ಆಫ್ರಿಕಾದ ಚೀತಾ ಭಾರತದ ಕಾಡಿಗೆ, ವೈಲ್ಡ್‌ಲೈಫ್ ತಜ್ಞರ ಕುತೂಹಲ ಪ್ರಯೋಗ
ಭಾರತದಲ್ಲಿ ಕಣ್ಮರೆಯಾಗಿ 50ಕ್ಕೂ ಹೆಚ್ಚು ವರ್ಷಗಳ ನಂತರ ಈಗ ಆಫ್ರಿಕಾದ ಚೀತಾಗಳನ್ನು ತಂದು ಮಧ್ಯಪ್ರದೇಶದ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಟ್ಟು ಚೀತಾ ಸಂತತಿ ಬೆಳೆಸುವ ಅತಿದೊಡ್ಡ ವೈಲ್ಡ್‌ಲೈಫ್ ಎಕ್ಸ್‌ಪೆರಿಮೆಂಟ್‌ಗೆ ಮಾಡಲಾಗುತ್ತಿದೆ.
ಒಂದು ಕಾಲದಲ್ಲಿ ಭಾರತದ ಕಾಡುಗಳಲ್ಲಿ ಸ್ವಚ್ಛಂದವಾಗಿ ಓಡಾಡಿಕೊಂಡಿದ್ದ ಚೀತಾ (ವೈಲ್ಡ್ ಕ್ಯಾಟ್ಸ್ ಪ್ರಭೇದಕ್ಕೆ ಸೇರಿದ್ದು)ಗಳು ಒಂದೊಮ್ಮೆ ನಾಮಾವಶೇಷಗೊಂಡು ದೇಶದಲ್ಲಿ ಇಲ್ಲವಾಗಿದ್ದು ಬಹುತೇಕರ ಗಮನಕ್ಕೆ ಬಂದಿದ್ದೇ ಇಲ್ಲ. ಆ ಚೀತಾಗಳು ಇಲ್ಲಿಂದ ಕಣ್ಮರೆಯಾಗಿ 50ಕ್ಕೂ ಹೆಚ್ಚು ವರ್ಷಗಳ ನಂತರ ಈಗ ಆಫ್ರಿಕಾದ ಚೀತಾಗಳನ್ನು ತಂದು ಮಧ್ಯಪ್ರದೇಶದ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಟ್ಟು ಚೀತಾ ಸಂತತಿ ಬೆಳೆಸುವ ಅತಿದೊಡ್ಡ ವೈಲ್ಡ್‌ಲೈಫ್ ಎಕ್ಸ್‌ಪೆರಿಮೆಂಟ್‌ಗೆ ಮಾಡಲಾಗುತ್ತಿದೆ. ಆಫ್ರಿಕಾದಲ್ಲಿ ಈ ಚೀತಾಗಳು ಅರೆಪ್ರಜ್ಞಾವಸ್ಥೆಯಲ್ಲಿ ಮಲಗಿಕೊಂಡಿವೆ. ಕೆಲವೇ ದಿನಗಳಲ್ಲಿ ಭಾರತದ ಮಣ್ಣಿಗೆ ಕಾಲಿಡಲಿವೆ. ಭೂಮಿ ಮನುಷ್ಯ ಮಾತ್ರರಿಗಷ್ಟೇ ಅಲ್ಲ, ಗಿಡ ಮರ ಸೇರಿ ಸಕಲ ಚರಾಚರ ಜೀವಸಂಕುಲಗಳಿಗೂ ಸೇರಿದ್ದು. ಸ್ಟೇಟಸ್‌ಗಳಲ್ಲಿ, ಸ್ಟೋರಿಗಳಲ್ಲಿ, ರೀಲ್‌ಗಳಲ್ಲಿ ಆಗಾಗ ಇಂಥದ್ದೊಂದು ಸಾಲನ್ನು ನಾವೆಲ್ಲರೂ ಓದುತ್ತೇವೆ ಮತ್ತು ಓದಿ ಮರೆತು ಮುಂದೆ ಸಾಗುತ್ತೇವೆ. ಒಂದು ಹುಳ, ಒಂದು ಪ್ರಾಣಿ, ಒಂದು ಮರ ಸತ್ತು ಹೋದರೆ ಅದು ಗಮನಕ್ಕೆ ಬರುವುದೇ ಕಡಿಮೆ. ಹಾಗಾಗಿಯೇ ಈ ಭೂಮಿಯ ಮೇಲಿಂದ ಕೆಲವು ಪ್ರಾಣಿ ಸಂಕುಲಗಳು ಕಾಲಕ್ರಮೇಣ ಮರೆಯಾಗುತ್ತಾ ಹೋಗಿವೆ ಮತ್ತು ಮರೆಯಾಗಿವೆ ಅನ್ನುವುದು ಮುಂದಿನ ಜನರೇಷನ್ನಿಗೆ ತಿಳಿಯದೇ ಹೋಗಿದೆ. ಅದಕ್ಕೆ ಅತ್ಯುತ್ತಮ ಉದಾಹರಣೆ ಚೀತಾ .
ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಓಡುವ ಪ್ರಾಣಿ. ಬಿಲ್ಲಿನಂತೆ ಬಾಗುವ, ಬಾಣದಂತೆ ಎರಗುವ, ಸಪೂರ ದೇಹದ, ಸಣ್ಣ ತಲೆಯ, ಸಂಘರ್ಷಗಳನ್ನು ಆದಷ್ಟುದೂರವೇ ಇಟ್ಟುಕೊಳ್ಳಲು ಬಯಸುವ ಅತಿ ಸೂಕ್ಷ್ಮ ಪ್ರಾಣಿ. ಸದ್ಯ ಭಾರತದಲ್ಲಿ ಲೆಪರ್ಡ್ ಅಂತ ಇಂಗ್ಲಿಷಿನಲ್ಲಿ ಕರೆಯುವ ಚಿರತೆಗಳಿವೆ. ಭಾರತದಲ್ಲಿರುವ ಚಿರತೆಗಳನ್ನು ಚಿರತೆ ಪತಂಗ ಎಂದೂ, ಚೀತಾವನ್ನು ನಾಯಿಚಿರತೆ ಎಂದೂ ಕರೆಯುತ್ತಾರೆ.
ಈಗ ಭಾರತದಲ್ಲಿ ಒಂದೇ ಒಂದು ಚೀತಾ ಇಲ್ಲ. ಯಾವಾಗಲಾದರೂ ಇಲ್ಲಿ ಚೀತಾ ಇತ್ತಾ ಎಂದು ಕೇಳಿದರೆ 50 ವರ್ಷ ಹಿಂದೆ ಹೋಗಬೇಕಾಗುತ್ತದೆ. ಚೀತಾ ಕೊನೆಯ ಬಾರಿ ಭಾರತದಲ್ಲಿ ಕಂಡು ಬಂದಿತ್ತು 1967-68ರಲ್ಲಿ ಎಂಬ ಲೆಕ್ಕ ಸಿಗುತ್ತದೆ. ಅಲ್ಲಿಂದಾಚೆ ಚೀತಾ ಇಲ್ಲಿ ಇಲ್ಲ. 16-17ನೇ ಶತಮಾನದಲ್ಲಿ ಹೆಚ್ಚೂ ಕಮ್ಮಿ 10 ಸಾವಿರ ಚೀತಾಗಳು ಭಾರತದಲ್ಲಿ ಇದ್ದುವು ಎನ್ನುತ್ತಾರೆ. ಮುಂದೆ ಒಂದೊಂದೇ ಕಣ್ಮರೆಯಾಗಿ ಸ್ವಾತಂತ್ರ್ಯ ಸಿಗುವ ಹೊತ್ತಿಗೆ ಮನುಷ್ಯನ ಬಂದೂಕಿನ ಕೈಗೆ ಸಿಕ್ಕಿ ಇದ್ದಬದ್ದ ಚೀತಾಗಳೆಲ್ಲಾ ನಾಮಾವಶೇಷಗೊಂಡಿವೆ. ವಿಶ್ವದಲ್ಲಿ ಏಷ್ಯಾದ ಚೀತಾಗಳು ಅಂತ ಇರುವುದು ಈಗ ಇರಾನ್‌ನಲ್ಲಿ ಮಾತ್ರ. ಅದೂ ಕೇವಲ 12. ಅವಷ್ಟೂ ತೀರಿಕೊಂಡರೆ ಏಷ್ಯಾದ ಚೀತಾಗಳ ಸಂತತಿಯೇ ಇರುವುದಿಲ್ಲ.
ಒಟ್ಟು ಜಗತ್ತಲ್ಲಿ 7000 ಚೀತಾಗಳಿವೆ ಎನ್ನುತ್ತಾರೆ. ಅವುಗಳಲ್ಲಿ ಬಹುಪಾಲು ಇರುವುದು ಆಫ್ರಿಕಾದಲ್ಲಿ. ಅವುಗಳಿಗೂ ಏಷ್ಯನ್ ಚೀತಾಗಳಿಗೂ ಅಂಥಾ ವ್ಯತ್ಯಾಸವೇನಿಲ್ಲ. ಈ ಕಾರಣದಿಂದಲೇ ವೈಲ್ಡ್‌ಲೈಫ್‌ನ ಅತಿದೊಡ್ಡ ಎಕ್ಸ್‌ಪೆರಿಮೆಂಟ್ ಇದೀಗ ಶುರುವಾಗಿದೆ. ಅದೇನೆಂದರೆ, ಆಫ್ರಿಕಾದ ಚೀತಾಗಳನ್ನು ತಂದು ಭಾರತದ ಮಧ್ಯಪ್ರದೇಶದಲ್ಲಿರುವ ಕುನೂ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಡುವುದು. ಆ ಮೂಲಕ ಚೀತಾಗಳು ಭಾರತದ ಮಣ್ಣಲ್ಲಿ ಇರುವಂತೆ ನೋಡಿಕೊಳ್ಳುವುದು. ಅವುಗಳ ಸಂತಾನಾಭಿವೃದ್ಧಿಯಾಗುವಂತೆ ಮಾಡುವುದು. ಜಗತ್ತಿನ ಅತಿದೊಡ್ಡ ಮತ್ತು ಬಹುನಿರೀಕ್ಷಿತ ಪ್ರಯೋಗ ಎಂದೇ ಕರೆಸಿಕೊಂಡಿರುವ ಈ ಪ್ರಯೋಗ ಈಗಾಗಲೇ ಆರಂಭವಾಗಿದೆ.
ಆಫ್ರಿಕಾ ಮತ್ತು ನಮೀಬಿಯಾದಲ್ಲಿ ಸ್ವಚ್ಛಂದವಾಗಿ ಓಡಾಡುತ್ತಿದ್ದ ಚೀತಾಗಳನ್ನು ಹೆಲಿಕಾಫ್ಟರ್ ಮೂಲಕ ಟ್ರಾಂಕ್ವಿಲೈಸರ್ ಗನ್ ಬಳಸಿ ಶೂಟ್ ಮಾಡಿ ಮತ್ತೇರಿಸಿ ಕೂಡಿ ಹಾಕಲಾಗಿದೆ. ಕನಿಷ್ಟ16 ಚೀತಾಗಳನ್ನು ಇಲ್ಲಿಗೆ ಕರೆತರಬೇಕು ಅನ್ನುವುದು ನಿರ್ಧಾರವಾಗಿದೆ. ಈ ಒತ್ತಾಯದ ವಲಸೆ ಎಷ್ಟು ಯಶಸ್ವಿಯಾಗುವುದು ಎಂದು ನೋಡಲು ಇಡೀ ಜಗತ್ತಿನ ವೈಲ್ಡ್‌ಲೈಫ್ ತಂತ್ರಜ್ಞರು ಕಾದು ಕುಳಿತಿದ್ದಾರೆ.
ಚೀತಾ ಮೂಲತಃ ತನ್ನ ಮೂಲ ಆವಾಸಸ್ಥಾನಗಳಲ್ಲಿ ಬದುಕುವ ಪ್ರಾಣಿ. ತನ್ನದೇ ಆದ ನೆಲೆ ಸೃಷ್ಟಿಸಿ ಅಲ್ಲಿ ಓಡಾಡುವ ಜಿಂಕೆ ಮತ್ತಿತ್ಯಾದಿ ಪ್ರಾಣಿಗಳನ್ನು ಭೇಟೆಯಾಡಿ ಕೊಂದು ತಿನ್ನುತ್ತವೆ. ಅದರಲ್ಲೂ ಹುಲ್ಲುಗಾವಲುಗಳಲ್ಲಿ ಇರುವುದು ಚೀತಾಗಳಿಗೆ ಇಷ್ಟ. ಅಂಥಾ ಜಾಗ ಎಲ್ಲಿದೆ ಎಂದು ಹುಡುಕಿದಾಗ ಸಿಕ್ಕಿದ್ದು ಮಧ್ಯಪ್ರದೇಶ ಕುನೂ ಉದ್ಯಾನವನ. ಅಲ್ಲಿ ಚೀತಾಗಳಿಗೆ ಬೇಕಾದಷ್ಟು ಜಾಗಗಳಿವೆ ಎನ್ನುವುದು ತಜ್ಞರ ಅಧ್ಯಯನ ಪೂರಕ ಮಾಹಿತಿ. ಕೇವಲ ಜಾಗವಿದ್ದರೆ ಮಾತ್ರ ಸಾಕಾಗುವುದಿಲ್ಲ. ಗಲಾಟೆಗಳಿಗೆ ಹೋಗದ ಸೂಕ್ಷ್ಮ ಪ್ರಾಣಿಯಾದ ಚೀತಾ ಆ ಪ್ರದೇಶದಲ್ಲಿ ಈಗಾಗಲೇ ಬೀಡುಬಿಟ್ಟಿರುವ ವನ್ಯಜೀವಿಗಳ ಜೊತೆ ಹೋರಾಡಬೇಕು. ಅದಕ್ಕೆ ಇಲ್ಲಿ ಸಿಗುವ ಮೊದಲ ಶತ್ರುವೇ ಲೆಪರ್ಡ್(ಚಿರತೆ). ಅಲ್ಲದೇ ಕರಡಿ, ಕಾಡುನಾಯಿಗಳ ಆಕ್ರಮಣವೂ ಎದುರಾಗುತ್ತದೆ. ಅವನ್ನೆಲ್ಲವನ್ನೂ ಎದುರಿಸಿ ಚೀತಾ ಈ ನೆಲದಲ್ಲಿ ಉಳಿಯಬಹುದೇ?
ಇದೊಂದು ಸದ್ಯ ಎಲ್ಲರ ಮುಂದಿರುವ ಬಹು ದುಬಾರಿ ಪ್ರಶ್ನೆ. ಕೆಲವು ಸಮಯದ ಹಿಂದೆ ಪೂರ್ವ ಆಫ್ರಿಕಾಗೆ ಇದೇ ಥರ ಚೀತಾಗಳನ್ನು ಕಳುಹಿಸಲಾಗಿತ್ತು. ಅದರಲ್ಲಿ ಶೇ.80 ಚೀತಾಗಳು ಬದುಕು ಕಂಡುಕೊಂಡಿವೆ ಎನ್ನುವುದು ಪಾಸಿಟಿವ್ ಬೆಳವಣಿಗೆ. ಶೇ.20 ಚೀತಾಗಳು ಭೂಮಿ ತೊರೆದುಹೋಗಿವೆ ಎಂಬುದು ದುಃಖಕರ ವಿಚಾರ. ಪ್ರಸ್ತುತ ಬಂಧನದಲ್ಲಿರುವ ಆಫ್ರಿಕಾದ ಚೀತಾಗಳಿಗೆ ಸ್ವಲ್ಪ ಸಮಯದ ನಂತರ ಕಣ್ಣು ಬಿಟ್ಟರೆ ಎಲ್ಲಿರುತ್ತೇವೆ ಎನ್ನುವುದು ತಿಳಿದಿಲ್ಲ. ಅವುಗಳಿಗೆ ಚಿಪ್ ಅಳವಡಿಸಲಾಗಿದೆ. ಜೋಹಾನ್ಸ್‌ಬಗ್‌ರ್‍ನಿಂದ ವಿಮಾನದಲ್ಲಿ ದೆಹಲಿಗೆ ವಿಶೇಷ ವಿಮಾನದಲ್ಲಿ ಕರೆತಂದು ಅಲ್ಲಿಂದ ಹೆಲಿಕಾಫ್ಟರ್ ಮೂಲಕವೋ ರಸ್ತೆ ಮೂಲಕವೋ ಮಧ್ಯಪ್ರದೇಶಕ್ಕೆ ಕರೆತರಲಾಗುತ್ತದೆ. ಅಲ್ಲಿ ಒಂದು ಅಥವಾ ಎರಡು ತಿಂಗಳು ಸುತ್ತಲೂ ತಂತಿ ಬೇಲಿ ಹಾಕಿದ ಜಾಗದಲ್ಲಿ ಕ್ವಾರಂಟೈನ್ ಮಾಡಲಾಗುತ್ತದೆ. ಎಲ್ಲವೂ ಸರಿಹೋಯಿತು ಅನ್ನುವಾಗ ಅವುಗಳನ್ನು ಕಾಡಿಗೆ ಬಿಡಲಾಗುತ್ತದೆ. ಹೊಸ ಊರು, ಹೊಸ ಜಾಗ, ಹೊಸ ದಾರಿಗಳಲ್ಲಿ ಅಲೆದಾಡಿ ಆಹಾರ ಹುಡುಕಿ ತನ್ನ ಆವಾಸ ಸ್ಥಾನ ಗುರುತು ಹಚ್ಚಿ ಗಟ್ಟಿಯಾಗಿ ನಿಂತು ಬದುಕಬೇಕು. ತಾನು ಬದುಕಿದ್ದೇನೆ ಎಂದು ಜಗತ್ತಿಗೆ ಸಾರಬೇಕು. ಸಂತಾನಾಭಿವೃದ್ಧಿ ಮಾಡಿ ಭಾರತದಲ್ಲಿ ಚೀತಾಗಳ ಸಂಖ್ಯೆ ಹೆಚ್ಚಾಗಿದೆ ಎಂಬ ಲೆಕ್ಕ ಸಿಗುವಂತೆ ಮಾಡುವ ಮಹತ್ತರ ಜವಾಬ್ದಾರಿಯನ್ನು ಅವುಗಳಿಗೆ ಗೊತ್ತೇ ಇಲ್ಲದಂತೆ ಅವುಗಳ ಹೆಗಲ ಮೇಲೆ ಹೊರಿಸಲಾಗಿದೆ.
ಸದ್ಯ ಈ ಚೀತಾಗಳಿಗೆ ಮೂರು ದಿನಕ್ಕೊಮ್ಮೆ 15 ಕೆಜಿ ಆಹಾರ ನೀಡಲಾಗುತ್ತಿದೆ. ಅಲ್ಲಿಂದ ಹೊರಡುವ ಎರಡು ದಿನ ಮೊದಲು ಆರೋಗ್ಯ ಕಾಳಜಿಯಿಂದ ಊಟ ಕೊಡುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ. ಯಾಕೆಂದರೆ ವಿಮಾನದಲ್ಲಿ ಆರೋಗ್ಯ ಏರುಪೇರಾದರೆ ಕಷ್ಟವಾಗುತ್ತದೆ. ಇಲ್ಲಿ ಬಂದ ಮೇಲೆ ಮತ್ತೆ ಆಹಾರ ಕೊಡಲಾಗುತ್ತದೆ. ಈ ವಿಶಿಷ್ಟ ಪ್ರಯೋಗದ ಕುರಿತು ವೈಲ್ಡ್‌ಲೈಫ್ ತಜ್ಞರಲ್ಲಿ ಕುತೂಹಲ ಮತ್ತು ಆತಂಕ ಎರಡೂ ಇದೆ. ಸಾಧ್ಯ, ಅಸಾಧ್ಯ ಎನ್ನುವುದರ ಮಧ್ಯೆ ಈ ಪ್ರಯೋಗ ನಿಂತಿದೆ.
Dangerous! ಇವು ಪ್ರಪಂಚದ 15 ಅತ್ಯಂತ ಅಪಾಯಕಾರಿ ಪ್ರಾಣಿಗಳು
ಇವೆಲ್ಲದರ ಮಧ್ಯೆ ಈ ಚಂದದ ಚೀತಾಗಳನ್ನು ಭಾರತದಲ್ಲಿ ಇಲ್ಲವೇ ಇಲ್ಲ ಎನ್ನುವಂತೆ ಮಾಡಿದ್ದಾದರೂ ಯಾಕೆ ಎಂಬ ಪ್ರಶ್ನೆಗಳನ್ನು ನಮ್ಮಲ್ಲೇ ನಾವು ಕೇಳಿಕೊಳ್ಳಬೇಕಿದೆ. ಕೆರೆಗಳನ್ನು ಸಮತಟ್ಟು ಮಾಡಿದ್ದೇವೆ. ದಟ್ಟಾರಣ್ಯಗಳನ್ನು ಕೆಡವಿ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಲೇ ಇದ್ದೇವೆ. ಪ್ರತೀವರ್ಷ ಅತಿವೃಷ್ಟಿಸಾಮಾನ್ಯವೇ ಆಗಿಹೋಗಿದೆ. ದಿನದಿಂದ ದಿನಕ್ಕೆ ಕಾಡುಗಳು ಕಡಿಮೆಯಾಗುತ್ತಿವೆ. ಕಾಡು ಕಡಿಮೆಯಾಗುತ್ತಿದ್ದಂತೆ ಅಲ್ಲಿರುವ ಪ್ರಾಣಿಗಳು, ಪಕ್ಷಿಗಳು ಬೇರೆ ಜಾಗ ಹುಡುಕಿಕೊಂಡು ಹೋಗುತ್ತಿವೆ. ಕ್ರಮೇಣ ಅವುಗಳ ಸಂತತಿ ಕಡಿಮೆಯಾಗುತ್ತದೆ. ಮುಂದೊಂದು ದಿನ ಮತ್ತೆ ಕಳೆದುಹೋದ ಪ್ರಾಣಿಗಳ ಸಂತತಿ ಬೆಳೆಸುವ ಕುತೂಹಲಕರ ಪ್ರಯೋಗ ನಡೆಯುತ್ತದೆ.
ಗಣಿ ಸ್ಫೋಟಕ್ಕೆ ಪ್ರಾಣಿ-ಪಕ್ಷಿ ಸಂಕುಲವೇ ನಾಶ: ಕಣ್ಮುಚ್ಚಿ ಕುಳಿತ ಅರಣ್ಯ ಇಲಾಖೆ
ಅಲ್ಲಿ ಆಫ್ರಿಕಾದಲ್ಲಿ ಮಲಗಿಕೊಂಡಿರುವ ಚೀತಾಗಳ ಮುಖಗಳನ್ನು ಮನಸ್ಸಿಗೆ ತಂದುಕೊಂಡು ಈ ಪ್ರಯೋಗ ಪೂರ್ತಿಯಾಗಿ ಯಶಸ್ವಿಯಾಗಲಿ ಎಂದು ಹಾರೈಸುವುದೊಂದೇ ಸದ್ಯ ನಮ್ಮ ಮುಂದಿರುವ ಮಾರ್ಗ. ಅದರೊಂದಿಗೆ ಈಗಾಗಲೇ ಬರಿದಾಗಿರುವ ಕಾಡುಗಳಲ್ಲಿ ಅಳಿದುಳಿದಿರುವ ಕಾಡು ಪ್ರದೇಶವನ್ನು ಉಳಿಸಲು ಕಿಂಚಿತ್ತಾದರೂ ಪ್ರಯತ್ನ ಮಾಡುವ ಶಕ್ತಿ ನಮಗೆ ಸಿಗಲಿ ಎಂಬುದು ಪ್ರಾರ್ಥನೆ.