ತರಬೇತಿ ವೇಳೆ ಅರ್ಧದಲ್ಲೇ ಕೆಲವು ಅಗ್ನಿವೀರರ ನಿರ್ಗಮನ: ಶೇ.25ರ ಬದಲು ಶೇ.50 ಅಗ್ನಿವೀರರು ಕಾಯಂ?
ಕೇಂದ್ರ ಸರ್ಕಾರವು ಸೇನೆಯಲ್ಲಿ ಯುವಕರ ನೇಮಕಕ್ಕೆ ತಂದಿದ್ದ ಅಗ್ನಿವೀರ ಯೋಜನೆಗೆ ಕೊಂಚ ಹಿನ್ನಡೆ ಆಗಿದೆ. ಅಗ್ನಿವೀರರಾಗಿ (ಯೋಧರಾಗಿ) ನೇಮಕಗೊಂಡಿದ್ದ ಹಲವು ಯುವಕರು ತರಬೇತಿ ವೇಳೆಯೇ ಸೇನೆಯನ್ನು ಅರ್ಧಕ್ಕೇ ಬಿಟ್ಟು ಹೋಗಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ನವದೆಹಲಿ: ಕೇಂದ್ರ ಸರ್ಕಾರವು ಸೇನೆಯಲ್ಲಿ ಯುವಕರ ನೇಮಕಕ್ಕೆ ತಂದಿದ್ದ ಅಗ್ನಿವೀರ ಯೋಜನೆಗೆ ಕೊಂಚ ಹಿನ್ನಡೆ ಆಗಿದೆ. ಅಗ್ನಿವೀರರಾಗಿ (ಯೋಧರಾಗಿ) ನೇಮಕಗೊಂಡಿದ್ದ ಹಲವು ಯುವಕರು ತರಬೇತಿ ವೇಳೆಯೇ ಸೇನೆಯನ್ನು ಅರ್ಧಕ್ಕೇ ಬಿಟ್ಟು ಹೋಗಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ (Jai Ram Ramesh) ಈ ಬಗ್ಗೆ ಕಿಡಿಕಾರಿದ್ದಾರೆ. ‘ಸೇನೆ ಸೇರಬೇಕು ಎಂದು ಈ ಹಿಂದೆ ಯುವಕರು ಕನಸು ಕಾಣುತ್ತಿದ್ದರು. ದೇಶ ಸೇವೆ ಮಾಡುವ ಅವರ ಬದ್ಧತೆಗೆ ಮೆಚ್ಚಿ ಸರ್ಕಾರವು ಅವರಿಗೆ ಸೇವಾ ಭದ್ರತೆ ಹಾಗೂ ಇತರ ಸೌಲಭ್ಯ ನೀಡುತ್ತಿತ್ತು. ಆದರೆ ಅಗ್ನಿವೀರ ಯೋಜನೆ ಮೂಲಕ ಯುವಕರ ಕನಸು ನುಚ್ಚುನೂರು ಮಾಡಲಾಗಿದೆ. ಇಂದು ಅದರ ಫಲಿತಾಂಶ ಢಾಳಾಗಿ ಕಾಣುತ್ತಿದೆ ಎಂದಿದ್ದಾರೆ.
ಆಗಿದ್ದೇನು?:
ಕಳೆದ ಜ.1ರಂದು, ಮೊದಲ ಬ್ಯಾಚ್‌ನಲ್ಲಿ 19 ಸಾವಿರಕ್ಕೂ ಹೆಚ್ಚು ಅಗ್ನಿವೀರಗಳನ್ನು(Agniveer) ನೇಮಿಸಿಕೊಳ್ಳಲಾಯಿತು. ಅವರಿಗೆ ದೇಶಾದ್ಯಂತ 40 ವಿವಿಧ ಕೇಂದ್ರಗಳಲ್ಲಿ ತರಬೇತಿ ನೀಡಲಾಯಿತು. 6 ತಿಂಗಳ ತರಬೇತಿ ಅವಧಿಯ ನಂತರ ಅವರನ್ನು ವಿವಿಧ ಸೇನಾ ಘಟಕಗಳಿಗೆ 4 ವರ್ಷದ ಮಟ್ಟಿಗೆ ನಿಯೋಜಿಸಲಾಗುತ್ತದೆ. ಒಟ್ಟಾರೆ ಅಗ್ನಿವೀರರ ಪೈಕಿ ಶೇ.25 ಜನರನ್ನು ಮಾತ್ರ 4 ವರ್ಷ ನಂತರ ಕಾಯಂ ಮಾಡಲಾಗುತ್ತದೆ. ನಿಯಮಾನುಸಾರ ಸೇನೆಯಲ್ಲಿ ತರಬೇತಿಯನ್ನು ಮಧ್ಯದಲ್ಲೇ ಬಿಡುವವಂತಿಲ್ಲ. ಆದರೆ ಬೇರೆ ಅವಕಾಶಗಳು ಲಭಿಸಿದವು ಎಂದು ಮೊದಲ ಬ್ಯಾಚ್‌ನ ಕೆಲವರು ಅರ್ಧಕ್ಕೇ ತರಬೇತಿ ಬಿಟ್ಟು ಹೋಗಿದ್ದಾರೆ. ಇನ್ನು ಕೆಲವರು ಅನಾರೋಗ್ಯದ ಕಾರಣ ನೀಡಿ 30 ದಿನಕ್ಕೂ ಹೆಚ್ಚು ಕಾಲದಿಂದ ಗೈರು ಹಾಜರಾಗಿದ್ದಾರೆ. ಈ ರೀತಿ 30 ದಿನ ಗೈರಾದರೆ ಅವರಿಗೆ ಗೇಟ್ ಪಾಸ್ (Gate Pass) ನೀಡಲಾಗುತ್ತದೆ. ಮೊದಲ ಬ್ಯಾಚಲ್ಲಿ 50 ಮಂದಿ ಕೆಲಸ ಬಿಟ್ಟಿದ್ದಾರೆ. 2ನೇ ಬ್ಯಾಚ್‌ನಲ್ಲೂ ಇದೇ ಸ್ಥಿತಿ ಇದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮವೊಂದು ವರದಿ ಮಾಡಿದೆ. ಆದರೆ ಇದಕ್ಕೆ ಕಿಡಿಕಾರಿರುವ ಸೇನೆ, ನೇಮಕಾತಿ ನಿಯಮದಲ್ಲಿ ಇದ್ದಂತೆ ತರಬೇತಿ ವೆಚ್ಚವನ್ನು ಅಗ್ನಿವೀರರಿಂದಲೇ ವಸೂಲು ಮಾಡಲು ನಿರ್ಧರಿಸಿದೆ ಎಂದು ವರದಿಯಾಗಿದೆ.
Bengaluru: ಪ್ಯಾರಾಚೂಟ್ ರೆಜಿಮೆಂಟ್‌ನ ಮೊದಲ ಅಗ್ನಿವೀರರ ಮೊದಲ ಬ್ಯಾಚ್ ನಿರ್ಗಮನ
ಶೇ.25ರ ಬದಲು ಶೇ.50 ಅಗ್ನಿವೀರರು ಕಾಯಂ?
ನವದೆಹಲಿ: ಸೇನೆಯಲ್ಲಿ ಕಾಯಂ ಅಲ್ಲದ ಯೋಧನ ಹುದ್ದೆಯಾದ ‘ಅಗ್ನಿವೀರ’ರ ನೇಮಕಾತಿ ನಿಯಮಗಳಲ್ಲಿ ಕೇಂದ್ರ ಸರ್ಕಾರ ಕೊಂಚ ಬದಲಾವಣೆಗೆ ಮುಂದಾಗಿದೆ. 4 ವರ್ಷ ಸೇವೆ ಸಲ್ಲಿಸಿ ನಿರ್ಗಮಿಸುವ ಅಗ್ನಿವೀರರ ಪೈಕಿ ಶೇ.25ರ ಬದಲು ಶೇ.50ರಷ್ಟು ಜನರನ್ನು ಕಾಯಂ ಮಾಡುವ ಪ್ರಸ್ತಾವ ಸರ್ಕಾರದ ಮುಂದಿದೆ ಎಂದು ತಿಳಿದು ಬಂದಿದೆ. ಇದಲ್ಲದೆ, ಈವರೆಗೆ ನೇಮಕಕ್ಕೆ ಇದ್ದ 21ರ ವಯೋಮಿತಿಯನ್ನು 23 ವರ್ಷಕ್ಕೆ ಹೆಚ್ಚಿಸಲೂ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಗೊತ್ತಾಗಿದೆ.
ಅಗ್ನವೀರ ಯೋಜನೆಯಲ್ಲಿ ಸಾಕಷ್ಟು ನೇಮಕ ಆಗುವ ಕಾರಣ, 2026ರವರೆಗೆ ಕಾಯಂ ಯೋಧರ ನೇಮಕ ಪ್ರಮಾಣವನ್ನು ಕಡಿಮೆ ಮಾಡಲು ಸರ್ಕಾರ ಈ ಹಿಂದೆ ನಿರ್ಧರಿಸಿತ್ತು. ಆದರೆ ಈ ರೀತಿ ಮಾಡುವುದರಿಂದ ಭವಿಷ್ಯದಲ್ಲಿ ಕಾಯಂ ಯೋಧರ ಕೊರತೆ ಕಾಡಬಹುದು ಎಂಬ ಚಿಂತೆ ಸೇನಾಪಡೆಗಳಲ್ಲಿ ಇದೆ ಎನ್ನಲಾಗಿದೆ. ಹೀಗಾಗಿ ಶೇ.25ರ ಬದಲು ಶೇ.50ರಷ್ಟುಅಗ್ನಿವೀರರನ್ನು ಕಾಯಂಗೊಳಿಸುವ ಹಾಗೂ ನೇಮಕಾತಿ ವಯೋಮಿತಿಯನ್ನು 21ರಿಂದ 23ಕ್ಕೆ ಹೆಚ್ಚಿಸುವ ಸಿದ್ಧತೆಯಲ್ಲಿ ಸರ್ಕಾರ ಇದೆ ಎಂದು ದಿಲ್ಲಿ ಮಟ್ಟದ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.
ಇದೇ ವೇಳೆ 4 ವರ್ಷ ಕೆಲಸ ಮಾಡಿ ನಿರ್ಗಮಿಸುವ ಅಗ್ನಿವೀರರನ್ನು ಸೇನೆಯಲ್ಲಿನ ವಿಮಾನಯಾನ, ಇಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಮತ್ತು ಇಂಥದ್ದೇ ಇತರ ತಾಂತ್ರಿಕ ವಿಭಾಗಗಳಿಗೆ ನಿಯೋಜಿಸಿಕೊಳ್ಳುವ ಇರಾದೆ ಸೇನೆಗಿದೆ ಎಂದು ಗೊತ್ತಾಗಿದೆ. ಸದ್ಯದ ಮಟ್ಟಿಗೆ 2022 ಮತ್ತು 2026 ರ ನಡುವೆ ಸುಮಾರು 1.75 ಲಕ್ಷ ಅಗ್ನಿವೀರರನ್ನು ನೇಮಕ ಮಾಡಿಕೊಳ್ಳುವ ನಿರೀಕ್ಷೆಯಿದೆ. ಆದರೆ ಮುಂದಿನ ದಿನಗಳಲ್ಲಿ ಸೈನಿಕರ ಕೊರತೆ ಆಗಬಾರದು ಎಂಬ ಕಾರಣಕ್ಕೆ ನೇಮಕಾತಿ ಸಂಖ್ಯೆಯನ್ನು ಸರ್ಕಾರ ಹೆಚ್ಚಿಸಲೂಬಹುದು ಎಂದು ಮೂಲಗಳು ಹೇಳಿವೆ. ಅಗ್ನಿವೀರ ನೇಮಕ ನಿಯಮಗಳ ಬದಲಾವಣೆ ಅಧಿಕಾರ ರಕ್ಷಣಾ ಸಚಿವಾಲಯಕ್ಕಿದೆ. ಅದು ಇತರ ಒಪ್ಪಿಗೆಗಳಂತೆ ಸಂಪುಟ ಅನುಮೋದನೆಗಾಗಿ ಕಾಯುವ ಅಗತ್ಯವಿರುವುದಿಲ್ಲ.
ವಾಯುಸೇನೆಗೆ ಸಮರ್ಪಣೆಗೊಂಡ ಮೊದಲ ಅಗ್ನಿ ವೀರರು, ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಕುಂದಾನಗರಿ!
ಭಾರಿ ಕೊರತೆ:
ಸೇನೆಯಲ್ಲಿ 1,04,053 ಸಿಬ್ಬಂದಿ, ನೌಕಾಪಡೆಯಲ್ಲಿ 12,431 ಮತ್ತು ವಾಯುಪಡೆಯಲ್ಲಿ 5,471 ಸಿಬ್ಬಂದಿ ಕೊರತೆಯಿದೆ ಎಂದು ಸರ್ಕಾರ 2021 ಡಿಸೆಂಬರ್‌ನಲ್ಲಿ ಸಂಸತ್ತಿಗೆ ತಿಳಿಸಿತ್ತು. ಅಭ್ಯರ್ಥಿಯನ್ನು ಆಯ್ಕೆ ಮಾಡಿ ತರಬೇತಿ ನೀಡಲು ಸುಮಾರು 1.5 ವರ್ಷ ಹಿಡಿಯುತ್ತದೆ.