ರಾಜ್ಯಸಭೆಯ ಎಎಪಿ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾ ಅವರನ್ನು ಕೈಬಿಟ್ಟ ನಂತರ, ಅವರು ಪ್ರಧಾನಿ ಮೋದಿ ವಿರುದ್ಧ ಮಾತನಾಡಲು ಹೆದರುತ್ತಿದ್ದಾರೆ ಎಂದು ಪಕ್ಷ ಆರೋಪಿಸಿದೆ. ಪಕ್ಷದ ಹಲವು ನಿರ್ಧಾರಗಳಿಗೆ ಚಡ್ಡಾ ಬೆಂಬಲ ನೀಡಿಲ್ಲ ಎಂದು ಎಎಪಿ ದೂರಿದೆ.

ನವದೆಹಲಿ (ಏ.3): ರಾಜ್ಯಸಭೆಯ ಎಎಪಿ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾ ಅವರನ್ನು ಕೈಬಿಟ್ಟ ಬೆನ್ನಲ್ಲೇ, ಅವರು ಎಎಪಿ ವಿರುದ್ಧ ವಿಡಿಯೋ ಸಂದೇಶವೊಂದನ್ನು ಬಿಡುಗಡೆ ಮಾಡಿದ್ದರು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಆಮ್ ಆದ್ಮಿ ಪಕ್ಷ (ಎಎಪಿ), ರಾಘವ್ ಚಡ್ಡಾ ಅವರ ವಿರುದ್ಧ ವಾಗ್ದಾಳಿ ನಡೆಸಿದೆ. ಎಎಪಿ ರಾಷ್ಟ್ರೀಯ ಮಾಧ್ಯಮ ಮುಖ್ಯಸ್ಥ ಅನುರಾಗ್ ಧಾಂಡಾ, ರಾಘವ್ ಚಡ್ಡಾ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಮಾತನಾಡಲು ಹೆದರುತ್ತಿದ್ದಾರೆ ಎಂದು ನೇರ ಆರೋಪ ಮಾಡಿದ್ದಾರೆ. "ಕಳೆದ ಕೆಲವು ವರ್ಷಗಳಿಂದ ರಾಘವ್, ನೀವು ಬದಲಾಗಿದ್ದೀರಿ. ನಿಮಗೆ ಮೋದಿ ವಿರುದ್ಧ ಮಾತನಾಡಲು ಭಯವಾಗುತ್ತಿದೆ. ದೇಶದ ನಿಜವಾದ ಸಮಸ್ಯೆಗಳನ್ನು ಎತ್ತಿ ಹಿಡಿಯಲು ನಿಮಗೆ ಭಯವಾಗಿದೆ," ಎಂದು ಧಾಂಡಾ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಾವು ಕೇಜ್ರಿವಾಲ್ ಅವರ ಸೈನಿಕರು

"ನಾವು ಅರವಿಂದ್ ಕೇಜ್ರಿವಾಲ್ ಅವರ ಸೈನಿಕರು. ನಿರ್ಭೀತವಾಗಿ ಮಾತನಾಡುವುದೇ ನಮ್ಮ ಮೂಲ ಗುರುತು. ಯಾರಾದರೂ ನರೇಂದ್ರ ಮೋದಿಯವರಿಗೆ ಭಯಪಟ್ಟರೆ, ಅವರು ದೇಶಕ್ಕಾಗಿ ಹೇಗೆ ಹೋರಾಡುತ್ತಾರೆ ಎಂದು ನಂಬೋದು?" ಎಂದು ಧಾಂಡಾ ಪ್ರಶ್ನಿಸಿದ್ದಾರೆ. ಪಕ್ಷಕ್ಕೆ ಸಂಸತ್ತಿನಲ್ಲಿ ಸಿಗುವ ಸೀಮಿತ ಸಮಯವನ್ನು ದೇಶ ಉಳಿಸಲು ಬಳಸಬೇಕೇ ಹೊರತು, "ವಿಮಾನ ನಿಲ್ದಾಣದ ಕ್ಯಾಂಟೀನ್‌ಗಳಲ್ಲಿ ಸಮೋಸಾ ಬೆಲೆ ಕಡಿಮೆ ಮಾಡುವ ಬಗ್ಗೆ ಚರ್ಚಿಸಲು ಅಲ್ಲ" ಎಂದು ಅವರು ಲೇವಡಿ ಮಾಡಿದ್ದಾರೆ.

ಪಕ್ಷದ ನಿರ್ಧಾರಕ್ಕೆ ಚಡ್ಡಾ ಬೆಂಬಲಿಸಲಿಲ್ಲವೇ?

ಇತ್ತೀಚಿನ ಬೆಳವಣಿಗೆಗಳನ್ನು ಉಲ್ಲೇಖಿಸಿದ ಧಾಂಡಾ, ಗುಜರಾತ್‌ನಲ್ಲಿ ಎಎಪಿ ಕಾರ್ಯಕರ್ತರನ್ನು ಬಂಧಿಸಿದಾಗ ರಾಘವ್ ಚಡ್ಡಾ ಸದನದಲ್ಲಿ ಆ ವಿಷಯವನ್ನು ಪ್ರಸ್ತಾಪಿಸಲಿಲ್ಲ ಎಂದು ದೂರಿದರು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ನಿರ್ಣಯ ಮಂಡಿಸಿದಾಗ ರಾಘವ್ ಚಡ್ಡಾ ಸಹಿ ಹಾಕಲು ನಿರಾಕರಿಸಿದ್ದರು. ಅಷ್ಟೇ ಅಲ್ಲದೆ, ಪಕ್ಷದ ಸಂಸದರು ಸದನದಿಂದ ಹೊರನಡೆದಾಗಲೂ ಅವರು ತಮ್ಮ ಆಸನದಲ್ಲೇ ಕುಳಿತುಕೊಂಡಿದ್ದರು ಎಂದು ಧಾಂಡಾ ಆರೋಪಿಸಿದ್ದಾರೆ.

ರಾಘವ್ ಚಡ್ಡಾ ಅವರ ಸಮರ್ಥನೆ ಏನು?

ರಾಜ್ಯಸಭೆಯಲ್ಲಿ ಪಕ್ಷದ ಪರವಾಗಿ ಮಾತನಾಡುವ ಹಕ್ಕನ್ನು ಕಸಿದುಕೊಂಡಿರುವ ಪಕ್ಷದ ಕ್ರಮಕ್ಕೆ ಪ್ರತಿಕ್ರಿಯಿಸಿರುವ ರಾಘವ್ ಚಡ್ಡಾ, ವಿಡಿಯೋ ಸಂದೇಶದಲ್ಲಿ "ನನಗೆ ಸಂಸತ್ತಿನಲ್ಲಿ ಮಾತನಾಡಲು ಅವಕಾಶ ಸಿಕ್ಕಾಗಲೆಲ್ಲಾ ನಾನು ಸಾರ್ವಜನಿಕ ಸಮಸ್ಯೆಗಳನ್ನೇ ಎತ್ತಿದ್ದೇನೆ. ಬಹುಶಃ ನಾನು ಸಾಮಾನ್ಯವಾಗಿ ಚರ್ಚಿಸದ ವಿಷಯಗಳನ್ನು ಪ್ರಸ್ತಾಪಿಸಿರಬಹುದು... ಆದರೆ ಸಾರ್ವಜನಿಕ ಸಮಸ್ಯೆಗಳನ್ನು ಎತ್ತುವುದು ಅಪರಾಧವೇ? ನಾನು ತಪ್ಪು ಮಾಡಿದ್ದೇನಾ? ನಾನು ಏನಾದರೂ ತಪ್ಪು ಕೆಲಸ ಮಾಡಿದ್ದೇನಾ?" ಎಂದು ರಾಘವ್ ಚಡ್ಡಾ ಪ್ರಶ್ನಿಸಿದ್ದಾರೆ.