21 ವರ್ಷಕ್ಕಿಂತ ಕಿರಿಯ ಯುವಕ ಮದುವೆಯಾಗುವಂತಿಲ್ಲ, ಆದ್ರೆ ಲಿವ್ ಇನ್‌ನಲ್ಲಿರಬಹುದು: ಹೈಕೋರ್ಟ್!
* ಪಂಜಾಬ್ ನ್ಯಾಯಾಲಯದಿಂದ ವಿಶೇಷ ತೀರ್ಪು
* 21 ವರ್ಷಕ್ಕಿಂತ ಕಿರಿಯ ಯುವಕ ಮದುವೆಯಾಗುವಂತಿಲ್ಲ, ಆದ್ರೆ ಲಿವ್ ಇನ್‌ನಲ್ಲಿರಬಹುದು
* ದಂಪತಿಯಂತಿರಲು ಯುವತಿ ಸಮ್ಮತಿ ಅಗತ್ಯ
ಚಂಡೀಗಢ(ಡಿ.21): ಹೆಣ್ಣುಮಕ್ಕಳ ಮದುವೆಯ ಕನಿಷ್ಠ ವಯಸ್ಸನ್ನು ಹೆಚ್ಚಿಸುವ ಬಗ್ಗೆ ವಿವಾದವಿದೆ. ಏತನ್ಮಧ್ಯೆ, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಇತ್ತೀಚೆಗೆ ಪ್ರಕರಣವೊಂದರಲ್ಲಿ 21 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾವುದೇ ಯುವಕ ಮದುವೆಯಾಗಬಾರದು. ಆದರೆ ಅವನು 18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಯುವತಿಯೊಂದಿಗೆ ಆಕೆಯ ಅನುಮತಿ ಮೇರೆಗೆ ದಂಪತಿಯಂತೆ ವಾಸಿಸಬಹುದು ಎಂದು ಹೇಳಿದೆ. 2018ರ ಮೇ ತಿಂಗಳ ಸುಪ್ರೀಂ ಕೋರ್ಟ್ ಕೊಟ್ಟ ಯಾವುದೇ ಯುವ ಜೋಡಿಯು ಮದುವೆಯಾಗದೇ ಒಟ್ಟಿಗೆ ಬಾಳಬಹುದು ಎಂದು ಹೈಕೋರ್ಟ್ ಕೊಟ್ಟ ತೀರ್ಪಿನ ಹಿನ್ನೆಲೆ ಇದನ್ನು ಪ್ರಕಟಿಸಲಾಗಿದೆ.
ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯ ಯುವ ದಂಪತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಹೈಕೋರ್ಟ್ ನಡೆಸುತ್ತಿದೆ. ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ವಾಸಿಸುತ್ತಿರುವ ದಂಪತಿ ಈ ಅರ್ಜಿಯ ಮೂಲಕ ರಕ್ಷಣೆ ಕೋರಿದ್ದಾರೆ. ಇವರಿಬ್ಬರೂ 18 ವರ್ಷ ಮೇಲ್ಪಟ್ಟವರಾಗಿದ್ದಾರೆ. ಯುವಕನಿಗೆ 18 ವರ್ಷ, ಆದರೆ ಹಿಂದೂ ವಿವಾಹ ಕಾಯ್ದೆಯಡಿ ಕಾನೂನುಬದ್ಧವಾಗಿ ಅವನು 21 ವರ್ಷ ವಯಸ್ಸಿನವರೆಗೆ ಮದುವೆಯಾಗಲು ಸಾಧ್ಯವಿಲ್ಲ.
ಇದಾದ ಬಳಿಕ ಯುವ ದಂಪತಿ ರಕ್ಷಣೆ ಕೋರಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಕುಟುಂಬದವರಿಂದ ಜೀವ ಬೆದರಿಕೆ ಇದೆ ಎಂದೂ ಈ ಜೋಡಿ ಆರೋಪಿಸಿದೆ. ಕುಟುಂಬಸ್ಥರು ಈ ಸಂಬಂಧದ ಅಡ್ಡಿ ಪಡಿಸುತ್ತಿದದಾರೆಂದೂ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ತಮ್ಮ ಕುಟುಂಬಸ್ಥರು ತಮ್ಮನ್ನು ಕೊಲೆ ಮಾಡುತ್ತಾರೆ ಎಂಬ ಭಯದಲ್ಲಿದ್ದಾರೆ ಎಂದು ಯುವ ದಂಪತಿಗಳ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಹೈಕೋರ್ಟ್‌ನಲ್ಲಿ ವಿಚಾರಣೆ ವೇಳೆ ನ್ಯಾಯಮೂರ್ತಿ ಹರನರೇಶ್ ಸಿಂಗ್ ಗಿಲ್ ಅವರು ಪ್ರತಿಯೊಬ್ಬ ವ್ಯಕ್ತಿಯ ಸ್ವಾತಂತ್ರ್ಯ ಮತ್ತು ಜೀವನವನ್ನು ರಕ್ಷಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ. ಯುವ ದಂಪತಿಗಳ ಕೋರಿಕೆಯ ಮೇರೆಗೆ ನಿರ್ಧಾರ ತೆಗೆದುಕೊಂಡು ಅವರಿಗೆ ಭದ್ರತೆ ಒದಗಿಸುವಂತೆ ಗುರುದಾಸ್‌ಪುರ ಎಸ್‌ಎಸ್‌ಪಿಗೆ ನ್ಯಾಯಾಧೀಶರು ಸೂಚಿಸಿದ್ದಾರೆ.