ಗಣಿ ಸ್ಫೋಟಕ್ಕೆ ಪ್ರಾಣಿ-ಪಕ್ಷಿ ಸಂಕುಲವೇ ನಾಶ: ಕಣ್ಮುಚ್ಚಿ ಕುಳಿತ ಅರಣ್ಯ ಇಲಾಖೆ
ಅರಣ್ಯ ಇಲಾಖೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದ ಕಾರ್ಯವೈಖರಿಗೆ ಪ್ರಾಣಿ ಮತ್ತು ಪಕ್ಷಿ ಪ್ರೇಮಿಗಳು ಹಾಗೂ ಪರಿಸರವಾದಿಗಳ ಆಕ್ರೋಶ
ಬೆಳಗಾವಿ(ಜು.28): ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮರೀಕಟ್ಟಿ ಹಾಗೂ ಗಣಿಕೊಪ್ಪ ಗ್ರಾಮಗಳ ವ್ಯಾಪ್ತಿಯಲ್ಲಿ ನಿಯಮ ಉಲ್ಲಂಘಿಸಿ ನಡೆಯುತ್ತಿರುವ ಅವ್ಯಾಹತ ಕಲ್ಲು ಗಣಿಗಾರಿಕೆಯಿಂದ ಪ್ರಾಣಿ ಹಾಗೂ ಪಕ್ಷಿ ಸಂಕುಲಗಳು ವಿನಾಶದಂಚಿಕಗೆ ತಲುಪಿವೆ. ಆದರೂ ಅರಣ್ಯ ಇಲಾಖೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದ ಕಾರ್ಯವೈಖರಿ ಪ್ರಾಣಿ ಮತ್ತು ಪಕ್ಷಿ ಪ್ರೇಮಿಗಳಿಗೆ ಹಾಗೂ ಪರಿಸರವಾದಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಸುವರ್ಣ ವಿಧಾನದಸೌಧದ ಪೂರ್ವಭಾಗದ ಬೆಳಗಾವಿ ಹಾಗೂ ಬೈಲಹೊಂಗಲ ತಾಲೂಕುಗಳ ಗಡಿಯಲ್ಲಿರುವ ಗಣಿಕೊಪ್ಪ ಹಾಗೂ ಮರೀಕಟ್ಟಿ ಗ್ರಾಮದ ವ್ಯಾಪ್ತಿಯಲ್ಲಿ ಕಳೆದ ಎಂಟತ್ತು ವರ್ಷಗಳಿಂದ ನಿಯಮ ಉಲ್ಲಂಘಿಸಿ ಭೂತಾಯಿ ಒಡಲು ಬಗೆದು ಕಲ್ಲು ಗಣಿಗಾರಿಕೆ ನಿರಂತರವಾಗಿ ನಡೆಯುತ್ತಿದೆ. ಸದ್ಯ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ನಡೆಸುವ ಸ್ಥಳ ಹಾಗೂ ಸುತ್ತಮುತ್ತಲಿನ ಪ್ರದೇಶ ಉಪ ಅರಣ್ಯದಂತಿವೆ. ಅಲ್ಲದೇ ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರಾಷ್ಟ್ರಪಕ್ಷಿ ನವಿಲು, ಗಿಳಿ, ಪಾರಿವಾಳ, ಕೋಗಿಲೆ, ಗುಬ್ಬಚ್ಚಿಗಳು, ಬೆಳ್ಳಕ್ಕಿ ಸೇರಿದಂತೆ ಇನ್ನಿತರ ಪಕ್ಷಿಗಳು ಹಾಗೂ ಮೊಲ, ನರಿ, ತೋಳ, ವಿವಿಧ ತಳಿಯ ಮಂಗಳು, ಕಾಡು ಬೆಕ್ಕುಗಳು ವಿವಿಧ ಜಾತಿಯ ಹಾವುಗಳು ಸೇರಿದಂತೆ ಇನ್ನಿತರ ಪ್ರಾಣಿಗಳ ಸಂಕುಲವೇ ಇದೆ. ಆದರೆ ಕಲ್ಲು ಗಣಿಗಾರಿಕೆ ದಂಧೆಗೆ ಉಪಯೋಗಿಸುವ ಜಿಲೆಟಿನ್ ಕಡ್ಡಿ ಸ್ಫೋಟದಿಂದ ನವಿಲು, ನರಿ ಸೇರಿದಂತೆ ಇನ್ನಿತರ ಪ್ರಾಣಿ ಮತ್ತು ಪಕ್ಷಿಗಳು ಗ್ರಾಮಗಳತ್ತ ಮುಖಮಾಡುತ್ತಿವೆ. ಇದರಿಂದಾಗಿ ಪ್ರಾಣಿ, ಪಕ್ಷಿ ಸಂಕುಲ ಒಂದು ಕಡೆಗೆ ನಾಶವಾಗುತ್ತಿದ್ದರೆ, ಮತ್ತೊಂದು ಕಡೆಗೆ ಗ್ರಾಮಸ್ಥರಲ್ಲಿ ಆತಂಕ ಮೂಡಿದೆ.
INDIA@75: ಹರ್ ಘರ್ ತಿರಂಗಾಕ್ಕೆ 7 ತಿಂಗಳು ಮೊದಲೇ ಸಲಹೆ ಕೊಟ್ಟಿದ್ದ ಕನ್ನಡಿಗ..!
ಇಲ್ಲಿ ಬಹುತೇಕರು ಕಲ್ಲು ಗಣಿಗಾರಿಕೆಯಲ್ಲಿ ನಿಯಮ ಬಾಹಿರವಾಗಿ ದಂಧೆ ನಡೆಸುತ್ತಿದ್ದಾರೆ. ಅಂತಹದರಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸ್ಫೋಟಕ ವಸ್ತುಗಳ ಮೂಲಕ ಕಲ್ಲು ಒಡೆಯುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಈ ಭಯಾನಕ ಸ್ಫೋಟದ ಶಬ್ಧ ಹಾಗೂ ಭೂಕಂಪನದಿಂದಾಗಿ ನವಿಲು, ನರಿ, ತೋಳ ಹಾಗೂ ಮಂಗಗಳು ಗ್ರಾಮಗಳತ್ತ ಮುಖ ಮಾಡುತ್ತಿವೆ. ನರಿಗಳು ಸಾರ್ವಜನಿಕರ ಮೇಲೆ ದಾಳಿ ಮಾಡಿರುವ ನಿದರ್ಶನಗಳಿವೆ. ಅಲ್ಲದೆ, ಸ್ಫೋಟದ ಸದ್ದಿಗೆ ದಿಕ್ಕುತೋಚದೆ ಓಡಿ ಹೋಗುತ್ತಿದ್ದಾಗ ಅಪಘಾತದಲ್ಲಿ ಸಿಲುಕಿ ಹಲವಾರು ಪ್ರಾಣಿಗಳು ಅಸುನೀಗಿರುವ ಹಲವಾರು ಘಟನೆಗಳು ಇಲ್ಲಿ ನಡೆದಿವೆ.
ವಾಯು ಮಾಲಿನ್ಯಕ್ಕೆ ಆಹ್ವಾನ!:
ಕಲ್ಲು ಗಣಿಗಾರಿಕೆಯಿಂದ ಕೇವಲ ಮಾನವ, ಪ್ರಾಣಿ ಹಾಗೂ ಪಕ್ಷಿ ಸಂಕುಲ ನಾಶವಾಗುತ್ತಿಲ್ಲ. ಜತೆಗೆ ವಾಯು ಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿದೆ. ಪ್ರತಿದಿನ ಹಗಲು ರಾತ್ರಿಯೆನ್ನದೆ ಅಕ್ರಮ ಕಲ್ಲು ಗಣಿಗಾರಿಕೆ ದಂಧೆಕೋರರು ಭೂಮಿ ಒಡಲನ್ನು ರಾಕ್ಷಸರಂತೆ ಅಗಿಯುತ್ತಿದ್ದಾರೆ. ಇದರಿಂದಾಗಿ ಉಪ ಅರಣ್ಯ ಪ್ರದೇಶದಂತೆ ಪರಿಸರ ಇದ್ದರೂ, ಈ ಭಾಗದ ಜನರಿಗೆ, ಜಾನುವಾರುಗಳಿಗೆ, ವಿವಿಧ ಪ್ರಾಣಿ ಹಾಗೂ ಪಕ್ಷಿಗಳಿಗೆ ಶುದ್ಧ ವಾತಾರಣ ಮರಚೀಕೆಯಾಗಿದೆ. ಕಲ್ಲುಪುಡಿ ಧೂಳು ಹಾಗೂ ಕಲ್ಲು ಪುಡಿ ಮಾಡಲು ಕಾರ್ಯಕ್ಕೆ ಬಳಕೆ ಮಾಡುವ ಸ್ಫೋಟಕ ವಸ್ತುಗಳು ವಾಸನೆಯಿಂದ ಆರೋಗ್ಯದ ಮೇಲೆ ವ್ಯತಿರೀಕ್ತ ಪರಿಣಾಮ ಬೀರುತ್ತಿದೆ. ಆದರೂ ಪ್ರಾಣಿ ಮತ್ತು ಪಕ್ಷಿ ಸಂಕುಲ ಸಂರಕ್ಷಣೆಗಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ವಾತಾವರಣ ಕಲುಷಿತಗೊಳ್ಳುತ್ತಿರುವ ಕಲ್ಲು ಗಣಿಗಾರಿಕೆ ದಂಧೆಕೋರರ ವಿರುದ್ಧ ಪರಿಸರ ಮಂಡಳಿಯವರು ಯಾವುದೇ ಕ್ರಮಕೈಗೊಳ್ಳದಿರುವ ಆಡಳಿತ ವ್ಯವಸ್ಥೆ ಮೇಲೆ ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.
ಈ ಭಾಗದಲ್ಲಿ ಗಣಿಗಾರಿಕೆಯಿಂದ ಪ್ರಾಣಿ ಸಂಕುಲಕ್ಕೆ ಆಗುತ್ತಿರುವ ಅಪಾಯದ ಬಗ್ಗೆ ಇದುವರೆಗೂ ನಮ್ಮ ಗಮನಕ್ಕೆ ಬಂದಿರಲಿಲ್ಲ. ಆದರೆ, ಈ ಕುರಿತು ಪರಿಶೀಲಿಸಲು ತಕ್ಷಣವೇ ನಮ್ಮ ಸಿಬ್ಬಂದಿ ಕಳುಹಿಸಲಿದ್ದೇವೆ ಅಂತ ಬೆಳಗಾವಿ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚವ್ಹಾಣ ತಿಳಿಸಿದ್ದಾರೆ.