ಅಗ್ನಿಪಥ್ ಯೋಜನೆಯ ಬಗ್ಗೆ ದೇಶಾವ್ಯಾಪಿ ಆಕ್ರೋಶ ವ್ಯಕ್ತವಾಗಿದೆ. ಬಿಹಾರ, ರಾಜಸ್ಥಾನ, ಹರಿಯಾಣ ಹಾಗೂ ಉತ್ತರಾಖಂಡ ರಾಜ್ಯಗಳಲ್ಲಿ ಸಾವರ್ಜನಿಕ ಆಸ್ತಿಪಾಸ್ತಿಗಳನ್ನು ಹಾನಿ ಮಾಡಿದ ಘಟನೆಯೂ ನಡೆದಿದೆ. ಅದರಲ್ಲೂ ಬಿಹಾರ ರಾಜ್ಯದಲ್ಲಿ ಪರಿಸ್ಥಿತಿ ಕೈಮೀರುವ ಹಂತದಲ್ಲಿದ್ದು, ಅದರಲ್ಲೂ ರೈಲ್ವೆಯ ಟಿಕೆಟ್ ಕಲೆಕ್ಟರ್‌ನಿಂದ 3 ಲಕ್ಷ ರೂಪಾಯಿಯನ್ನು ಪ್ರತಿಭಟನಕಾರರು ದೋಚಿದ ಪ್ರಕರಣ ನಡೆದಿದೆ.

ಪಾಟ್ನಾ (ಜೂನ್ 17): ಅಗ್ನಿಪಥ್ ಯೋಜನೆಯ (Agnipath Scheme) ಕುರಿತಾಗಿ ದೇಶದ ಯುವ ಜನತೆಯ ಪ್ರತಿಭಟನೆಯು (Protest) ರೂಪ ಲೂಟಿಯಲ್ಲಿ ಬದಲಾಗುತ್ತಿದೆ. ಬಿಹಾರದಲ್ಲಿ(Bihar) ದೊಡ್ಡ ಮಟ್ಟದ ಪ್ರತಿಭಟನೆಗಳು ನಡೆಯುತ್ತಿದ್ದು, ಕೆಲವೆಡೆ ಪ್ರತಿಭಟನಾಕಾರರು ಲೂಟಿ ಎಸೆಗಿದ ಪ್ರಕರಣಗಳೂ ನಡೆದಿವೆ ಎಂದು ವರದಿಯಾಗಿದೆ.

ಬಿಹಾರದ ಬೆಹಿಯಾ ರೈಲ್ವೆ ನಿಲ್ದಾಣದಲ್ಲಿ (Behea railway station) ರೈಲ್ವೆ ಟಿಕೆಟ್ ಕಲೆಕ್ಟರ್‌ನಿಂದ 3 ಲಕ್ಷ ರೂಪಾಯಿಯನ್ನು ಪ್ರತಿಭಟನಾಕಾರರು ದೋಚಿದ್ದಾರೆ ಎಂದು ವರದಿಯಾಗಿದೆ. ಭೋಜ್ ಪುರ (Bhojpur) ಜಿಲ್ಲೆಯ ಬೆಹಿಯಾದಲ್ಲಿ ಈ ಘಟನೆ ನಡೆದಿದೆ. ರೈಲ್ವೆ ನಿಲ್ದಾಣದ ಬಳಿಯಿದ್ದ ಟಿಕೆಟ್ ಕೌಂಟರ್ ಬಳಿ ನಿಂತಿದ್ದ ಕಲೆಕ್ಟರ್ ಬಳಿಯಿಂದ 3 ಲಕ್ಷ ರೂಪಾಯಿಯನ್ನು ದೋಚಿಕೊಂಡು ಹೋಗಿದ್ದಾರೆ. ಟಿಕೆಟ್ ಕಲೆಕ್ಟರ್ ಮಾತ್ರವಲ್ಲದೆ ಜಿಆರ್‌ಪಿ (GRP) ಕಚೇರಿಯಿಂದಲೂ ಹಣವನ್ನು ಲೂಟಿ ಮಾಡಲಾಗಿದೆ ಎಂದು ವರದಿಯಾಗಿವೆ.

ಇದು ಪ್ರತಿಭಟನೆಯ ಕುರಿತಾದ ಗಂಭೀರ ಆರೋಪವಾಗಿದೆ. ಇಲ್ಲಿಯವರೆಗೂ ರೈಲುಗಳಿಗೆ ಹಾಗೂ ಸರ್ಕಾರಿ ಕಚೇರಿಗಳಿಗೆ ಬೆಂಕಿ ಹಚ್ಚಿದ ಪ್ರಕರಣಗಳು ವರದಿಯಾಗುತ್ತಿದ್ದವು. ಇದೇ ಮೊದಲ ಬಾರಿಗೆ ಪ್ರತಿಭಟನಾಕಾರರು ಲೂಟಿಗೆ ಇಳಿದಿರುವ ವರದಿ ಸುದ್ದಿಯಾಗಿದೆ. ಇಸ್ಲಾಂಪುರ ರೈಲ್ವೇ ನಿಲ್ದಾಣದಲ್ಲಿ ಅಗ್ನಿಪಥ ಯೋಜನೆ ವಿರೋಧಿಸಿ, ಉದ್ರಿಕ್ತ ವಿದ್ಯಾರ್ಥಿಗಳು ನಿಲ್ದಾಣದಲ್ಲಿ ನಿಲ್ಲಿಸಿದ್ದ ಮಗಧ ಎಕ್ಸ್‌ಪ್ರೆಸ್‌ನ 4 ಬೋಗಿಗಳಿಗೆ ಬೆಂಕಿ ಹಚ್ಚಿದ್ದಾರೆ. ಈ ವೇಳೆ ಕಲ್ಲು ತೂರಾಟವೂ ನಡೆದಿದೆ. ಠಾಣೆಯ ಸುತ್ತಮುತ್ತ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

ಉತ್ತರ ಪ್ರದೇಶದಲ್ಲಿ 100 ಮಂದಿಯ ಬಂಧನ: ಉತ್ತರ ಪ್ರದೇಶದಲ್ಲಿ ಅಗ್ನಿಪಥ್ ಯೋಜನೆಯ ಕುರಿತಾಗಿ ಪ್ರತಿಭಟನೆ ನಡೆಸಿದ 100ಕ್ಕೂ ಅಧಿಕ ಉದ್ರಿಕ್ತರನ್ನು ಪೊಲೀಸರು ಬಂಧಿಸಿದ್ದಾರೆ. ಬಲಿಯಾ ಜಿಲ್ಲೆಯಲ್ಲಿ ನಡೆದ ಪ್ರತಿಭಟನೆಯ ವೇಳೆ ಸಾರ್ವಜನಿಕ ಆಸ್ತಿ ಪಾಸ್ತಿಯನ್ನು ಹಾಳು ಮಾಡಿದ ಘಟನೆಗಳು ನಡೆದಿತ್ತು. ಸಿಸಿಟಿವಿ ಮೂಲಕ ಅವರನ್ನು ಪೊಲೀಸರು ಗುರುತಿಸಿ ಬಂಧನ ಮಾಡಿದ್ದಾರೆ. ಪ್ರತಿಭಟನೆ ಅವರ ಹಕ್ಕು, ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡಿದವರನ್ನು ಸುಮ್ಮನೆ ಬಿಡೋದಿಲ್ಲ ಎಂದು ಬಲಿಯಾ ಜಿಲ್ಲಾಧಿಕಾರಿ ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ಬಿಜೆಪಿ ನಾಯಕನ ಕಾರ್‌ಗೆ ಬೆಂಕಿ: ಉತ್ತರ ಪ್ರದೇಶದ ಅಲಿಘರ್ ಜಿಲ್ಲೆಯ ಖೈರ್ ತೆಹ್ಸಿಲ್‌ನ ಜತ್ತರಿ ನಗರ ಪಂಚಾಯತ್‌ನ ಬಿಜೆಪಿ ಪಕ್ಷದ ಅಧ್ಯಕ್ಷ ರಾಜಪಾಲ್ ಸಿಂಗ್ ಅವರ ಸ್ಕಾರ್ಪಿಯೋ ವಾಹನವನ್ನು ಪ್ರತಿಭಟನಾಕಾರರು ಬೆಂಕಿ ಹಾಕಿ ಸುಟ್ಟಿದ್ದಾರೆ. ದೇಶಾದ್ಯಂತ ಅಗ್ನಿಪಥ್ ಮೇಲಿನ ಕೋಪ ಹೆಚ್ಚುತ್ತಿದೆ. ಹಿಂಸಾಚಾರದ ಬಿಸಿ 12 ರಾಜ್ಯಗಳಿಗೆ ತಲುಪಿದೆ. ಪ್ರತಿಭಟನೆಯಲ್ಲಿ ಇದುವರೆಗೆ 1 ಸಾವನ್ನಪ್ಪಿದ್ದು, 13 ಮಂದಿ ಗಾಯಗೊಂಡಿದ್ದಾರೆ. ರೈಲ್ವೆಯು 164 ರೈಲುಗಳನ್ನು ರದ್ದುಗೊಳಿಸಿದ್ದು, 238 ರೈಲುಗಳ ಸಂಚಾರದ ಮೇಲೆ ಪರಿಣಾಮ ಬೀರಿದೆ.

ಅಗ್ನಿಪಥ ಸೇನಾ ಯೋಜನೆ ವಿರುದ್ಧ ಪ್ರತಿಭಟನೆ, 200ಕ್ಕೂ ಹೆಚ್ಚು ರೈಲು ಸಂಚಾರ ಸ್ಥಗಿತ!

ಬಿಹಾರದ ವಿರೋಧ ಪಕ್ಷದ ನಾಯಕ ಮತ್ತು ಆರ್‌ಜೆಡಿ ನಾಯಕ (RJD Leader) ತೇಜಸ್ವಿ ಯಾದವ್ (Tejasvi yadav ) ಅವರು ಬಿಹಾರ ವಿಧಾನಸಭೆಯಲ್ಲಿ 'ಅಗ್ನಿಪಥ್' ಯೋಜನೆಯನ್ನು ಟಾರ್ಗೆಟ್ ಮಾಡಿದ್ದಾರೆ. 4 ವರ್ಷಗಳ ಒಪ್ಪಂದದ ಮೇರೆಗೆ ಸೇರ್ಪಡೆಯಾದ ಅಗ್ನಿವೀರರಿಗೆ ಸಾಮಾನ್ಯ ಸೈನಿಕರಂತೆ ವರ್ಷದಲ್ಲಿ 90 ದಿನಗಳ ರಜೆ ಸಿಗುತ್ತದೆಯೇ ಅಥವಾ ಇಲ್ಲವೇ? ಅಗ್ನಿಪಥ ಯೋಜನೆ ಸಮರ್ಥನೆ ಆಗಿದ್ದರೆ ಅದರಲ್ಲಿ ಗುತ್ತಿಗೆ ಆಧಾರದ ಮೇಲೆ ಅಧಿಕಾರಿಗಳನ್ನು ಏಕೆ ನೇಮಿಸಬಾರದು ಎಂದು ತೇಜಸ್ವಿ ಪ್ರಶ್ನೆ ಎತ್ತಿದರು. 

ಅಗ್ನಿಪಥ್ ಹಿಂಸಾಚಾರದ ನಡುವೆ ಮೂರೂ ಸೇನಾಪಡೆಗಳ ನೇಮಕಾತಿ ಘೋಷಣೆ!

ಅಗ್ನಿಪಥ್ ಯೋಜನೆ ವಿರುದ್ಧ ಜಮ್ಮು ಮತ್ತು ಕಾಶ್ಮೀರದಲ್ಲೂ (Jammu and Kashmir) ಪ್ರತಿಭಟನೆಗಳು ನಡೆಯುತ್ತಿವೆ. ಜಮ್ಮು-ಪಠಾಣ್‌ಕೋಟ್ ( Jammu-Pathankot highway ) ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಅದನ್ನು ಪ್ರತಿಭಟನಾಕಾರರು ಬಂದ್ ಮಾಡಿದ್ದಾರೆ.