ಗಾಜಿಪುರ(ಜ.31): ಕೇಂದ್ರದ 3 ನೂತನ ಕೃಷಿ ಕಾಯ್ದೆಗಳ ವಿರುದ್ಧ ಗಾಜಿಪುರದ ದೆಹಲಿ-ಮೇರಠ್‌ ಹೆದ್ದಾರಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಶನಿವಾರ ಮತ್ತಷ್ಟುಜನಸಾಗರ ಹರಿದುಬಂದಿದೆ.

ಗಣರಾಜ್ಯೋತ್ಸವದ ದಿನ ರೈತರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಬಳಿಕ ದಿಲ್ಲಿಯ ವಿವಿಧ ಗಡಿಗಳಲ್ಲಿ ಬೀಡುಬಿಟ್ಟಿದ್ದ ಹಲವು ರೈತ ಸಂಘಟನೆಗಳ ಪೈಕಿ ಒಂದೊಂದೇ ಸಂಘಟನೆಗಳು ಪೇರೆ ಕಿತ್ತಿದ್ದವು. ಈ ಹಿನ್ನೆಲೆಯಲ್ಲಿ ಕೃಷಿ ಕಾಯ್ದೆಗಳ ವಿರುದ್ಧದ ರೈತರ ಪ್ರತಿಭಟನೆ ಇನ್ನು ಅಂತಿಮ ಹಂತದತ್ತ ಸಾಗುತ್ತಿದೆ ಎಂಬಷ್ಟರ ಬೆನ್ನಲ್ಲೇ, ‘ಆತ್ಮಹತ್ಯೆ ಬೇಕಾದರೂ ಮಾಡಿಕೊಳ್ಳುತ್ತೇನೆ. ಯಾವುದೇ ಕಾರಣಕ್ಕೂ ಪ್ರತಿಭಟನಾ ಸ್ಥಳದಿಂದ ಮಾತ್ರ ನಿರ್ಗಮಿಸಲ್ಲ’ ಎಂದು ಕಣ್ಣೀರು ಹಾಕಿ ಭಾರತೀಯ ಕಿಸಾನ್‌ ಯೂನಿಯನ್‌ ಮುಖಂಡ ರಾಕೇಶ್‌ ಟಿಕಾಯತ್‌ ನೀಡಿದ ಭಾವನಾತ್ಮಕ ಹೇಳಿಕೆಗೆ ರೈತರು ಮನ ಸೋತಂತಿದೆ.

ಈ ಹಿನ್ನೆಲೆಯಲ್ಲಿ ರಾಜಸ್ಥಾನ, ಉತ್ತರ ಪ್ರದೇಶ, ಉತ್ತರಾಖಂಡ, ಹರಾರ‍ಯಣ ಸೇರಿದಂತೆ ಇನ್ನಿತರ ಪ್ರದೇಶಗಳಿಂದ ಭಾರೀ ಪ್ರಮಾಣದ ರೈತರು ತಂಡೋಪ ತಂಡವಾಗಿ ಬರುತ್ತಿದ್ದಾರೆ. ಫೆ.2ರ ಒಳಗಾಗಿ ದಿಲ್ಲಿಯ ಗಡಿಗಳಲ್ಲಿ ಭಾರೀ ಪ್ರಮಾಣದ ಜನಸ್ತೋಮವೇ ಹರಿದುಬರಲಿದೆ ಎಂದು ರೈತ ಮುಖಂಡರೊಬ್ಬರು ತಿಳಿಸಿದ್ದಾರೆ.

ಶನಿವಾರ ಗಾಜಿಪುರದಲ್ಲಿ 10 ಸಾವಿರಕ್ಕೂ ಹೆಚ್ಚು ಮಂದಿ ಭೇಟಿ ನೀಡಿ ತೆರಳಿದ್ದಾರೆ ಎಂದು ಬಿಕೆಯು ಹೇಳಿದೆ. ಆದರೆ 5000-6000ದಷ್ಟುಜನ ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ರೈತ ಮುಖಂಡರಿಂದ ನಿರಶನ:

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಪುಣ್ಯತಿಥಿ ಪ್ರಯುಕ್ತ ದಿಲ್ಲಿ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಶನಿವಾರ ಒಂದು ದಿನದ ಮಟ್ಟಿಗೆ ಉಪವಾಸ ಸತ್ಯಾಗ್ರಹ ನಡೆಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಸಂಯುಕ್ತ ಕಿಸಾನ್‌ ಮೋರ್ಚಾದ ಹಿರಿಯ ನಾಯಕ ಅಭಿಮನ್ಯು ಕೊಹಾರ್‌, ನಮ್ಮ ಪ್ರತಿಭಟನೆಗೆ ದೇಶಾದ್ಯಂತ ಭಾರೀ ಬೆಂಬಲ ವ್ಯಕ್ತವಾಗುತ್ತಿದ್ದು, ಫೆ.2ರ ವೇಳೆಗೆ ಜನಸಾಗರವೇ ಹರಿದು ಬರಲಿದೆ ಎಂದರು. ಇದೇ ವೇಳೆ ತಮ್ಮ ಶಾಂತಿಯುತ ಪ್ರತಿಭಟನೆಯನ್ನು ಹತ್ತಿಕ್ಕಲು ಕೇಂದ್ರದ ಬಿಜೆಪಿ ಸರ್ಕಾರ ಯತ್ನಿಸಿತ್ತು ಎಂದು ಕಿಡಿಕಾರಿದರು.

ಇಂಟರ್‌ನೆಟ್‌ ಸೇವೆಗೆ ತಾತ್ಕಾಲಿಕ ತಡೆ

ರೈತರ ಪ್ರತಿಭಟನೆ ನಡೆಯುತ್ತಿರುವ ದೆಹಲಿಯ ಸುತ್ತಲಿನ ಗಡಿ ಪ್ರದೇಶಗಳಾದ ಸಿಂಘು, ಗಾಜಿಪುರ ಹಾಗೂ ಟಿಕ್ರಿ ಪ್ರದೇಶಗಳಲ್ಲಿ ಕೇಂದ್ರ ಗೃಹ ಇಲಾಖೆ ಶನಿವಾರ ಇಂಟರ್ನೆಟ್‌ ಸೇವೆಯನ್ನು ತಾತ್ಕಾಲಿಕವಾಗಿ ತಡೆ ಹಿಡಿದಿದೆ. ಅಲ್ಲದೆ ಗಡಿ ಪ್ರದೇಶಗಳಷ್ಟೇ ಅಲ್ಲದೆ ಈ ಗಡಿ ಪ್ರದೇಶಗಳಿಗೆ ಅಂಟಿಕೊಂಡಿರುವ ಇತರ ಪ್ರದೇಶಗಳಲ್ಲೂ ಶುಕ್ರವಾರ ರಾತ್ರಿಯಿಂದಲೇ ಜಾರಿಗೆ ಬರುವಂತೆ ಜನವರಿ 31ರ ರಾತ್ರಿ 11 ಗಂಟೆಯವರೆಗೆ ಇಂಟರ್ನೆಟ್‌ ತಡೆ ಹಿಡಿಯಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಸುಳ್ಳು ಸುದ್ದಿಗಳು ಹರಿದಾಡಿ ಸಂಭವಿಸಬಹುದಾದ ಅಹಿತಕರ ಘಟನೆ ತಡೆ ಹಾಗೂ ಜನ ಸಾಮಾನ್ಯರ ಸುರಕ್ಷತೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.