್ತಿಬ್ಬರು ಭಾರತ ಬಿಟ್ಟು ತಮ್ಮ ತಾಯ್ನಾಡಿಗೆ ಹೊರಟ ಬ್ರಿಟಿಷ್ ಪ್ರಜೆಗಳು
ಪುತ್ರಿ ಖುಷ್ಬೂ ಕಳುಹಿಸಿ ಬಂದಿದ್ದ ತಂದೆಯ ಕಣ್ಣೀರ ರೋಧನ
ಅಹಮದಾಬಾದ್: ಕೇವಲ 5 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ರಾಜಸ್ಥಾನದ ಖುಷ್ಬೂ ರಾಜ್‌ಪುರೋಹಿತ್ ಮೊದಲ ಸಲ ಪತಿಯ ಕಾಣುವುದಕ್ಕೆ ಲಂಡನ್‌ಗೆ ಹೊರಟಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿದ್ದು, ಅವರ ಅಹಮದಾಬಾದ್ ವಿಮಾನ ಅಪಘಾತದಲ್ಲಿ ದುರಂತ ಅಂತ್ಯ ಕಂಡಿದ್ದಾರೆ.
ರಾಜಸ್ಥಾನದ ಬಲೋತ್ರಾ ಜಿಲ್ಲೆಯ ಅರಬಾ ದುದಾವತ್ ಗ್ರಾಮದ ಖುಷ್ಬೂ ಈ ವರ್ಷದ ಜನವರಿಯಲ್ಲಿ ವಿಪುಲ್ ಸಿಂಗ್ ಎನ್ನುವವರನ್ನು ಮದುವೆಯಾಗಿದ್ದರು. ವಿಪುಲ್ ವೈದ್ಯರಾಗಿದ್ದು, ಲಂಡನ್‌ನಲ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ನೆಲೆಸಿದ್ದರು. ಮದುವೆಯ ನಂತರ ಪತಿಯನ್ನು ನೋಡಿರದ ಆಕೆ ವೀಸಾ ಮತ್ತು ಎಲ್ಲಾ ದಾಖಲೆಗಳನ್ನು ಸಿದ್ಧಪಡಿಸಿಕೊಂಡು 5 ತಿಂಗಳ ಬಳಿಕ ಪತಿಯನ್ನು ಕಾಣುವ ಖುಷಿಯಲ್ಲಿ ವಿಮಾನ ಹತ್ತಿದ್ದರು. ಆದರೆ ಕೆಲವೇ ಕ್ಷಣದಲ್ಲಿ ಸಂಭವಿಸಿದ ದುರಂತದಲ್ಲಿ ಅಸುನೀಗಿದ್ದಾರೆ. ಇನ್ನೂ ಅವಘಡದಲ್ಲಿ ಮರಣ ಹೊಂದಿದವರ ಪೈಕಿ ರಾಜಸ್ಥಾನದ 13 ಪ್ರಯಾಣಿಕರಿದ್ದಾರೆ.
ಭಾರತದಲ್ಲಿದು ನಮ್ಮ ಕೊನೆಯ ರಾತ್ರಿ ಎಂದವರ ಜೀವನವೇ ಕೊನೆಯಾಯ್ತು
ಅಹಮದಾಬಾದ್: ಗುರುವಾರ ಅಹಮದಾಬಾದ್‌ನಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಸಿಲುಕಿದ ಲಂಡನ್‌ನ ಪ್ರಜೆಗಳಿಬ್ಬರು ಭಾರತ ಬಿಟ್ಟು ಹೊರಡುವ ಮುಂಚೆ ಮಾಡಿದ ವಿಡಿಯೋ ಲಭ್ಯವಾಗಿದೆ.
ಲಂಡನ್ ಮೂಲದ ಯೋಗಾಭ್ಯಾಸಿ ಜೇಮಿ ಮೀಕ್ ಮತ್ತು ಅವರ ಸ್ನೇಹಿತ ಫಿಯೊಂಗಲ್ ಗ್ರೀನ್‌ಲಾ ಗುಜರಾತ್ ಭೇಟಿ ಮುಗಿಸಿ ಲಂಡನ್‌ಗೆ ತೆರಳುವ ಮುಂಚೆ ವಿಡಿಯೋ ಮಾಡಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು. ಇದು ಭಾರತದಲ್ಲಿ ನಮ್ಮ ಕೊನೆಯ ರಾತ್ರಿ. ಭಾರತದಲ್ಲಿ ನಮಗೆ ನಿಜವಾಗಿಯೂ ಮಾಂತ್ರಿಕ ಅನುಭವವಾಯಿತು. ಮನಸ್ಸಿಗೆ ಮುದ ನೀಡುವ ಅನೇಕ ಕ್ಷಣಗಳು ಘಟಿಸಿದವು. ಇವನ್ನೆಲ್ಲ ವ್ಲಾಗ್‌ನಲ್ಲಿ ಹಂಚಿಕೊಳ್ಳುತ್ತೇವೆ’ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಆದರೆ ದುರದೃಷ್ಟವೆಂಬಂತೆ ಅದು ಅವರ ಜೀವನದ ಕೊನೆಯ ದಿನವಾಗಿಯೂ ಹೊರಹೊಮ್ಮಿದೆ.
2024ರಲ್ಲೇ ದುರಂತದ ಬಗ್ಗೆ ಎಚ್ಚರಿಸಿದ್ದ ಜ್ಯೋತಿಷಿ ಶರ್ಮಿಷ್ಠಾ!
ಅಹಮದಾಬಾದ್: ಶರ್ಮಿಷ್ಠಾ ಎಂಬ ಜ್ಯೋತಿಷಿಯೊಬ್ಬರು 2025ರಲ್ಲಿ ದೇಶದಲ್ಲಿ ಭೀಕರ ವಿಮಾನ ಅಪಘಾತ ಸಂಭವಿಸುವುದಾಗಿ ಕಳೆದ ವರ್ಷ ಡಿಸೆಂಬರ್‌ನಲ್ಲೇ ಎಚ್ಚರಿಸಿದ್ದರು ಎಂಬ ಅಚ್ಚರಿಯ ಸಂಗತಿ ಹೊರಬಿದ್ದಿದೆ.
ಈ ಕುರಿತು ತಾವು 2024ರ ಡಿಸೆಂಬರ್‌ನಲ್ಲೇ ಎಚ್ಚರಿಸಿದ್ದ ‘ಎಕ್ಸ್’ ಪೋಸ್ಟನ್ನು ಶರ್ಮಿಷ್ಠಾ ಪುನಃ ಹಂಚಿಕೊಂಡಿದ್ದಾರೆ. 2024ರ ಡಿ.29ರಂದು ಪೋಸ್ಟ್ ಮಾಡಿದ್ದ ಅವರು, ‘2025ರಲ್ಲಿ ವಿಮಾನಯಾನ ಕ್ಷೇತ್ರವು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಆದರೆ ವಿಮಾನ ಅಪಘಾತದ ಸುದ್ದಿಗಳು ನಮಗೆ ಆಘಾತವನ್ನುಂಟು ಮಾಡಬಹುದು. ಗುರುವು ತಿಂಗಳಿಗೆ ಸುಮಾರು 6.5 ಡಿಗ್ರಿ ವೇಗದಲ್ಲಿ ಮೃಗಶಿರ ಮತ್ತು ಆರ್ದ್ರಾದ ಮಿಥುನ ಭಾಗದಲ್ಲಿರುವುದರಿಂದ, ವಿಮಾನಯಾನವು ಅಭಿವೃದ್ಧಿ ಹೊಂದುತ್ತದೆ. ಆದರೆ ಸುರಕ್ಷತೆ ಮತ್ತು ಭದ್ರತೆ ಕಣ್ಮರೆಯಾಗುತ್ತದೆ’ ಎಂದಿದ್ದರು. ಅಲ್ಲದೆ, 2024ರ ಸೆಪ್ಟೆಂಬರ್‌ನಲ್ಲೇ, ‘2025 ಪಾಕಿಸ್ತಾನಕ್ಕೆ ಅತ್ಯಂತ ಕಠಿಣ ವರ್ಷವಾಗಲಿದೆ, ಅವರ ಸೈನ್ಯವೂ ಅಸಹಾಯಕವಾಗುತ್ತದೆ. ಇಮ್ರಾನ್ ಖಾನ್ ಕೆಲವೇ ತಿಂಗಳುಗಳಲ್ಲಿ ಜೈಲಿನಿಂದ ಹೊರಬರಬಹುದು. ಪಾಕಿಸ್ತಾನವು ಆಹಾರ ಬಿಕ್ಕಟ್ಟು, ನೈಸರ್ಗಿಕ ವಿಕೋಪ, ಅಂತರ್ಯುದ್ಧ, ಹೆಚ್ಚಿನ ಸಾವು ಇತ್ಯಾದಿಗಳನ್ನು ಎದುರಿಸಲಿದೆ. ಪಾಕಿಸ್ತಾನ ಭಾಗಗಳಾಗಿ ವಿಭಜನೆಯಾಗಲಿದೆ’ ಎಂದಿದ್ದರು. ಪಾಕಿಸ್ತಾನದ ಕುರಿತು ಅವರು ಹೇಳಿದ ಸಂಗತಿಗಳು ಬಹುತೇಕ ನಿಜವಾಗಿವೆ. ಇದೀಗ ವಿಮಾನ ಅಪಘಾತದ ಬಗ್ಗೆ ಅವರು ಮಾಡಿದ್ದ ಪೋಸ್ಟ್ ವೈರಲ್ ಆಗುತ್ತಿದೆ.
