Asianet Suvarna News Asianet Suvarna News

AIIMS ಮಾತ್ರವಲ್ಲ, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್‌ ಸರ್ವರ್‌ ಹ್ಯಾಕ್‌ ಮಾಡಲು 6 ಸಾವಿರ ಬಾರಿ ಯತ್ನ..!

ಐಸಿಎಂಆರ್ ವೆಬ್‌ಸೈಟ್ ಮೇಲೆ ದಾಳಿಯನ್ನು ಹಾಂಗ್ ಕಾಂಗ್ ಮೂಲದ ಕಪ್ಪು ಪಟ್ಟಿಯಲ್ಲಿರುವ ಐಪಿ ಅಡ್ರೆಸ್‌ ಮೂಲಕ ನಡೆಸಲಾಗಿದೆ ಎಂದು ಮಾಹಿತಿ ನೀಡಲಾಗಿದೆ.

after aiims delhi hacking attempts on indian council of medical researchs server ash
Author
First Published Dec 6, 2022, 8:04 PM IST

ದಿಲ್ಲಿಯ ಪ್ರತಿಷ್ಠಿತ ಏಮ್ಸ್‌ (AIIMS Delhi) ಸರ್ವರ್‌ (Server) ಮೇಲೆ ದೊಡ್ಡ ಮಟ್ಟದಲ್ಲಿ ಸೈಬರ್‌ ದಾಳಿಯಾಗಿತ್ತು (Cyber Attack). ಏಮ್ಸ್‌ನ 5 ಸರ್ವರ್‌ಗಳು ದಾಳಿಗೆ ಒಳಗಾಗಿದ್ದು, ಇದರ ಹಿಂದೆ ಚೀನೀ ಹ್ಯಾಕರ್‌ಗಳ ಕೈವಾಡ ಇದೆ ಎಂಬ ಶಂಕೆಯೂ ವ್ಯಕ್ತವಾಗಿತ್ತು. ಇನ್ನು, ಏಮ್ಸ್ ಮಾತ್ರವಲ್ಲ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (Indian Council of Medical Research) ನ ಸರ್ವರ್ ಅನ್ನು ಹ್ಯಾಕ್ (Hack) ಮಾಡಲು ಯತ್ನ ನಡೆದಿತ್ತು ಎಂಬ ವಿಚಾರವೂ ಬೆಳಕಿಗೆ ಬಂದಿದೆ. ನವೆಂಬರ್ 30 ರಂದು ಐಸಿಎಂಆರ್‌ (ICMR) ಸರ್ವರ್ ಅನ್ನು ಹ್ಯಾಕ್ ಮಾಡಲು ಕನಿಷ್ಠ 6,000 ಪ್ರಯತ್ನಗಳು ನಡೆದಿವೆ. ಆದರೆ, ಹ್ಯಾಕರ್‌ಗಳು ತಮ್ಮ ಪ್ರಯತ್ನದಲ್ಲಿ ಯಶಸ್ವಿಯಾಗಲಿಲ್ಲ ಎಂದು ತಿಳಿದುಬಂದಿದೆ. 

ಇನ್ನು, ಈ ಹ್ಯಾಕಿಂಗ್ ಯತ್ನದ ಕುರಿತು ವಿವರವಾದ ವರದಿಯನ್ನು ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‌ಐಸಿ) ಸಿದ್ಧಪಡಿಸುತ್ತಿದೆ. ಐಸಿಎಂಆರ್ ವೆಬ್‌ಸೈಟ್ ಮೇಲೆ ದಾಳಿಯನ್ನು ಹಾಂಗ್ ಕಾಂಗ್ ಮೂಲದ ಕಪ್ಪು ಪಟ್ಟಿಯಲ್ಲಿರುವ ಐಪಿ ಅಡ್ರೆಸ್‌ ಮೂಲಕ ನಡೆಸಲಾಗಿದೆ ಎಂದು ಮಾಹಿತಿ ನೀಡಲಾಗಿದೆ. ಆದರೂ, ICMR ನ ಸರ್ವರ್‌ನ ಫೈರ್‌ವಾಲ್‌ ಹ್ಯಾಕರ್‌ಗಳಿಗೆ ರೋಗಿಗಳ ಮಾಹಿತಿ ಪಡೆಯಲು ಯಾವುದೇ ಲೋಪದೋಷಗಳನ್ನು ಹೊಂದಿಲ್ಲ ಎಂದು ಹೇಳಲಾಗಿದೆ. 

ಇದನ್ನು ಓದಿ: Cyber Hacking: ಏಮ್ಸ್ ಸರ್ವರ್‌ ಹ್ಯಾಕಲ್ಲಿ ಚೀನಿ ಹ್ಯಾಕರ್ ಕೈವಾಡ..?

ಆಸ್ಪತ್ರೆಗಳಲ್ಲಿ ಹ್ಯಾಕ್‌ಗಳ ಸರಣಿ

ಇದಕ್ಕೂ ಮುನ್ನ ನವೆಂಬರ್ 23 ರಂದು, ಹೊಸದಿಲ್ಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಎಐಐಎಂಎಸ್) ನಲ್ಲಿನ ಸೇವೆಗಳ ಮೇಲೆ ಕೆಟ್ಟದಾಗಿ ಪರಿಣಾಮ ಬೀರಿತು. ಇದಕ್ಕೆ ಕಾರಣ ಆಸ್ಪತ್ರೆಯಲ್ಲಿ ಬಳಸಿದ ಸರ್ವರ್ 9 ಗಂಟೆಗಳ ಕಾಲ ಸ್ಥಗಿತಗೊಂಡಿತ್ತು. ಸಂಭವನೀಯ ರ್ಯಾನ್ಸಮ್‌ವೇರ್‌ ದಾಳಿಯಿಂದಾಗಿ ಸರ್ವರ್ ಡೌನ್ ಆಗಿದೆ ಎಂದು AIIMS ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿತ್ತು. 

ಆದರೆ, ಇದು ಇಷ್ಟಕ್ಕೇ ನಿಲ್ಲದೆ, ಡಿಸೆಂಬರ್ 2 ರಂದು, ಆಸ್ಪತ್ರೆಯ 5 ಮುಖ್ಯ ಸರ್ವರ್‌ಗಳು ಸೈಬರ್ ದಾಳಿಗೆ ಒಳಗಾದವು. ಇದರಿಂದಾಗಿ ಲಕ್ಷಾಂತರ ರೋಗಿಗಳ ವೈಯಕ್ತಿಕ ಡೇಟಾಗೆ ಧಕ್ಕೆಯಾಗಿದ್ದು, ಮೂಲಗಳ ಪ್ರಕಾರ, ಸೈಬರ್ ದಾಳಿಯನ್ನು ಚೀನಾದ ಹ್ಯಾಕರ್‌ಗಳು ನಡೆಸಿರುವ ಶಂಕೆ ಇದೆ ಎಂದು ಹೇಳಲಾಗಿದೆ. 
ಕೆಲವು ದಿನಗಳ ನಂತರ, ಡಿಸೆಂಬರ್ 4 ರಂದು, ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಸೈಬರ್ ದಾಳಿ ವರದಿಯಾಗಿದೆ. ಆದರೂ, AIIMS ನಲ್ಲಿ ವರದಿ ಮಾಡಿದಂತೆ ದಾಳಿಯು ತೀವ್ರವಾಗಿರಲಿಲ್ಲ. 

ಇದನ್ನೂ ಓದಿ: AIIMS Delhi Server Hack: ಕ್ರಿಪ್ಟೋಕರೆನ್ಸಿಯಲ್ಲಿ 200 ಕೋಟಿ ನೀಡಿ ಎಂದ ಹ್ಯಾಕರ್‌ಗಳು!

ಇನ್ನೊಂದೆಡೆ, ಸೈಬರ್ ಬೆದರಿಕೆಗಳನ್ನು ಊಹಿಸುವ ಸಂಸ್ಥೆಯಾದ ಕ್ಲೌಡ್‌ಸೆಕ್, ತಮಿಳುನಾಡಿನ ಶ್ರೀ ಸರನ್ ಮೆಡಿಕಲ್ ಸೆಂಟರ್‌ನಿಂದ 1.5 ಲಕ್ಷ ರೋಗಿಗಳ ವೈಯಕ್ತಿಕ ಡೇಟಾವನ್ನು ಹ್ಯಾಕರ್‌ಗಳು ಜನಪ್ರಿಯ ಸೈಬರ್ ಕ್ರೈಮ್ ಫೋರಮ್‌ಗಳಲ್ಲಿ ಮಾರಾಟ ಮಾಡಿದ್ದಾರೆ ಮತ್ತು ಡೇಟಾಬೇಸ್‌ಗಳನ್ನು ಮಾರಾಟ ಮಾಡಲು ಟೆಲಿಗ್ರಾಮ್ ಚಾನೆಲ್ ಅನ್ನು ಬಳಸಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ ಎಂದು ಡಿಸೆಂಬರ್ 3 ರಂದು ಅವರು ಮಾಹಿತಿ ನೀಡಿದ್ದರು. 

ದಿಲ್ಲಿಯ ಏಮ್ಸ್‌ ಆಸ್ಪತ್ರೆಯ ಸರ್ವರ್‌ ಮೇಲೆ ನಡೆದ ಸೈಬರ್‌ ದಾಳಿಯ ಹಿಂದೆ ಚೀನಿ ಹ್ಯಾಕರ್‌ಗಳ ಕೈವಾಡ ಇರುವ ಬಗ್ಗೆ ಶಂಕೆ ಇದ್ದು, ಹಾಂಕಾಂಗ್‌ನಿಂದ ಹ್ಯಾಕ್‌ ಆಗಿರುವ ಮಾಹಿತಿ ಲಭ್ಯವಾಗಿದೆ ಎಂದು ಮೂಲಗಳು ಹೇಳಿವೆ. ಅಲ್ಲದೆ 3-4 ಕೋಟಿ ರೋಗಿಗಳು, ರಾಜಕಾರಣಿಗಳು ಹಾಗೂ ಸೆಲೆಬ್ರಿಟಿಗಳು ಸೇರಿದಂತೆ ವಿವಿಐಪಿಗಳ ಮಾಹಿತಿಯನ್ನು ಹ್ಯಾಕರ್‌ಗಳು ಕದ್ದಿದ್ದಾರೆ ಎಂದು ವರದಿಯಾಗಿದೆ. ಏಮ್ಸ್‌ನ 5 ಸರ್ವರ್‌ಗಳು ದಾಳಿಗೆ ಒಳಗಾಗಿವೆ. ಇದರಲ್ಲಿನ ಮಾಹಿತಿ ಕದ್ದಿರುವ ಹ್ಯಾಕರ್‌ಗಳು ಅದನ್ನು ಅಂತರ್ಜಾಲದಲ್ಲಿ ಡಾರ್ಕ್ ವೆಬ್‌ನಲ್ಲಿ ಮಾರಾಟ ಮಾಡಿರಬಹುದು ಎಂದೂ ಹೇಳಲಾಗಿದೆ. ಏಮ್ಸ್‌ನಿಂದ ಕಳವಾದ ಮಾಹಿತಿಗಾಗಿ ಡಾರ್ಕ್ ವೆಬ್‌ನಲ್ಲಿ 1600 ಸರ್ಚ್‌ನಲ್ಲಿ ನಡೆದಿವೆ ಎಂದು ಇತ್ತೀಚೆಗೆ ವರದಿಯಾಗಿದೆ. 

ಇದನ್ನೂ ಓದಿ: ಏಮ್ಸ್‌ ಸರ್ವರ್‌ ಡೌನ್‌: ವೈರಸ್‌ ದಾಳಿ ಶಂಕೆ!

ಹ್ಯಾಕರ್‌ಗಳ ಮೂಲ ಉದ್ದೇಶ ಮಾಹಿತಿ ಕದ್ದು, ಹಣಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡುವುದಾಗಿದ್ದು, ಏಮ್ಸ್‌ನಿಂದಲೂ 200 ಕೋಟಿ ರೂ. ಮೌಲ್ಯದಷ್ಟು ಕ್ರಿಪ್ಟೋಕರೆನ್ಸಿಗೆ ಬೇಡಿಕೆ ಇಟ್ಟಿದ್ದರು ಎಂದು ಹೇಳಲಾಗಿದೆ. 

Follow Us:
Download App:
  • android
  • ios