ಶ್ರೀನಗರದಲ್ಲಿ ಆಯೋಜಿಸಿರುವ ಜಿ20 ಶೃಂಗಸಭೆ ಹಲವು ಕಾರಣಗಳಿಂದ ಭಾರಿ ಸಂಚಲನ ಸೃಷ್ಟಿಸಿದೆ. ಇದೀಗ ಈ ಸಭೆಯಲ್ಲಿ ನಟ ರಾಮಚರಣ್ ಪಾಲ್ಗೊಂಡು ನಾಟು ನಾಟು ಹಾಡಿಗೆ ಅಂತಾರಾಷ್ಟ್ರೀಯ ಗಣ್ಯರೊಂದಿಗೆ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ಶ್ರೀನಗರ(ಮೇ.22): ಆಸ್ಕರ್ ವಿನ್ನಿಂಗ್ ನಟ ರಾಮ್ ಚರಣ ಜಿ20 ಶೃಂಗಸಭೆಗಾಗಿ ಶ್ರೀನಗರ ತಲುಪಿದ್ದಾರೆ. ಜಿ20 ಸಭೆಯಲ್ಲಿನ ಸಿನಿಮಾ ಪ್ರವಾಸೋದ್ಯ ಕುರಿತು ಮಹತ್ವದ ಸಭೆಯಲ್ಲಿ ರಾಮ್ ಚರಣ್ ಪಾಲ್ಗೊಂಡಿದ್ದಾರೆ. ಇದೇ ವೇಳೆ ಅಂತಾರಾಷ್ಟ್ರೀಯ ಗಣ್ಯರೊಂದಿಗೆ ನಾಟು ನಾಟು ಹಾಡಿನ ಸಿಗ್ನೇಚರ್ ಸ್ಟೆಪ್ಸ್ ಹಾಕಿದ್ದಾರೆ. ಇತ್ತ ಗಣ್ಯರು ನಟನ ಜೊತೆ ಹೆಜ್ಜೆ ಹಾಕಿ ಸಂಭ್ರಮಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ಆರ್ಥಿಕ ಬೆಳವಣಿಗೆ ಹಾಗೂ ಸಾಂಸ್ಕೃತಿಕ ಉಳಿವಿಕೆಯಲ್ಲಿ ಸಿನಿಮಾ ಪ್ರವಾಸೋದ್ಯಮದ ಮಹತ್ವದ ಅನ್ನೋ ವಿಷಯದ ಕುರಿತು ಶ್ರೀನಗರಲ್ಲಿ ನಡೆಯುತ್ತಿರುವ ಜಿ20 ಸಭೆಯಲ್ಲಿ ವಿಚಾರಗೋಷ್ಠಿ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಆರ್‌ಆರ್‌ಆರ್ ಚಿತ್ರದ ಖ್ಯಾತಿಯ ನಟ ರಾಮ್ ಚರಣ್ ಪಾಲ್ಗೊಂಡು ಮಾತನಾಡಿದ್ದಾರೆ. ಕಾಶ್ಮೀರ ಪ್ರವಾಸೋದ್ಯಮದ ಕುರಿತು ಮಾತನಾಡಿದ್ದಾರೆ. ನನ್ನ ತಂದೆ ಕಾಶ್ಮೀರದಲ್ಲಿ ಹಲವು ಚಿತ್ರಗಳನ್ನು ಶೂಟಿಂಗ್ ಮಾಡಿದ್ದಾರೆ. 1986ರಿಂದ ನಾನು ಕಾಶ್ಮೀರ ಪ್ರವಾಸ ಮಾಡುತ್ತಿದ್ದೇನೆ. 2016ರಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದೇನೆ. ಇಲ್ಲಿನ ಅದ್ಭುತ ತಾಣಗಳು ಮನಮೋಹಕ ಎಂದು ಹೊಗಳಿದ್ದಾರೆ.
ಪತ್ನಿ ಅನುಷ್ಕಾ ಮುಂದೆ ನಾಟು ನಾಟು ಹಾಡಿಗೆ ಹೆಜ್ಜೆ ಹಾಕಿದ ಕೊಹ್ಲಿ,ವಿಡಿಯೋ ವೈರಲ್!
ಹಲವು ದೇಶದ ಗಣ್ಯರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ರಾಮ್ ಚರಣ ವಿಚಾರ ಗೋಷ್ಠಿಯಲ್ಲಿ ನಾಟು ನಾಟು ಹಾಡಿಗೆ ಗಣ್ಯರೊಂದಿಗೆ ಹೆಜ್ಜೆ ಹಾಕಿದ್ದಾರೆ. ಜಿ20 ಸಭೆಯಲ್ಲಿ ಪಾಲ್ಗೊಂಡ ಗಣ್ಯರು ವೇದಿಕೆಯಲ್ಲಿ ನಾಟು ನಾಟು ಹಾಡಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದ್ದಾರೆ. ರಾಮ್ ಚರಣ್ ಸಿಗ್ನೇಟರ್ ಸ್ಟೆಪ್ಸ್ ಕುರಿತು ವಿವರಣೆ ನೀಡಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ.
ಕಾಶ್ಮೀರದಲ್ಲಿ ಜಿ20 ಸಭೆ ಆಯೋಜನೆಯಿಂದ ಪಾಕಿಸ್ತಾನ, ಚೀನಾ ಸೇರಿದಂತೆ ಕೆಲ ದೇಶಗಳು ಭಾರತದ ವಿರುದ್ಧ ಆಕ್ರೋಶ ಹೊರಹಾಕಿದೆ. ಆದರೆ ಈ ಮಾತಿಗೆ ಸೊಪ್ಪು ಹಾಕದ ಭಾರತ ಭಾರಿ ಭದ್ರತೆಯಲ್ಲಿ ಕಾಶ್ಮೀರದಲ್ಲಿ ಸಭೆ ಆರಂಭಗೊಂಡಿದೆ. ಪಾಕಿಸ್ತಾನ ಬೆಂಬಲಿತ ಉಗ್ರರ ದಾಳಿಯ ಆತಂಕದ ನಡುವೆಯೇ, ಪ್ರವಾಸೋದ್ಯಮ ಕುರಿತ ಜಿ20 ದೇಶಗಳ ಕಾರ್ಯಪಡೆಯ 3 ದಿನಗಳ ಸಭೆಗೆ ಸೋಮವಾರ ಇಲ್ಲಿ ಚಾಲನೆ ನೀಡಲಾಯಿತು. 2019ರಲ್ಲಿ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು ಮಾಡಿದ ನಂತರ ರಾಜ್ಯದಲ್ಲಿ ನಡೆಯುತ್ತಿರುವ ಪ್ರಮುಖ ಅಂತಾರಾಷ್ಟ್ರೀಯ ಸಭೆ ಇದಾಗಿದೆ.
ಸಭೆಗೆ ವಿವಿಧ ದೇಶಗಳ 60 ಪ್ರತಿನಿಧಿಗಳು ಆಗಮಿಸಿದ್ದು ಅವರನ್ನು ಸಾಂಪ್ರದಾಯಿಕ ರೀತಿಯಲ್ಲಿ ಸ್ವಾಗತಿಸಲಾಯಿತು. ಸಭೆಯ ಹಿನ್ನೆಲೆಯಲ್ಲಿ ಇಡೀ ಕಾಶ್ಮೀರ ಕಣಿವೆಯಲ್ಲಿ ಹಿಂದೆಂದೂ ಕಂಡುಕೇಳರಿಯದ ಭದ್ರತೆ ಒದಗಿಸಲಾಗಿದ್ದು, ಯಾವುದೇ ಲೋಪಕ್ಕೆ ಅವಕಾಶ ನೀಡದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.ಚೀನಾ, ಪಾಕಿಸ್ತಾನ ಮತ್ತು ಟರ್ಕಿಯಂಥ ವೈರಿ ದೇಶಗಳ ಪ್ರತಿನಿಧಿಗಳನ್ನು ಹೊರತುಪಡಿಸಿದರೆ ಉಳಿದ ಬಹುತೇಕ ದೇಶಗಳ ಪ್ರತಿನಿಧಿಗಳು ಸಭೆಗೆ ಹಾಜರಾಗುವ ಮೂಲಕ ಕಾಶ್ಮೀರದ ಮೇಲಿನ ಭಾರತದ ಹಕ್ಕನ್ನು ಬಲವಾಗಿ ಸಮರ್ಥಿಸಿದ್ದಾರೆ.
ಕಾಶ್ಮೀರ ಹಿಂದಿನಂತಿಲ್ಲ, ಜಿ20ಗಾಗಿ ಭೂಲೋಕದ ಸ್ವರ್ಗವಾದ ಪಂಡಿತರ ನಾಡು!
ಎಸ್‌ಕೆಐಸಿಸಿ ಸಭಾಂಗಣದಲ್ಲಿ ಕಾರ್ಯಕ್ರಮಕ್ಕ ಚಾಲನೆ ನೀಡಿ ಮಾತನಾಡಿದ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಖಾತೆ ಸಚಿವ ಜಿ.ಕಿಶನ್ ರೆಡ್ಡಿ, ‘ಚಲನಚಿತ್ರ ಪ್ರವಾಸೋದ್ಯಮವು ರಾಜ್ಯದಲ್ಲಿನ ಪ್ರವಾಸೋದ್ಯಮವನ್ನು ಉತ್ತೇಜಿಸುವ ಪ್ರಮುಖ ಮಾಧ್ಯಮವಾಗಿ ಹೊರಹೊಮ್ಮಿದೆ. ಪ್ರವಾಸೋದ್ಯಮ ಸ್ಥಳೀಯರಿಗೆ ಆತಿಥ್ಯ ಮತ್ತು ಆಹಾರ ವಲಯದಲ್ಲಿ ಹೊಸ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ. ರಾಜ್ಯದ ಅಭಿವೃದ್ಧಿಗಾಗಿ ಸರ್ಕಾರವು ಸಮಗ್ರ ಯೋಜನೆಯನ್ನು ರೂಪಿಸಿದೆ’ ಎಂದರು.
