ಎಲ್ಲರಿಗಿಂತ ಮೊದಲು ದೆಹಲಿ ಚುನಾವಣೆಗೆ 11 ಅಭ್ಯರ್ಥಿಗಳ ಘೋಷಿಸಿದ ಆಪ್!
ದೆಹಲಿ ಚುನಾವಣೆಗೆ ಆಮ್ ಆದ್ಮಿ ಪಾರ್ಟಿ ಭರ್ಜರಿ ತಯಾರಿ ಮಾಡುತ್ತಿದೆ. ಎಲ್ಲರಿಗಿಂತ ಮೊದಲೇ 11 ಅಭ್ಯರ್ಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಬಿಜೆಪಿ ಹಾಗೂ ಕಾಂಗ್ರೆಸ್‌ನಿಂದ ಆಪ್ ಸೇರಿಕೊಂಡ ನಾಯಕರೂ ಮೊದಲ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.
ನವದೆಹಲಿ(ನ.21) ದೆಹಲಿ ವಿಧಾನಸಭೆ ಚುನಾವಣೆಗೆ ಆಡಳಿತರೂಢ ಆಮ್ ಆದ್ಮಿ ಪಾರ್ಟಿ ಈಗಾಗಲೇ ತಯಾರಿ ಮಾಡಿಕೊಳ್ಳುತ್ತಿದೆ. ಕಳೆದ ಕೆಲ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಆಪ್‌ಗೆ ನಿರೀಕ್ಷಿತ ಯಶಸ್ಸು ಸಿಕ್ಕಿಲ್ಲ. ಆಪ್ ಜನಪ್ರಿಯತೆ ಕುಂದುತ್ತಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದರ ಬೆನ್ನಲ್ಲೇ ಆಪ್ ಚುನಾವಣೆ ಗೆಲ್ಲಲು ಈಗಿನಿಂದಲೇ ಕಸರತ್ತು ಆರಂಭಿಸಿದೆ. ಇದೀಗ ದೆಹಲಿ ವಿಧಾನಸಭೆ ಚುನಾವಣೆಯ 11 ಕ್ಷೇತ್ರಗಳಿಗೆ ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿಗಳ ಘೋಷಿಸಿದೆ.
ಬಿಜೆಪಿ ಮಾಜಿ ನಾಯಕ ಬ್ರಹ್ಮ್ ಸಿಂಗ್ ತನ್ವಾರ್, ಬಿಬಿಟಿ ತ್ಯಾಗಿ, ಅನಿಲ್ ಜಾ, ಕಾಂಗ್ರೆಸ್ ತೊರೆದು ಆಪ್ ಸೇರಿದ ಚೌಧರಿ ಜುಬೇರ್ ಅಹಮ್ಮದ್, ವೀರ್ ದಿಂಗಾನ್ ಹಾಗೂ ಸುಮೇಶ್ ಶೋಕೇನ್‌ಗೆ ಆಪ್ ಟಿಕೆಟ್ ನೀಡಿದೆ. ದೆಹಲಿ ವಿಧಾನಸಭಾ ಚುನಾವಣೆಗೆ ಮೊದಲ ಹಂತದಲ್ಲಿ ಟಿಕೆಟ್ ಗಿಟ್ಟಿಸಿಕೊಂಡ ನಾಯಕರ ಪಟ್ಟಿ ಇಲ್ಲಿದೆ.
ಯಮುನಾ ನದಿಯಲ್ಲಿ ಮುಳುಗಿ ಪ್ರತಿಭಟಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಆಸ್ಪತ್ರೆ ದಾಖಲು!
1) ಬ್ರಹ್ಮ್ ಸಿಂಗ್ ತನ್ವಾರ್: ಚತ್ತಾರ್‌ಪುರ್
2) ರಾಮ್ ಸಿಂಗ್ ನೇತಾಜಿ: ಬದರಪುರ್
3) ಬಿಬಿ ತ್ಯಾಗಿ : ಲಕ್ಷ್ಮಿ ನಗರ್
4) ಚೌಧರಿ ಜುಬೇರ್ ಅಹಮ್ಮದ್ : ಸೇಲಂಪುರ್
5) ವೀರ್ ಸಿಂಗ್ ದಿಂಗಾನ್: ಸೀಮಾಪುರಿ
6) ಸರಿತಾ ಸಿಂಗ್: ರೋಹ್ಟಾಸ್ ನಗರ್
7) ಗೌರವ್ ಶರ್ಮಾ:ಘೊಂಡಾ
8) ದೀಪಕ್ ಸಿಂಘ್ಲಾ: ವಿಶ್ವಾಸ್ ನಗರ್
9)ಮನೋಜ್ ತ್ಯಾಜಿ: ಕರವಾಲ್ ನಗರ್
10)ಅನಿಲ್ ಜಾ: ಕಿರಾರಿ
11) ಸುಮೇಶ್ ಶೋಕೀನ್: ಮತಿಯಾಲ
ದೆಹಲಿ ವಿಧಾನಸಭೆ ಚುನಾವಣೆ ಮುಂದಿನ ವರ್ಷ ನಡೆಯಲಿದೆ. ದೆಹಲಿಯಲ್ಲಿ ಅಧಿಕಾರ ಮುಂದುವರಿಸಲು ಆಮ್ ಆದ್ಮಿ ಪಾರ್ಟಿ ತಯಾರಿ ಮಾಡಿಕೊಳ್ಳುತ್ತಿದೆ. ದೆಹಲಿ ಹಾಗೂ ಪಂಜಾಬ್ ಎರಡು ಭಾಗದಲ್ಲಿ ಆಪ್ ಸರ್ಕಾರವಿದೆ. ಇನ್ನು ಕಳೆದ ಹರ್ಯಾಣ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ ಸ್ಪರ್ಧಿಸಿತ್ತು. ದೆಹಲಿ ಹಾಗೂ ಪಂಜಾಬ್ ನಡುವೆ ಇರುವ ಹರ್ಯಾಣದಲ್ಲೇ ರೈತ ಪ್ರತಿಭಟನೆಗಳು ಹೆಚ್ಚು ಕಾವು ಪಡೆದುಕೊಂಡಿತ್ತು. ಈ ಪ್ರತಿಭಟೆಗಳಿಗೆ ಆಮ್ ಆದ್ಮಿ ಪಾರ್ಟಿ ಬೆಂಬಲ ನೀಡಿತ್ತು. ಹೀಗಾಗಿ ಹರ್ಯಾಣಧಲ್ಲಿ ಸರ್ಕಾರ ರಚಿಸುವ ವಿಶ್ವಾಸದಲ್ಲಿತ್ತು. ಆದರೆ ಹರ್ಯಾಣ ಜನತೆ ಬಿಜೆಪಿಗೆ ಮತ ಹಾಕಿದ್ದರು. ಹೀಗಾಗಿ ದೆಹಲಿಯಲ್ಲಿ ಒಂದು ಸಣ್ಣ ತಪ್ಪು ಮಾಡಿದರೂ ಅಧಿಕಾರ ಕೈತಪ್ಪಲಿದೆ ಅನ್ನೋ ಭೀತಿ ಆಪ್‌ಗೆ ಕಾಡುತ್ತಿದೆ. ಹೀಗಾಗಿ ಅರವಿಂದ್ ಕೇಜ್ರಿವಾಲ್ ಜನತೆಯಲ್ಲಿ ವಿಶೇಷ ಮನವಿ ಮಾಡಿದ್ದಾರೆ.
ಮಂಬರುವ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆಧ್ಮಿ ಪಾರ್ಟಿ ಸೋಲಿಸಲು ಅವರು( ಬಿಜೆಪಿ ಸೇರಿದಂತೆ ಎನ್‌ಡಿಎ ಮಿತ್ರ ಪಕ್ಷಗಳು) ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ. ಆದರೆ ದೆಹಲಿ ಜನತೆ ಇದಕ್ಕೆ ಅವಕಾಶ ಮಾಡಿಕೊಡಬಾರದು. ದೇಶದಲ್ಲಿ ಸಾಮಾನ್ಯ ಜನರಿಂದ ಹಿಡಿದು ಎಲ್ಲರೂ ನಂಬಿಕೆ ಇಡಬಹುದಾದ ಏಕೈಕ ಪಕ್ಷ ಆಮ್ ಆಧ್ಮಿ ಪಾರ್ಟಿ. ಹೀಗಾಗಿ ದೆಹಲಿಯಲ್ಲಿರುವ ಜನ, ದೆಹಲಿ ಹೊರಗಿರುವ ದೆಹಲಿ ಮೂಲದ ಜನ ಇಲ್ಲಿಗೆ ಆಗಮಿಸಿ ಚುನಾವಣೆಯಲ್ಲಿ ತೊಡಗಿಕೊಳ್ಳಬೇಕು. ಆಪ್ ಪಾರ್ಟಿಯನ್ನು ಗೆಲುವಿನ ದಡ ಸೇರಿಸಿಲು ಎಲ್ಲರೂ ತನು ಮನ, ಧನಗಳಿಂದ ಸಹಕರಿಸಿಬೇಕು. ಯುವ ಸಮೂಹ ರಜೆ ಹಾಕಿ ಆಪ್ ಗೆಲ್ಲಿಸಲು ಹೋರಾಡಬೇಕು ಎಂದು ಅರವಿಂದ್ ಕೇಜ್ರಿವಾಲ್ ಕರೆ ಕೊಟ್ಟಿದ್ದಾರೆ. ಈ ಚುನಾವಣೆ ನಿರ್ಣಾಯಕವಾಗಿದೆ. ಆಮ್ ಆದ್ಮಿ ಪಾರ್ಟಿಯನ್ನು ಉಳಿಸಲು, ಬೆಳೆಸಲು ಈ ಚುನಾವಣೆ ಅತ್ಯಂತ ಮುಖ್ಯ. ಕೆಲವರು ಪಾರ್ಟಿಯನ್ನು ಮುಗಿಸುವ ಪ್ರಯತ್ನದಲ್ಲಿದ್ದಾರೆ. ಆದರೆ ದೆಹಲಿ ಜನತೆ ಆಪ್ ಕೈ ಹಿಡಿಯುತ್ತಾರೆ ಅನ್ನೋ ವಿಶ್ವಾಸವಿದೆ ಎಂದಿದ್ದಾರೆ.