ಆಗ್ರಾ[ಜ.04]: ಆಗ್ರಾ ಜೈಲಿನಲ್ಲಿ 9 ಮಂದಿ ಕೈದಿಗಳು ಜೈಲು ಶಿಕ್ಷೆ ಪೂರ್ಣಗೊಳಿಸಿದರೂ ದಂಡದ ಹಣವನ್ನು ಕಟ್ಟಲು ಸಾಧ್ಯವಾಗದ ಕಾರಣ 9 ಕೈದಿಗಳು ಇನ್ನೂ ಜೈಲಿನಲ್ಲೇ ಕಂಬಿ ಎಣಿಸುತ್ತಿದ್ದರು. ಆದರೆ, ಅವರಿಗೆ ಗುರುತು ಪರಿಚಯವೇ ಇಲ್ಲದ ವ್ಯಕ್ತಿಯೊಬ್ಬ ಆಪದ್ಬಾಂಧವನಂತೆ ಬಂದು ಅವರನ್ನು ಬಿಡುಗಡೆ ಮಾಡಿದ್ದಾನೆ.

ಸಾಮಾಜಿಕ ಕಾರ್ಯಕರ್ತ ಪ್ರವೇಂದ್ರ ಕುಮಾರ್‌ ಯಾದವ್‌ ಎನ್ನುವವರು ತಮ್ಮ ತಂದೆಯ ಪುಣ್ಯ ತಿಥಿಯ ನಿಮಿತ್ತ ಕೈದಿಗಳ ಮೇಲೆ ಉದಾರತೆ ತೋರಿದ್ದು, ಅವರು ಬಾಕಿ ಉಳಿಸಿಕೊಂಡಿದ್ದ 61,333 ರು. ದಂಡದ ಮೊತ್ತ ಪಾವತಿಸಿದ್ದಾರೆ.

ಹೀಗಾಗಿ ಕೈದಿಗಳಿಗೆ ಬಿಡುಗಡೆ ಭಾಗ್ಯ ಲಭ್ಯವಾಗಿದೆ. ಆದರೆ, ಬಿಡುಗಡೆ ಆದ ಕೈದಿಗಳಿಗೆ ಪ್ರವೇಂದ್ರ ಕುಮಾರ್‌ ಯಾರು ಎಂದೇ ಗೊತ್ತಿಲ್ಲ. ಅವರನ್ನು ಒಮ್ಮೆಯೂ ಭೇಟಿ ಆಗಿಲ್ಲವಂತೆ.

ಕೆಲ ಮೂಲಗಳಿಂದ ಕೈದಿಗಳನ್ನು ಬಿಡುಗಡೆ ಮಾಡಿದ್ದ ಪ್ರವೇಂದ್ರ ಕುಮಾರ್ ಓರ್ವ ಸಾಮಾಜಿಕ ಕಾರ್ಯಕರ್ತ ಎಂದು ತಿಳಿದು ಬಂದಿದೆ.