ನವದೆಹಲಿ(ಅ.20): ದೇಶಾದ್ಯಂತ ಇರುವ ಮೆಡಿಕಲ್‌ ಸ್ಟೋರ್‌ಗಳ ಸಿಬ್ಬಂದಿ (ಫಾರ್ಮಸಿಸ್ಟ್‌)ಯನ್ನು ಜನರಿಗೆ ಕೊರೋನಾ ಲಸಿಕೆ ನೀಡಲು ಕೇಂದ್ರ ಸರ್ಕಾರ ಬಳಸಿಕೊಳ್ಳಲು ಮುಂದಾಗಿದೆ. ಇದಕ್ಕಾಗಿ ಅವರಿಗೆ ತರಬೇತಿ ನೀಡುವ ಸಾಧ್ಯತೆಯಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ಈಗಾಗಲೇ ಇನ್ಸುಲಿನ್‌ ಇಂಜೆಕ್ಷನ್‌ ನೀಡಲು ಮೆಡಿಕಲ್‌ ಸ್ಟೋರ್‌ನವರಿಗೆ ತರಬೇತಿ ನೀಡಲಾಗುತ್ತಿದೆ. ಅದೇ ರೀತಿ ಕೊರೋನಾ ಲಸಿಕೆ ಬಂದಕೂಡಲೇ ಎಲ್ಲರಿಗೂ ತ್ವರಿತವಾಗಿ ಲಸಿಕೆ ನೀಡಲು ಇವರನ್ನು ಬಳಸಿಕೊಳ್ಳುವ ಬಗ್ಗೆ ಚಿಂತನೆ ನಡೆದಿದೆ. ಆದರೆ, ಹಾಲಿ ಇರುವ ನಿಯಮಗಳಡಿ ಇವರು ಲಸಿಕೆ ನೀಡಲು ಅವಕಾಶವಿಲ್ಲ. ಹೀಗಾಗಿ ನಿಯಮಗಳಿಗೆ ತಿದ್ದುಪಡಿ ತರಬೇಕಾಗುತ್ತದೆ.

ಜನವರಿ ವೇಳೆಗೆ ಯಾವುದಾದರೊಂದು ಕೊರೋನಾ ಲಸಿಕೆ ಬರಬಹುದು. ತಕ್ಷಣ ಅದನ್ನು 3 ಕೋಟಿ ಜನರಿಗೆ ನೀಡಲು ಸಾಧ್ಯವಾಗುವಷ್ಟುವ್ಯಾಕ್ಸಿನೇಟರ್‌ಗಳು (ನುರಿತ ಲಸಿಕೆ ನೀಡುವವರು) ದೇಶದಲ್ಲಿ ಲಭ್ಯವಿದ್ದಾರೆ. ಆದರೆ, ಅಗತ್ಯ ಸೇವೆಗಳಲ್ಲಿರುವ ಸಿಬ್ಬಂದಿ, ವೈದ್ಯರು, ನರ್ಸ್‌ಗಳು ಸೇರಿದಂತೆ 30 ಕೋಟಿ ಜನರಿಗೆ ಜೂನ್‌ ಒಳಗೆ ಲಸಿಕೆ ನೀಡುವ ಗುರಿಯನ್ನು ಸರ್ಕಾರ ಹೊಂದಿದೆ. ಹೀಗಾಗಿ ದೇಶದಲ್ಲಿರುವ 8 ಲಕ್ಷ ಫಾರ್ಮಸಿಸ್ಟ್‌ಗಳನ್ನು ಬಳಸಿಕೊಳ್ಳುವ ಸಾಧ್ಯತೆಯಿದೆ. ಇವರ ಜೊತೆಗೆ ಎಂಬಿಬಿಎಸ್‌ ಹಾಗೂ ನರ್ಸಿಂಗ್‌ ಕೋರ್ಸ್‌ಗಳ ಕೊನೆಯ ವರ್ಷದ ವಿದ್ಯಾರ್ಥಿಗಳನ್ನೂ ಬಳಸಿಕೊಳ್ಳುವ ಸೂಚನೆಯಿದೆ ಎಂದು ಹೇಳಲಾಗಿದೆ.