ಸ್ವಯಂ ಗಾಯದಿಂದ ಅಗ್ನಿವೀರ್ ಯೋಧ ನಿಧನ, ಅಂತ್ಯಕ್ರಿಯೆ ಅಗೌರವ ಟೀಕೆಗೆ ಸೇನೆ ಸ್ಪಷ್ಟನೆ!
ಅಗ್ನಿವೀರ್ ಬ್ಯಾಚ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧನ ನಿಧನ ಭಾರಿ ಕೋಲಾಹಲ ಸೃಷ್ಟಿಸಿದೆ. ಯೋಧನಿಗೆ ಕನಿಷ್ಠ ಮಟ್ಟದ ಗಾರ್ಡ್ ಆಫ್ ಹಾನರ್, ಅಂತ್ಯಕ್ರಿಯೆಯಲ್ಲಿ ಕನಿಷ್ಠ ಗೌರವ ನೀಡಿಲ್ಲ ಎಂದು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ವಿಪಕ್ಷಗಳು ಭಾರಿ ಟೀಕೆಗಳು ವ್ಯಕ್ತಪಡಿಸಿದೆ. ಇದರ ಬೆನ್ನಲ್ಲೇ ಭಾರತೀಯ ಸೇನೆ ಸ್ಪಷ್ಟನೆ ನೀಡಿದೆ.

ನವದೆಹಲಿ(ಅ.14) ಅಗ್ನಿವೀರ್ ಬ್ಯಾಚ್‌ನ ಮೊದಲ ಯೋಧ ಹುತಾತ್ಮರಾಗಿದ್ದಾರೆ. 19 ವರ್ಷದ ಅಮೃತ್ ಪಾಲ್ ಸಿಂಗ್ ನಿಧನ ಹಾಗೂ ಅಂತ್ಯಕ್ರೀಯೆ ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಅಗ್ನಿವೀರ್ ಯೋಧನಿಗೆ ಕನಿಷ್ಠ ಗಾರ್ಡ್ ಆಫ್ ಹಾನರ್ ನೀಡಿಲ್ಲ. ಅಂತ್ಯಕ್ರಿಯೆಯಲ್ಲಿ ಭಾರತೀಯ ಸೇನೆ ಕಡೆಯಿಂದ ಗೌರವ ನೀಡಿಲ್ಲ ಎಂದು ವಿಪಕ್ಷಗಳು ಆರೋಪ ಮಾಡಿದೆ. ಇತ್ತ ಯೋಧನ ಸಾವು ಅನುಮಾನಸ್ಪದ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ವಿಪಕ್ಷಗಳ ಟೀಕೆ, ಆರೋಪಗಳು ತೀವ್ರಗೊಳ್ಳುತ್ತಿದ್ದಂತೆ ಇದೀಗ ಭಾರತೀಯ ಸೇನೆ ಸ್ಪಷ್ಟನೆ ನೀಡಿದೆ. ಸ್ವಯಂ ಗಾಯದಿಂದ ಅಗ್ನಿವೀರ್ ಅಮೃತ್ ಪಾಲ್ ಸಿಂಗ್ ನಿಧನರಾಗಿದ್ದಾರೆ. ನಿಯಮದ ಪ್ರಕಾರ ಎಲ್ಲಾ ಗೌರವ ನೀಡಲಾಗಿದೆ ಎಂದು ಸೇನ ಹೇಳಿದೆ.
ಅಕ್ಟೋಬರ್ 11, 2023ರಂದು ಅಗ್ನಿವೀರ್ ಅಮೃತಪಾಲ್ ಸಿಂಗ್ ಮೃತಪಟ್ಟಿದ್ದಾರೆ. ರಜೌರಿ ಸೆಕ್ಟರ್‌ನಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದ ವೇಳೆ ಬಂದೂಕಿನಿಂದ ಸ್ವಯಂ ಪ್ರೇರಿತವಾಗಿ ಹಾರಿದ ಗುಂಡು ತಗಲಿ ಮೃತಪಟ್ಟಿದ್ದಾರೆ. ಈ ಕುರಿತು ನಿಖರ ಮಾಹಿತಿಗೆ ನ್ಯಾಯಾಲಯದ ವಿಚಾರಣೆ ಪ್ರಗತಿಯಲ್ಲಿದೆ. ಯೋಧನ ಪಾರ್ಥೀವ ಶರೀರವನ್ನು ಒರ್ವ ಜೂನಿಯರ್ ಕಮಿಷನರ್ ಆಫೀಸರ್, ನಾಲ್ವರು ಇತರ ರ್ಯಾಂಕ್ ಅಧಿಕಾರಿಗಳ ಅಗ್ನಿವೀರ್ ಘಟಕ ನೇಮಕ ಮಾಡಿರುವ ಸಿವಿಲ್ ಆ್ಯಂಬುಲೆನ್ಸ್ ಮೂಲಕ ಸಾಗಿಸಲಾಗಿದೆ. ಈ ವೇಳೆ ಜೊತೆಗಿದ್ದ ಸೇನಾ ಸಿಬ್ಬಂದಿ ಅಂತ್ಯ ಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ತರಬೇತಿ ವೇಳೆ ಅರ್ಧದಲ್ಲೇ ಕೆಲವು ಅಗ್ನಿವೀರರ ನಿರ್ಗಮನ: ಶೇ.25ರ ಬದಲು ಶೇ.50 ಅಗ್ನಿವೀರರು ಕಾಯಂ?
ಯೋಧನ ಸಾವಿಗೆ ಸ್ವಯಂ ಗಾಯ ಕಾರಣವಾಗಿದೆ. ಹೀಗಾಗಿ ಅಸ್ತಿತ್ವದಲ್ಲಿರುವ ಭಾರತೀಯ ಸೇನೆ ನೀತಿಗೆ ಅನುಗುಣವಾಗಿ ಯಾವುದೇ ಮಿಲಿಟರಿ ಅಂತ್ಯಕ್ರಿಯೆ ಹಾಗೂ ಗಾರ್ಡ್ ಆಫ್ ಹಾನರ್ ಒದಗಿಸಲಾಗಿಲ್ಲ ಎಂದು ಭಾರತೀಯ ಸೇನೆ ಸ್ಪಷ್ಟಪಡಿಸಿದೆ. ಇದೇ ವೇಳೆ ಯೋಧನ ಕುಟುಂಬಸ್ಥರಿಗೆ ಭಾರತೀಯ ಸೇನೆ ಸಂತಾಪ ಸೂಚಿಸಿದೆ. ಸಿಬ್ಬಂದಿಗಳು ನಾಗರೀಕ ಉಡುಪಿನಲ್ಲಿದ್ದರು. ಇದು ಅಸ್ತಿತ್ವದಲ್ಲಿರುವ ನೀತಿಗೆ ಅನುಗುಣವಾಗಿದೆ ಎಂದು ಭಾರತೀಯ ಸೇನೆ ಸ್ಪಷ್ಟಪಡಿಸಿದೆ.
ಇಂಡಿ ಒಕ್ಕೂಟದ ಹಲವು ಮುಖಂಡರು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ದ ಆಕ್ರೋಶ ಹೊರಹಾಕಿದ್ದರು. ಭಾರತ ಪಾಕಿಸ್ತಾನ ಪಂದ್ಯಕ್ಕೆ ಡ್ಯಾನ್ಸ್ ಮಾಡಿಸಿ, ಪಾಕ್ ಆಟಗಾರರಿಗೆ ಅದ್ಧೂರಿ ಸತ್ಕಾರ ನೀಡುವುದರಲ್ಲೇ ಬ್ಯೂಸಿಯಾಗಿರುವ ಸರ್ಕಾರ, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯೋಧನ ಮರೆತಿದೆ. ಯೋಧನಿಗೆ ಕನಿಷ್ಠ ಗೌರವ ನೀಡಿಲ್ಲ ಎಂದು ಹಲವರು ಸಾಮಾಜಿಕ ಮಾಧ್ಯಮದ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಈ ಕುರಿತ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
Bengaluru: ಪ್ಯಾರಾಚೂಟ್ ರೆಜಿಮೆಂಟ್‌ನ ಮೊದಲ ಅಗ್ನಿವೀರರ ಮೊದಲ ಬ್ಯಾಚ್ ನಿರ್ಗಮನ