Light Combat Helicopter: ರಾಜಸ್ಥಾನ ಗಡಿಯಲ್ಲಿ ಸ್ವದೇಶಿ ಅಟ್ಯಾಕ್ ಹೆಲಿಕಾಪ್ಟರ್ ನಿಯೋಜಿಸಲಿರುವ ಏರ್‌ಫೋರ್ಸ್!
ಚೀನಾ ಆಗಿರಲಿ, ಪಾಕಿಸ್ತಾನವೇ ಇರಲಿ. ಭಾರತದ ತಂಟೆಗೆ ಬಂದರೆ ಇಬ್ಬರ ಸ್ಥಿತಿಯೂ ಹದಗೆಡಲಿದೆ. ಭಾರತೀಯ ವಾಯುಪಡೆ ಮತ್ತು ಸೇನೆ ಎರಡೂ ಗಡಿಯಲ್ಲಿ ತಮ್ಮ ಅತ್ಯಂತ ಅಪಾಯಕಾರಿ ಅಟ್ಯಾಕ್ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲು ಸಜ್ಜಾಗಿದೆ. ಇದು ಲಘು ಯುದ್ಧ ಹೆಲಿಕಾಪ್ಟರ್ (LCH). ಸ್ವದೇಶಿ ಯುದ್ಧ ಹೆಲಿಕಾಪ್ಟರ್‌ನ ಸಾಮರ್ಥ್ಯ, ವ್ಯಾಪ್ತಿ ಮತ್ತು ವಿಶೇಷತೆಗಳು ಇಲ್ಲಿದೆ.
ನವದೆಹಲಿ (ಸೆ. 21): ಒಂದು ದೇಶದ ಸೇನೆಗೆ ಅಟ್ಯಾಕ್ ಹೆಲಿಕಾಪ್ಟರ್ ಯಾಕೆ ಬಹಳ ಪ್ರಮುಖ. ಇದಕ್ಕೆ ಉತ್ತರ ಬಹಳ ಸರಳ. ಯುದ್ಧವಿಮಾನಗಳು ಯಾವುದೇ ದಾಳಿಯನ್ನು ತೀರಾ ಟಾರ್ಗೆಟ್ ಟಿ ಟಾರ್ಗೆಟ್ ಮಾಡಲು ಸಾಧ್ಯವಿಲ್ಲ. ಬಾಂಬ್ ದಾಳಿ ನಡೆಸಿದಲ್ಲಿ ವ್ಯಾಪಕ ಪ್ರದೇಶಗಳಿಗೆ ಹಾನಿ ಆಗುತ್ತದೆ. ಆದರೆ, ಅಟ್ಯಾಕ್ ಹೆಲಿಕಾಪ್ಟರ್ ವಿಚಾರದಲ್ಲಿ ಹಾಗಲ್ಲ. ವಾಯುದಾಳಿಯಲ್ಲಿ ಶಾರ್ಪ್ ಶೂಟರ್ ರೀತಿಯಲ್ಲಿ ಕೆಲಸ ಮಾಡುತ್ತದೆ. ಈ ಹೆಲಿಕಾಪ್ಟರ್‌ಗಳು ಯುದ್ಧವಿಮಾನಗಳಿಗಿಂತ ಕಡಿಮೆ ವೇಗದಲ್ಲಿ ಹೆಚ್ಚು ನಿಖರವಾದ ಮತ್ತು ಮಾರಣಾಂತಿಕ ದಾಳಿಯನ್ನು ನಡೆಸುವ ಸಾಮರ್ಥ್ಯ ಹೊಂದಿವೆ. ಏಕೆಂದರೆ ಯುದ್ಧ ವಿಮಾನಗಳು ಅತಿ ವೇಗದಲ್ಲಿ ಹಾರುತ್ತವೆ. ಅವುಗಳ ಬಳಕೆ ವಿಭಿನ್ನವಾಗಿದೆ. ಸರ್ಜಿಕಲ್ ಸ್ಟ್ರೈಕ್‌ನಂತಹ ದಾಳಿಗಳನ್ನು ನಡೆಸಲು ಅಟ್ಯಾಕ್ ಹೆಲಿಕಾಪ್ಟರ್‌ಗಳು ಹೆಚ್ಚು ಪ್ರಯೋಜನಕಾರಿ. ಇವೆಲ್ಲವುಗಳನ್ನು ಅರಿತಿರುವ ಭಾರತೀಯ ಏರ್‌ಫೋರ್ಸ್, ಅಕ್ಟೋಬರ್ 3 ರಂದು ವಾಯುಪಡೆ ದಿನದ ಒಂದು ದಿನ ಮುನ್ನ ರಾಜಸ್ಥಾನದ ಜೋಧ್‌ಪುರ ವಾಯುನೆಲೆಯಲ್ಲಿ ಲಘು ಯುದ್ಧ ಹೆಲಿಕಾಪ್ಟರ್‌ನ (LCH) ಸ್ಕ್ವಾಡ್ರನ್ ಅನ್ನು ನಿಯೋಜಿಸಲಿದೆ. ಇದರಿಂದಾಗಿ ಭಾರತದ ಪಶ್ಚಿಮ ಗಡಿಯು ಇನ್ನಷ್ಟು ಹೆಚ್ಚು ಸುರಕ್ಷಿತವಾಗಿರಲಿದೆ. ಗಡಿಯಾಚೆಯಿಂದ ಯಾವುದೇ ಕುಕೃತ್ಯಗಳು ಅಥವಾ ಸಾರ್ವಭೌಮ ಭಾರತದ ಮೇಲೆ ದಾಳಿ ನಡೆಯುವ ಪ್ರಯತ್ನ ನಡೆದರೆ, ಈ ಹೆಲಿಕಾಪ್ಟರ್ ಕಣ್ಗಾವಲು ಮೂಲಕ ತಕ್ಷಣವೇ ತಕ್ಕ ಉತ್ತರವನ್ನು ನೀಡುತ್ತದೆ. ಇದು ಹೆಲಿಕಾಪ್ಟರ್ ಮಾತ್ರವೇ ಅಲ್ಲ, ಎದುರಾಳಿಗಳ ಪಾಲಿಗೆ ಫ್ಲೈಯಿಂಗ್ ಡೆತ್.
ಕಾರ್ಗಿಲ್ ಯುದ್ಧದ ಸಮಯದಲ್ಲಿ ಭಾರತಕ್ಕೆ ಬಹಳ ಅಗತ್ಯವಾಗಿ ಕಾಡಿದ್ದು ಎಲ್‌ಸಿಎಚ್ ( Light Combat Helicopter) ಅಗತ್ಯವಿತ್ತು. ಆಗ ಭಾರತೀಯ ಸೇನೆಗೆ ಎತ್ತರದ ಪ್ರದೇಶಗಳಲ್ಲಿಇರುವ ಶತ್ರುಗಳನ್ನು ನಾಶ ಮಾಡಲು, ದಾಳಿ ನಡೆಸಬಲ್ಲ ಹೆಲಿಕಾಪ್ಟರ್ ಇರಬೇಕು ಎಂದು ಬಹಳವಾಗಿ ಅನಿಸಿತ್ತು. ಈ ಉದ್ದೇಶಕ್ಕಾಗಿ ಲಘು ಯುದ್ಧ ಹೆಲಿಕಾಪ್ಟರ್ ತಯಾರಿಸಲಾಗಿದೆ. ಈ ವರ್ಷ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭದ್ರತೆಯ ಸಂಪುಟ ಸಮಿತಿಯು 15 ಎಲ್‌ಸಿಎಚ್ ಖರೀದಿಸಲು 3,887 ಕೋಟಿ ರೂಪಾಯಿ ಮೀಸಲಿಟ್ಟಿದೆ. ಈ ಪೈಕಿ 377 ಕೋಟಿ ರೂ.ಗಳನ್ನು ಈ ವರ್ಷದ ಮಾರ್ಚ್‌ನಲ್ಲಿ ಬಿಡುಗಡೆ ಮಾಡಲಾಗಿದೆ. 15 ಹೆಲಿಕಾಪ್ಟರ್‌ಗಳಲ್ಲಿ 10 ವಾಯುಸೇನೆಗೆ ಮತ್ತು ಐದು ಭಾರತೀಯ ಸೇನೆಗೆ ನೀಡಲಾಗುತ್ತದೆ.
ಏನಿದರ ಕಾರ್ಯ: ಇದರ ಮುಖ್ಯ ಕಾರ್ಯವೆಂದರೆ ಯುದ್ಧ ಹುಡುಕಾಟ ಮತ್ತು ಪಾರುಗಾಣಿಕಾ ಅಂದರೆ ಯುದ್ಧದ ಸಮಯದಲ್ಲಿ ತನ್ನ ಸೈನಿಕರನ್ನು ಹುಡುಕುವುದು ಮತ್ತು ಅವರ ರಕ್ಷಣೆಗೆ ಇಳಿಯುವುದು. ಡಿಸ್ಟ್ರಕ್ಷನ್ ಆಫ್ ಎನಿಮಿ ಏರ್ ಡಿಫೆನ್ಸ್ - ಡೆಡ್, ಕೌಂಟರ್ ಇನ್‌ಸರ್ಗೆನ್ಸಿ (CI), ಡ್ರೋನ್‌ಗಳನ್ನು ಹೊಡೆದುರುಳಿಸುವುದು ಇತ್ಯಾದಿ. ಇದರ ಹೊರತಾಗಿ, ಎತ್ತರದಲ್ಲಿರುವ ಶತ್ರುಗಳ ಬಂಕರ್‌ಗಳನ್ನು ನಾಶಪಡಿಸುವುದು ಇವುಗಳ ಮುಖ್ಯ ಕಾರ್ಯವಾಗಿರಲಿದೆ.
ಸಾಮರ್ಥ್ಯವೇನು: ಲಘು ಯುದ್ಧ ಹೆಲಿಕಾಪ್ಟರ್ (LCH) ಅನ್ನು ಇಬ್ಬರು ಪೈಲಟ್‌ಗಳು ಒಟ್ಟಿಗೆ ಹಾರಿಸುತ್ತಾರೆ. 51.10 ಅಡಿ ಉದ್ದದ ಈ ಹೆಲಿಕಾಪ್ಟರ್‌ನ ಎತ್ತರ 15.5 ಅಡಿ. ಪೂರ್ಣ ಶಸ್ತ್ರಾಸ್ತ್ರ ಮತ್ತು ಇಂಧನವನ್ನು ತುಂಬಿದಾಗ, ಅದರ ತೂಕ 5800 ಕೆಜಿ ಆಗುತ್ತದೆ. 700 ಕೆ.ಜಿ.ವರೆಗಿನ ಶಸ್ತ್ರಾಸ್ತ್ರಗಳನ್ನು ಅದರ ಮೇಲೆ ಅಳವಡಿಸಬಹುದಾಗಿದೆ. 550 ಕಿಮೀ ವ್ಯಾಪ್ತಿಯಲ್ಲಿ, ಗಂಟೆಗೆ ಗರಿಷ್ಠ 268 ಕಿಮೀ ವೇಗದಲ್ಲಿ ಹಾರಬಲ್ಲದು. ಇದು ಮೂರು ಗಂಟೆ 10 ನಿಮಿಷಗಳ ಕಾಲ ನಿರಂತರವಾಗಿ ಹಾರುವ ಸಾಮರ್ಥ್ಯ ಹೊಂದಿದೆ. ಹಿಮಾಲಯಕ್ಕೆ ಇದು ಉತ್ತಮ ಏಕೆಂದರೆ ಈ ಹೆಲಿಕಾಪ್ಟರ್ 16,400 ಅಡಿ ಎತ್ತರದಲ್ಲಿಯೂ ಹಾರಬಲ್ಲದು. ಹಾಗಾಗಿ ಚೀನಾದ ಪ್ರಾಬಲ್ಯವನ್ನು ಮಣಿಸಲು ಇದಕ್ಕಿಂತ ಉತ್ತಮ ಹೆಲಿಕಾಪ್ಟರ್ ಸದ್ಯಕ್ಕಿಲ್ಲ. ಈ ಹೆಲಿಕಾಪ್ಟರ್‌ನ ಕಾಕ್‌ಪಿಟ್ ಗಾಜಿನಿಂದ ಮಾಡಲ್ಪಟ್ಟಿದೆ. ಫ್ರೇಮ್ ಕೂಡ ಸಂಯೋಜಿತವಾಗಿದೆ. ಭವಿಷ್ಯದಲ್ಲಿ, ಅದರ ಆವೃತ್ತಿಯನ್ನು ಇನ್ನಷ್ಟು ನವೀಕರಿಸಲಾಗುತ್ತದೆ. ಈ ಹೆಲಿಕಾಪ್ಟರ್‌ನ ದೇಹ ಮತ್ತು ರೋಟರ್ ಬ್ಲೇಡ್‌ಗಳನ್ನು ವಿಶೇಷ ಲೋಹದಿಂದ ಮಾಡಲಾಗಿದೆ. ಈ ಹೆಲಿಕಾಪ್ಟರ್‌ನ ಮೇಲೆ ಗುಂಡುಗಳು ಬಿದ್ದರೂ ಯಾವುದೇ ಪರಿಣಾಮವಾಗುವುದಿಲ್ಲ.
ಮೇಡ್ ಇನ್ ಇಂಡಿಯಾ ಪ್ರಥಮ ವಿಮಾನ ಹಾರಾಟ, ಬೆಂಗಳೂರಿನಲ್ಲಿ ತಯಾರಾದ ಪ್ಲೇನ್!
ಲಘು ಯುದ್ಧ ಹೆಲಿಕಾಪ್ಟರ್ (LCH) 20 ಮಿಲಿಮೀಟರ್ ಬಂದೂಕನ್ನು ತನ್ನ ತುದಿಯಲ್ಲಿ, ಅಂದರೆ ಕಾಕ್‌ಪಿಟ್‌ನ ಸ್ವಲ್ಪ ಮುಂದೆ ಅಳವಡಿಸಲಾಗಿದೆ. ಇದಲ್ಲದೇ ಇದರಲ್ಲಿ ನಾಲ್ಕು ಹಾರ್ಡ್‌ಪಾಯಿಂಟ್‌ಗಳಿವೆ. ಅಂದರೆ, ನಾಲ್ಕು ರೀತಿಯ ಅಥವಾ ವಿವಿಧ ರೀತಿಯ ಶಸ್ತ್ರಾಸ್ತ್ರಗಳನ್ನು ಬಳಸಬಹುದು. ಉದಾಹರಣೆಗೆ, ನಾಲ್ಕು 12 FZ275 ಲೇಸರ್ ಮಾರ್ಗದರ್ಶಿ ರಾಕೆಟ್‌ಗಳು ಅಥವಾ ನಾಲ್ಕು ಮಿಸ್ಟ್ರಲ್ ಏರ್-ಟು-ಏರ್ ಕ್ಷಿಪಣಿಗಳು, ಅಥವಾ ನಾಲ್ಕು ಧ್ರುವಸ್ತ್ರ ವಿರೋಧಿ ಟ್ಯಾಂಕ್ ಮಾರ್ಗದರ್ಶಿ ಕ್ಷಿಪಣಿಗಳು. ಅಥವಾ ನಾಲ್ಕು ಕ್ಲಸ್ಟರ್ ಬಾಂಬ್ ಗಳು, ಮಾರ್ಗದರ್ಶನವಿಲ್ಲದ ಬಾಂಬ್ ಗಳು, ಗ್ರೆನೇಡ್ ಲಾಂಚರ್ ಗಳನ್ನು ಅಳವಡಿಸಬಹುದು. ಅಥವಾ ಇವೆಲ್ಲವುಗಳ ಮಿಶ್ರಣವನ್ನು ಸೇರಿಸಬಹುದು.
HAL: ಕೊರೋನಾ ಸಂಕಷ್ಟದ ಮಧ್ಯೆಯೂ ಎಚ್‌ಎಎಲ್‌ಗೆ ದಾಖಲೆಯ 24000 ಕೋಟಿ ಆದಾಯ
ಎಚ್‌ಎಚ್‌ನಲ್ಲಿ ತಯಾರಿ: 150 ಲಘು ಯುದ್ಧ ಹೆಲಿಕಾಪ್ಟರ್‌ಗಳನ್ನು (ಎಲ್‌ಸಿಎಚ್) ತಯಾರಿಸಬಹುದು ಎಂದು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಹೇಳಿದೆ. ಪ್ರತಿ ವರ್ಷ ಹತ್ತು ಹೆಲಿಕಾಪ್ಟರ್‌ಗಳನ್ನು ಸೇನೆಗೆ ನೀಡುವ ಸಾಮರ್ಥ್ಯವಿದೆ ಎಂದಿದೆ. ಭಾರತೀಯ ಸೇನೆಯು ಜೂನ್ 1, 2022 ರಂದು ಬೆಂಗಳೂರಿನಲ್ಲಿ ತನ್ನ ಮೊದಲ ಸ್ಕ್ವಾಡ್ರನ್ ಅನ್ನು ನಿಯೋಜಿಸಿದೆ. ಮುಂದಿನ ವರ್ಷ ಚೀನಾದ ಬಳಿ ಇರುವ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (LAC) ಬಳಿ ಇದನ್ನು ನಿಯೋಜಿಸಲಾಗುವುದು. ಸೇನೆಯು 95 ಹೆಲಿಕಾಪ್ಟರ್‌ಗಳನ್ನು ಖರೀದಿಸಲು ಬಯಸಿದೆ. ಈ ಹೆಲಿಕಾಪ್ಟರ್‌ಗಳನ್ನು ವಿವಿಧ ಪರ್ವತ ಪ್ರದೇಶಗಳಲ್ಲಿ 7 ಘಟಕಗಳಲ್ಲಿ ನಿಯೋಜಿಸಲಾಗುವುದು. ಇಲ್ಲಿಯವರೆಗೆ 9 ಹೆಲಿಕಾಪ್ಟರ್‌ಗಳನ್ನು ತಯಾರಿಸಲಾಗಿದೆ.