ಒಡಿಶಾದ ಕರಾವಳಿ ದೇಶೀಯವಾಗಿ ಅಭಿವೃದ್ಧಿ ಪಡಿಸಿದ, ಸಣ್ಣ ವ್ಯಾಪ್ತಿಯ, ಅಣ್ವಸ್ತ್ರ ಸಿಡಿತಲೆ ಹೊತ್ತೊಯ್ಯಬಲ್ಲ ಬ್ಯಾಲಿಸ್ಟಿಕ್ ಕ್ಷಿಪಣಿಯ ಯಶಸ್ವಿ ಉಡಾವಣೆಗೆ ಸಾಕ್ಷಿಯಾಯಿತು
ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ
ಒಡಿಶಾ: ಗುರುವಾರದಂದು ಒಡಿಶಾದ ಕರಾವಳಿ ದೇಶೀಯವಾಗಿ ಅಭಿವೃದ್ಧಿ ಪಡಿಸಿದ, ಸಣ್ಣ ವ್ಯಾಪ್ತಿಯ, ಅಣ್ವಸ್ತ್ರ ಸಿಡಿತಲೆ ಹೊತ್ತೊಯ್ಯಬಲ್ಲ ಬ್ಯಾಲಿಸ್ಟಿಕ್ ಕ್ಷಿಪಣಿಯ ಯಶಸ್ವಿ ಉಡಾವಣೆಗೆ ಸಾಕ್ಷಿಯಾಯಿತು. ಗುರುವಾರ ಬೆಳಗ್ಗೆ 8:30ರ ಸಮಯದಲ್ಲಿ, ಕಡಿಮೆ ವ್ಯಾಪ್ತಿಯ ಅಣ್ವಸ್ತ್ರ ಸಿಡಿತಲೆ ಒಯ್ಯುವ ಅಗ್ನಿ-1 ಕ್ಷಿಪಣಿಯನ್ನು ಈ ಮೊದಲು ವೀಲರ್ ದ್ವೀಪ ಎಂದು ಕರೆಯಲ್ಪಡುತ್ತಿದ್ದ, ಡಾ. ಎಪಿಜೆ ಅಬ್ದುಲ್ ಕಲಾಂ ದ್ವೀಪದ ಪ್ಯಾಡ್ 4ನಲ್ಲಿದ್ದ ಮೊಬೈಲ್ ಲಾಂಚರ್‌ನಿಂದ ಉಡಾಯಿಸಲಾಯಿತು.
ಈ ಕ್ಷಿಪಣಿಯ ಉಡಾವಣೆ ತಮ್ಮ ಕಾರ್ಯಾಚರಣಾ ಸಿದ್ಧತೆಯನ್ನು ಪರಿಶೀಲಿಸುವ ಸಲುವಾಗಿ, ಭಾರತೀಯ ಸೇನೆಯ ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್ ಕೈಗೊಳ್ಳುವ ಅಭ್ಯಾಸದ ಅಂಗವಾಗಿ ನೆರವೇರಿಸಲಾಯಿತು. ರಕ್ಷಣಾ ಇಲಾಖೆಯ ಅಧಿಕಾರಿಗಳು ಈ ಪರೀಕ್ಷಾ ಉಡಾವಣೆಯನ್ನು 'ಸಂಪೂರ್ಣ ಯಶಸ್ವಿ' ಎಂದು ಘೋಷಿಸಿದ್ದು, ಕಾರ್ಯಾಚರಣೆಯು ಎಲ್ಲ ಗುರಿಗಳನ್ನು ಸಮರ್ಥವಾಗಿ ಪೂರೈಸಿದೆ ಎಂದರು.
ಇದು ಎಲ್ಲ ಗುರಿಗಳನ್ನು ಯಶಸ್ವಿಯಾಗಿ ಈಡೇರಿಸಿದ ಅಗ್ನಿ-1 ಕ್ಷಿಪಣಿಯ ಹದಿನೆಂಟನೇ ಆವೃತ್ತಿಯ ಉಡಾವಣೆಯಾಗಿತ್ತು. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಓ) ಮೂಲಗಳು ನಾವು ಈಗಾಗಲೇ ಭಾರತದ ಅತ್ಯಧಿಕ ವ್ಯಾಪ್ತಿಯ ಅಣ್ವಸ್ತ್ರ ಕ್ಷಿಪಣಿ ಅಗ್ನಿ-5 ಅನ್ನು ಜನವರಿ 18, 2023ರಂದು ಪರೀಕ್ಷಿಸಿರುವುದಾಗಿ ತಿಳಿಸಿವೆ.
ಟಾರ್ಗೆಟ್ ಅಮೆರಿಕಾ, ಕ್ಷಿಪಣಿ ಉಡಾಯಿಸಿ ನಡುಕ ಹುಟ್ಟಿಸಿದ ಕಿಂಗ್ ಜಾಂಗ್ ಉನ್!
ಅಗ್ನಿ-1 ಕ್ಷಿಪಣಿಯ ಕುರಿತ ವಿಚಾರಗಳು
• ಅಗ್ನಿ-1 ಕಡಿಮೆ ವ್ಯಾಪ್ತಿಯ, ಅಣ್ವಸ್ತ್ರ ಸಾಮರ್ಥ್ಯವುಳ್ಳ ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದ್ದು, 700 ಕಿಲೋಮೀಟರ್‌ಗೂ ಹೆಚ್ಚಿನ ವ್ಯಾಪ್ತಿ ಹೊಂದಿದೆ.
• 2004ರಲ್ಲಿ ದೇಶೀಯವಾಗಿ ನಿರ್ಮಿಸಿದ, ಏಕ ಹಂತದ ಭೂಮಿಯಿಂದ ಭೂಮಿಗೆ ದಾಳಿ ನಡೆಸಬಲ್ಲ ಅಗ್ನಿ-1 ಕ್ಷಿಪಣಿಯನ್ನು ಭಾರತೀಯ ಸೇನಾಪಡೆಗಳ ಬತ್ತಳಿಕೆಗೆ ಸೇರಿಸಲಾಯಿತು.
• ಸೇನಾಪಡೆಗಳು ತಮ್ಮ ಕಡ್ಡಾಯ ತರಬೇತಿ ಕಾರ್ಯಾಚರಣಾ ಅಂಗವಾಗಿ ಹೈಟೆಕ್ ಮಿಸೈಲ್ ಪ್ರೊಪಲ್ಷನ್ ವ್ಯವಸ್ಥೆಯನ್ನು ಇತ್ತೀಚೆಗೆ ಬಿಡುಗಡೆಗೊಳಿಸಿವೆ. ಈ ವ್ಯವಸ್ಥೆ ಘನ ರಾಕೆಟ್ ಇಂಧನ ಆಧಾರಿತವಾಗಿದೆ.
• ಅಗ್ನಿ-1 ಒಂದು ಅತ್ಯಾಧುನಿಕ ಕ್ಷಿಪಣಿಯಾಗಿದ್ದು, ಇದರಲ್ಲಿ ಸಂಚರಣ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಇದು ಕ್ಷಿಪಣಿ ಅತ್ಯಂತ ನಿಖರವಾಗಿ ತನ್ನ ಉದ್ದೇಶಿತ ಗುರಿಯನ್ನು ತಲುಪುವಂತೆ ಮಾಡಲು ಸಹಾಯಕವಾಗಿದೆ.
• ರಕ್ಷಣಾ ಇಲಾಖೆಯ ಮೂಲಗಳು ಅಗ್ನಿ-1 ಕ್ಷಿಪಣಿಯ ಉಡಾವಣೆಯನ್ನು ಕೂಲಂಕಷವಾಗಿ ಪರಿಶೀಲಿಸಿವೆ. ಇದಕ್ಕಾಗಿ ವಿವಿಧ ರೀತಿಯ ಅತ್ಯಾಧುನಿಕ ರೇಡಾರ್‌ಗಳು, ಟೆಲಿಮೆಟ್ರಿ ವೀಕ್ಷಣಾ ಬಿಂದುಗಳು, ಇಲೆಕ್ಟ್ರೋ ಆಪ್ಟಿಕ್ ಉಪಕರಣಗಳು ಹಾಗೂ ನೌಕಾಪಡೆಯ ಹಡಗುಗಳನ್ನು ಬಳಸಿಕೊಂಡು, ಕ್ಷಿಪಣಿಯ ಉಡಾವಣಾ ಸ್ಥಾನದಿಂದ ಗುರಿಯ ತನಕದ ಪಯಣವನ್ನು ಅತ್ಯಂತ ನಿಖರವಾಗಿ ಗುರುತಿಸಲಾಗಿದೆ.
• ಭಾರತೀಯ ಸೇನಾಪಡೆಗಳು ಈಗಾಗಲೇ ಅಗ್ನಿ-1 ಕ್ಷಿಪಣಿಯನ್ನು ತಮ್ಮ ಆಯುಧ ಸಂಗ್ರಹಕ್ಕೆ ಸೇರ್ಡೆಗೊಳಿಸಿದ್ದು, ವ್ಯಾಪ್ತಿ, ನಿಖರತೆ, ಹಾಗೂ ಮಾರಕತೆಗೆ ಸಂಬಂಧಿಸಿದಂತೆ ಕ್ಷಿಪಣಿಯ ಪ್ರದರ್ಶನವನ್ನು ಗಮನಿಸಿವೆ ಎಂದು ರಕ್ಷಣಾ ಇಲಾಖೆಯ ಮೂಲಗಳು ವರದಿ ಮಾಡಿವೆ. ಇತ್ತೀಚಿನ ಪ್ರಾಯೋಗಿಕ ಉಡಾವಣೆ ಭಾರತೀಯ ಸೇನಾಪಡೆ ಅತ್ಯಂತ ಕಡಿಮೆ ಅವಧಿಯಲ್ಲೂ ಈ ಕ್ಷಿಪಣಿಯನ್ನು ಉಡಾವಣೆಗೊಳಿಸುವ ಸಾಮರ್ಥ್ಯ ಗಳಿಸಿದೆ ಎನ್ನುವುದನ್ನು ಸಾಬೀತುಪಡಿಸಿದೆ.
• ಬಹುತೇಕ 12 ಟನ್ ತೂಕ ಹೊಂದಿರುವ ಅಗ್ನಿ-1 ಕ್ಷಿಪಣಿ 15 ಮೀಟರ್ ಉದ್ದವಾಗಿದೆ. ಇದು ಅಂದಾಜು 1,000 ಕೆಜಿಗಳಷ್ಟು ಭಾರದ ಪೇಲೋಡ್ ಹೊತ್ತೊಯ್ಯಲು ಸಮರ್ಥವಾಗಿದೆ.
• ಅಣ್ವಸ್ತ್ರ ಸಿಡಿತಲೆಗಳನ್ನು ಒಯ್ಯುವ ಸಾಮರ್ಥ್ಯ ಹೊಂದಿರುವ ಅಗ್ನಿ-1 ಕ್ಷಿಪಣಿ 700 ಕಿಲೋಮೀಟರ್‌ಗಿಂತಲೂ ಹೆಚ್ಚು ದೂರದಲ್ಲಿರುವ ಗುರಿಯ ಮೇಲೆ ಕರಾರುವಾಕ್ಕಾಗಿ ದಾಳಿ ನಡೆಸಬಲ್ಲದು.
• ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಓ) ಭಾಗವಾಗಿರುವ ಅಡ್ವಾನ್ಸ್ಡ್ ಸಿಸ್ಟಮ್ಸ್ ಲ್ಯಾಬೋರೇಟರಿ (ಎಎಸ್ಎಲ್) ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯ (ಡಿಆರ್‌ಡಿಎಲ್) ಹಾಗೂ ರಿಸರ್ಚ್ ಸೆಂಟರ್ ಇಮಾರತ್ (ಆರ್‌ಸಿಐ) ಜೊತೆ ಸಹಯೋಗ ಹೊಂದಿ ಅಗ್ನಿ-1 ಕ್ಷಿಪಣಿಯನ್ನು ಅಭಿವೃದ್ಧಿ ಪಡಿಸಿದೆ.
• ಹೈದರಾಬಾದಿನ ಭಾರತ್ ಡೈನಾಮಿಕ್ಸ್ ಲಿಮಿಟೆಡ್ ಸಂಸ್ಥೆ ಅಗ್ನಿ-1 ಕ್ಷಿಪಣಿಯನ್ನು ಸಂಯೋಜಿಸಿದೆ. ನವೆಂಬರ್ 22, 2016ರಂದು ಇದೇ ನೆಲೆಯಿಂದ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಾ ಪ್ರಯೋಗಕ್ಕೆ ಒಳಪಡಿಸಲಾಯಿತು.