* ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ* ದೂರು ನೀಡಲು ಜನರಿಗೆ ಹೆಚ್ಚು ಅಧಿಕಾರ* ಪುರಾವೆ ಇಲ್ಲದೆ ತನ್ನ ಉತ್ಪನ್ನದಿಂದ ‘ಮಕ್ಕಳ ಬೆಳವಣಿಗೆ’ ಆಗುತ್ತೆಂದು ಜಾಹೀರಾತು ನೀಡುವಂತಿಲ್ಲ* ರಾಯಭಾರಿಗಳು ಕೂಡ ಜಾಹೀರಾತು ನಟನೆಗೆ ಮುನ್ನ ಎಚ್ಚರ ವಹಿಸುವಂತೆ ಸರ್ಕಾರ ಸೂಚನೆ
ನವದೆಹಲ(ಜೂ,11): ಗ್ರಾಹಕರನ್ನು ಸೆಳೆಯುವ ಭರದಲ್ಲಿ ಸುಳ್ಳು ಮಾಹಿತಿಗಳುಳ್ಳ, ದಾರಿ ತಪ್ಪಿಸುವ ಜಾಹೀರಾತು ನೀಡುವ ಪ್ರವೃತ್ತಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಜಾಹೀರಾತು ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಇದು ತಕ್ಷಣದಿಂದಲೇ ಜಾರಿಗೆ ಬಂದಿದ್ದು ಮುದ್ರಣ, ಟೀವಿ ಹಾಗೂ ಆನ್‌ಲೈನ್ ಮಾಧ್ಯಮಗಳಿಗೆ ಅನ್ವಯವಾಗಲಿದೆ.
ಮಕ್ಕಳ ಆರೋಗ್ಯ, ಪೌಷ್ಟಿಕಾಂಶ ಅನುಕೂಲಗಳ ಕುರಿತಂತೆ ತಪ್ಪು ತಪ್ಪು ಮಾಹಿತಿ ನೀಡುವುದು, ಆಕರ್ಷಕ ಉಡುಗೊರೆ ಮೂಲಕ ಉತ್ಪನ್ನ ಖರೀದಿಸುವಂತೆ ಮಕ್ಕಳಿಗೆ ಪುಸಲಾಯಿಸುವುದು, ಮಕ್ಕಳಲ್ಲಿ ತಮ್ಮ ದೇಹದ ಬಗ್ಗೆಯೇ ಕೀಳರಿಮೆ ಉಂಟಾಗುವಂತಹ ಜಾಹೀರಾತುಗಳನ್ನು ನೀಡದಂತೆ ಕಂಪನಿಗಳಿಗೆ ನಿರ್ಬಂಧ ವಿಧಿಸಲಾಗಿದೆ.
‘ದಾರಿ ತಪ್ಪಿಸುವ ಜಾಹೀರಾತು ಹಾಗೂ ಜಾಹೀರಾತು ಪ್ರಚಾರ ವೇಳೆ ಎಚ್ಚರ ವಹಿಸುವಿಕೆ ಮಾರ್ಗಸೂಚಿ 2022’ರಡಿ ಪ್ರಚಾರ ರಾಯಭಾರಿಗಳು ಜಾಹೀರಾತು ಪ್ರಚಾರ ಮಾಡುವ ಮುನ್ನ ಹೆಚ್ಚಿನ ಕಾಳಜಿ ತೆಗೆದುಕೊಳ್ಳಬೇಕು ಎಂದು ಸೂಚಿಸಲಾಗಿದೆ. ಒಂದು ಉತ್ಪನ್ನದ ಜಾಹೀರಾತು ನೀಡಿ ಮತ್ತೊಂದು ಉತ್ಪನ್ನದ ಬಗ್ಗೆ ಪ್ರಚಾರ ಪಡೆಯುವ ಪರೋಕ್ಷ ಜಾಹೀರಾತುಗಳಿಗೂ ನಿರ್ಬಂಧ ಹೇರಲಾಗಿದೆ. ಅಲ್ಲದೆ ದಾರಿ ತಪ್ಪಿಸುವ ಜಾಹೀರಾತುಗಳ ವಿರುದ್ಧ ದೂರು ನೀಡಲು ನಾಗರಿಕರು ಹಾಗೂ ನಾಗರಿಕ ಸಂಘಟನೆಗಳಿಗೆ ಹೆಚ್ಚಿನ ಅಧಿಕಾರವನ್ನು ಮಾರ್ಗಸೂಚಿಯಲ್ಲಿ ನೀಡಲಾಗಿದೆ. ನಾಗರಿಕ ವ್ಯವಹಾರಗಳ ಸಚಿವಾಲಯ ಮಾರ್ಗಸೂಚಿಯನ್ನು ಹೊರಡಿಸಿದೆ.
(ಬಾಕ್ಸ್)
ದಾರಿ ತಪ್ಪಿಸುವ ಜಾಹೀರಾತುಗಳಿವು
- ಮಾನ್ಯತೆ ಪಡೆದ ಸಂಸ್ಥೆಯಿಂದ ಸೂಕ್ತ ರೀತಿ ಹಾಗೂ ವೈಜ್ಞಾನಿಕವಾಗಿ ಸಾಬೀತಾಗದಿದ್ದರೂ ತನ್ನ ಉತ್ಪನ್ನದಲ್ಲಿ ಆರೋಗ್ಯ ಅಥವಾ ಪೌಷ್ಟಿಕಾಂಶ ಕೊಡುಗೆಗಳಿವೆ ಎಂದು ಹೇಳುವುದು.
- ಮಕ್ಕಳಲ್ಲಿ ತಮ್ಮ ದೇಹದ ಬಗ್ಗೆ ಋುಣಾತ್ಮಕ ಭಾವನೆ ಮೂಡುವಂತೆ ಮಾಡುವ ಅಥವಾ ನಿರ್ದಿಷ್ಟಉತ್ಪನ್ನ ಅಥವಾ ಸೇವೆಯು ಮಗು ತಾನು ನಿತ್ಯ ಸೇವಿಸುತ್ತಿರುವ ನೈಸರ್ಗಿಕ ಅಥವಾ ಸಾಂಪ್ರದಾಯಿಕ ಆಹಾರಕ್ಕಿಂತ ಉತ್ತಮವಾಗಿದೆ ಎಂದು ಸಾರುವುದು.
- ಮಕ್ಕಳ ಭೌತಿಕ ಆರೋಗ್ಯ ಅಥವಾ ಮಾನಸಿಕ ಸ್ವಾಸ್ಥ್ಯಕ್ಕೆ ಪ್ರತಿಕೂಲವಾಗುವಂತಹ ಅಭ್ಯಾಸಗಳನ್ನು ಪ್ರೋತ್ಸಾಹಿಸುವುದು
- ಜಾಹೀರಾತು ನೀಡುತ್ತಿರುವ ತನ್ನ ಉತ್ಪನ್ನ ಸೇವನೆ ಮಾಡಿದರೆ ಮಗುವಿನ ಬುದ್ಧಿಶಕ್ತಿ ಅಥವಾ ದೈಹಿಕ ಅರ್ಹತೆ ಅಥವಾ ಅಸಾಧಾರಣ ಮಾನ್ಯತೆ ಸಿಗುತ್ತದೆಂದು ಯಾವುದೇ ಆಧಾರ ಅಥವಾ ವೈಜ್ಞಾನಿಕ ಪುರಾವೆ ಇಲ್ಲದೆ ಹೇಳುವುದು
