ನವದೆಹಲಿ[ಫೆ.20]: ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಬಹುಮತ ಗಳಿಸಿ ದಿಲ್ಲಿಯಲ್ಲಿ 3ನೇ ಅವಧಿಗೆ ಸರ್ಕಾರ ರಚನೆ ಮಾಡಿರುವ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಆಪ್‌ ಸರ್ಕಾರ, ಪ್ರಣಾಳಿಕೆ ಘೋಷಣೆಯಂತೆ ದೆಹಲಿ ನಿವಾಸಿಗರ ಮನೆ ಬಾಗಿಲಿಗೇ ಪಡಿತರ ಪೂರೈಕೆ, ದಿನದ 24 ಗಂಟೆಯೂ ವಿದ್ಯುತ್‌ ಪೂರೈಕೆ ಸೇರಿದಂತೆ 10 ಯೋಜನೆಗಳ ಜಾರಿಗೆ ಮುಂದಾಗಿದೆ. ಇದಕ್ಕಾಗಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ಸಚಿವ ಸಂಪುಟ ಸದಸ್ಯರು ಹಾಗೂ ಹಿರಿಯ ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದರು.

ಆಮ್‌ ಆದ್ಮಿ ಪಕ್ಷದ ಪ್ರಣಾಳಿಕೆಯಾದ ಗ್ಯಾರೆಂಟಿ ಕಾರ್ಡ್‌ನಲ್ಲಿ ಭರವಸೆ ನೀಡಲಾಗಿದ್ದ 10 ಯೋಜನೆಗಳ ಜಾರಿಗಾಗಿ ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಯೋಜನೆಗಳ ಜಾರಿಗೆ ಮುಂದಿನ ಬಜೆಟ್‌ನಲ್ಲಿ ಹಣ ಮೀಸಲಿಡಲಾಗುತ್ತದೆ ಎಂದು ಆಪ್‌ ಸಂಚಾಲಕ ಕೇಜ್ರಿವಾಲ್‌ ತಿಳಿಸಿದರು. ಈ ಪ್ರಕಾರ, ದೆಹಲಿಯ ನಿವಾಸಿಗಳಿಗೆ ಮೂಲಭೂತ ಸೌಕರ್ಯಗಳು, ವಿದ್ಯುತ್‌ ಪೂರೈಕೆ ಹಾಗೂ 17 ಲಕ್ಷ ಜನತೆಯ ಮನೆ ಬಾಗಿಲಿಗೇ ಪಡಿತರ ಪೂರೈಕೆ ಜಾರಿಗೆ ನಿರ್ಧರಿಸಲಾಗಿದೆ. ಈಗಾಗಲೇ, ಜಾತಿ ಪ್ರಮಾಣ ಪತ್ರ ಹಾಗೂ ಆದಾಯ ಪ್ರಮಾಣ ಪತ್ರಗಳ ಸೇವೆಗಳು ದೆಹಲಿಗರ ಮನೆ ಬಾಗಿಲಲ್ಲೇ ಲಭ್ಯವಿವೆ.

ಏತನ್ಮಧ್ಯೆ, ದೆಹಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಕೇಜ್ರಿವಾಲ್‌ ಅವರು ಇದೇ ಮೊದಲ ಬಾರಿಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡಿ 20 ನಿಮಿಷಗಳ ಕಾಲ ಚರ್ಚೆ ನಡೆಸಿದರು. ಆದರೆ, ಉಭಯ ನಾಯಕರು ಯಾವೆಲ್ಲಾ ವಿಚಾರಗಳು ಚರ್ಚೆಗೆ ಬಂದವು ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಮತ್ತೊಂದೆಡೆ, ದೆಹಲಿ ವಿಧಾನಸಭೆಯ 3 ದಿನಗಳ ಅಧಿವೇಶನವು ಫೆ.24ರಿಂದ ಆರಂಭವಾಗಲಿದೆ ಎಂದು ಕೇಜ್ರಿವಾಲ್‌ ಮಾಹಿತಿ ನೀಡಿದರು.