ನವದೆಹಲಿ[ಫೆ.28]: ವೈರಿ ಪಡೆಯನ್ನು ಹಿಮ್ಮೆಟ್ಟಿಸುವ ವೇಳೆ ಪತನಗೊಂಡ ಮಿಗ್‌- 21 ಬಿಸನ್‌ ಯುದ್ಧ ವಿಮಾನದ ಪೈಲಟ್‌ ಅಭಿನಂದನ್‌ ಅವರನ್ನು ಸೆರೆ ಹಿಡಿದಿರುವ ವಿಡಿಯೋಗಳನ್ನು ಪಾಕಿಸ್ತಾನ ಬುಧವಾರ ಬಿಡುಗಡೆ ಮಾಡಿದೆ. ಶತ್ರುಪಾಳದಲ್ಲಿ ಸೆರೆ ಸಿಕ್ಕರೂ ಕೆಚ್ಚೆದೆ ಪ್ರದರ್ಶಿಸಿರುವ ವಿಂಗ್‌ ಕಮಾಂಡರ್‌ ಅಭಿನಂದನ್‌ ತಮ್ಮ ಕಾರ್ಯಚರಣೆಯ ವಿವರಗಳನ್ನು ಬಹಿರಂಗ ಪಡಿಸಲು ನಿರಾಕರಿಸಿದ್ದಾರೆ.

ಸೆರೆ ಸಿಕ್ಕವೇಳೆ ಕೈಗಳನ್ನು ಹಿಂದೆ ಕಟ್ಟಿಕಣ್ಣಿಗೆ ಕಪ್ಪು ಪಟ್ಟಿಕಟ್ಟಿಅವರನ್ನು ಕರೆದೊಯ್ಯಲಾಗಿತ್ತು. ಮುಖದಿಂದ ರಕ್ತ ಸುರಿಯುತ್ತಿದ್ದರೂ ತಮ್ಮ ಗುರುತಿನ ಚೀಟಿ, ಹುದ್ದೆ ಮತ್ತು ವೈವಾಹಿಕ ಜೀವನದ ಮಾಹಿತಿಯನ್ನು ಹೊರತುಪಡಿಸಿ ಉಳಿದ ಯಾವುದೇ ಸಂಗತಿಯನ್ನು ಅವರು ಪಾಕಿಸ್ತಾನಕ್ಕೆ ನೀಡಿಲ್ಲ.