Asianet Suvarna News Asianet Suvarna News

ಅವಳಿ ಕಟ್ಟಡ ಧ್ವಂಸಕ್ಕೂ ಮುನ್ನ ಓರ್ವನ ಗಾಢ ನಿದ್ದೆ, ‘ಕುಂಭಕರ್ಣ’ನನ್ನು ಎಬ್ಬಿಸಲು ಅಧಿಕಾರಿಗಳ ಹರಸಾಹಸ!

ನೋಯ್ಡಾದ ಟ್ವಿನ್‌ ಟವರ್‌ ಧ್ವಂಸ ವೇಳೆ ಬೆಳಗಿನ 7 ಗಂಟೆ ಸಮೀಪಿಸಿದ್ದರೂ ಒಬ್ಬ ಮಲಗೇ ಇದ್ದ- ‘ಕುಂಭಕರ್ಣ’ನನ್ನು ಎಬ್ಬಿಸಿಕೊಂಡು ಬರುವಲ್ಲಿ ಅಧಿಕಾರಿಗಳು ಹರಸಾಹಸ.

A young man found deep sleep when Noida twin Towers demolition gow
Author
First Published Aug 29, 2022, 11:14 AM IST

ನೋಯ್ಡಾ (ಆ.29): ಕಟ್ಟಡ ನಿಯಮಗಳನ್ನು ಗಾಳಿಗೆ ತೂರಿ, ಅಧಿಕಾರಿಗಳಿಂದ ಅಕ್ರಮವಾಗಿ ಅನುಮತಿ ಪಡೆದು ದೆಹಲಿ ಸಮೀಪದ ನೋಯ್ಡಾದಲ್ಲಿ ನಿರ್ಮಿಸಲಾಗಿದ್ದ ಬರೋಬ್ಬರಿ 100 ಮೀಟರ್‌ ಎತ್ತರದ ಸೂಪರ್‌ಟೆಕ್‌ ಅವಳಿ ಗೋಪುರಗಳನ್ನು ಸುಪ್ರೀಂಕೋರ್ಚ್‌ ಆದೇಶದಂತೆ ಭಾನುವಾರ ನೆಲಸಮಗೊಳಿಸಲಾಗಿದೆ. ಇದರೊಂದಿಗೆ, ಅಕ್ರಮವಾಗಿ ಕಟ್ಟಡ ಕಟ್ಟಿದರೆ ಯಾವ ರೀತಿಯ ಶಿಕ್ಷೆಯಾಗುತ್ತದೆ ಎಂಬುದಕ್ಕೆ ಸೂಪರ್‌ಟೆಕ್‌ ಗೋಪುರ ದೇಶದ ಬಿಲ್ಡರ್‌ಗಳಿಗೆ ದೊಡ್ಡ ಪಾಠವಾಗಿದೆ. ‘ವಾಟರ್‌ಫಾಲ್‌ ಆಂತರಿಕ ಸ್ಫೋಟ’ ಎಂಬ ಎಂಜಿನಿಯರಿಂಗ್‌ ಕ್ಷೇತ್ರದ ಅದ್ಭುತ ತಂತ್ರಜ್ಞಾನವನ್ನು ಬಳಸಿಕೊಂಡು ಈ ಕಟ್ಟಡವನ್ನು ಕೇವಲ 9 ಸೆಕೆಂಡುಗಳಲ್ಲಿ ಧ್ವಂಸಗೊಳಿಸಲಾಗಿದೆ. ಯಾವುದೇ ಅಪಾಯವಿಲ್ಲದೆ ಕಾರ್ಯಾಚರಣೆ ಸುಸೂತ್ರವಾಗಿ ನಡೆದಿದ್ದು, ದೇಶದ ಅತಿದೊಡ್ಡ ‘ಆಪರೇಶನ್‌ ಡೆಮಾಲಿಶನ್‌’ ಎನ್ನಿಸಿಕೊಂಡಿದೆ. ಮುಂಜಾಗ್ರತಾ ಕ್ರಮಗಳ ಕಾರಣ, ಪಕ್ಕದ ಕಟ್ಟಡದ ಗೋಡೆ ಹಾಗೂ ಕೆಲ ಕಿಟಕಿಗಳಿಗೆ ಹಾನಿಯಾಗಿದ್ದು ಬಿಟ್ಟರೆ ಮಿಕ್ಕ ಕಟ್ಟಡಗಳಿಗೆ ಯಾವುದೇ ತೊಂದರೆಯಾಗಿಲ್ಲ. ಮಧ್ಯಾಹ್ನ 2.30ರ ವೇಳೆಗೆ ಕಟ್ಟಡವನ್ನು ಸ್ಫೋಟಿಸಲಾಗಿದ್ದು, ದೈತ್ಯ ಎತ್ತರದ ಬಿಲ್ಡಿಂಗ್‌ ನೋಡನೋಡುತ್ತಿದ್ದಂತೆ ನೆಲಕಚ್ಚಿದೆ. ತಕ್ಷಣವೇ ಅಪಾರ ಪ್ರಮಾಣದ ಧೂಳು ಆಕಾಶದೆತ್ತರಕ್ಕೆ ಹಬ್ಬಿದೆ. ಅದನ್ನು ನಿಯಂತ್ರಿಸಲು ಜಲಸಿಂಪಡಣೆ ಯಂತ್ರ ಹಾಗೂ ಧೂಳು ನಿಗ್ರಹ ಗನ್‌ಗಳನ್ನು ಬಳಸಲಾಗಿದೆ.

ಎಲ್ಲರೂ ಎದ್ದರೂ, ಒಬ್ಬನದ್ದು ಗಾಢ ನಿದ್ದೆ!
ಅವಳಿ ಕಟ್ಟಡ ಧ್ವಂಸ ಕಾರ್ಯಾಚರಣೆ ಭಾಗವಾಗಿ ಭಾನುವಾರ ಬೆಳಗ್ಗೆ 7 ಗಂಟೆಯೊಳಗೆ ಸುತ್ತಮುತ್ತಲ 15 ಕಟ್ಟಡಗಳಿಂದ ಎಲ್ಲಾ ಜನರನ್ನೂ ತೆರವು ಮಾಡಿದರೂ ಒಬ್ಬ ಮಾತ್ರ ಗಾಢ ನಿದ್ದೆಯಲ್ಲಿ ಮುಳುಗಿದ್ದ ಪ್ರಸಂಗ ನಡೆದಿದೆ. ಎಲ್ಲಾ ಕಟ್ಟಡಗಳಿಂದ ಜನರನ್ನು ತೆರವುಗೊಳಿಸಿದ ಬಗ್ಗೆ ಭದ್ರತಾ ಸಿಬ್ಬಂದಿ ಅಂಕಿ ಅಂಶಗಳನ್ನು ಖಚಿತಪಡಿಸಿಕೊಳ್ಳುವ ವೇಳೆ ಒಂದು ಕಟ್ಟಡದಲ್ಲಿ ಒಬ್ಬ ವ್ಯಕ್ತಿ ಬಾಕಿ ಉಳಿದುಕೊಂಡಿದ್ದ. ಆತ ಕುಂಭಕರ್ಣ ನಿದ್ದೆಯಲ್ಲಿದ್ದ ವಿಷಯ ಬೆಳಕಿಗೆ ಬಂದಿದೆ. ಕೊನೆಗೆ ಆತುರಾತುರವಾಗಿ ಆತ ಇದ್ದ ಮನೆಗೆ ತೆರಳಿದ ಭದ್ರತಾ ಸಿಬ್ಬಂದಿ, ಗಾಢ ನಿದ್ದೆಯಲ್ಲಿದ್ದ ಆತನನ್ನು ಹರಸಾಹಸ ಮಾಡಿ ಎಬ್ಬಿಸಿ ಹೊರಗೆ ಕಳುಹಿಸಿದರು.

5000 ಜನ, 2700 ವಾಹನ, 200 ಪ್ರಾಣಿಗಳ ತೆರವು
 ಅಕ್ರಮ ಅವಳಿ ಕಟ್ಟಡ ತೆರವು ಕಾರ್ಯಾಚರಣೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಸಮೀಪದ 2 ಕಟ್ಟಡಗಳಿಂದ 5000 ನಾಗರಿಕರು, 2700 ವಾಹನ, 200 ಸಾಕು ಪ್ರಾಣಿಗಳನ್ನು ಬೆಳಗ್ಗೆ 7 ಗಂಟೆಗೆ ಮುನ್ನವೇ ತೆರವುಗೊಳಿಸಲಾಗಿತ್ತು. ಜೊತೆಗೆ ಸುತ್ತಮುತ್ತಲಿನ ಹಲವು ಕಟ್ಟಡಗಳಿಗೆ ವಿದ್ಯುತ್‌ ಮತ್ತು ಅನಿಲ ಸಂಪರ್ಕವನ್ನು ಕಡಿತಗೊಳಿಸಲಾಗಿತ್ತು. ಕಟ್ಟಡ ಧ್ವಂಸ ಕಾರ್ಯಾಚರಣೆ ಪೂರ್ಣಗೊಂಡು ಅಕ್ಕಪಕ್ಕದ ಕಟ್ಟಡಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ಖಚಿತಪಡಿಸಿದ ಬಳಿಕ ಸಂಜೆ ವೇಳೆ ಮತ್ತೆ ಹಲವು ಜನರಿಗೆ ತಮ್ಮ ಮನೆಗಳಿಗೆ ಮರಳಲು ಅವಕಾಶ ಕಲ್ಪಿಸಿಕೊಡಲಾಯಿತು.

ಈವರೆಗಿನ ಅತಿ ಎತ್ತರದ ಕಟ್ಟಡ ಧ್ವಂಸ ಕಾರಾರ‍ಯಚರಣೆ
ನೋಯ್ಡಾದ ಟ್ವಿನ್‌ ಟವರ್‌ ಕಟ್ಟಡ ಧ್ವಂಸವು ‘ದೇಶದ ಈವರೆಗಿನ ಅತಿ ಎತ್ತರದ ಕಟ್ಟಡದ ಧ್ವಂಸ ಕಾರಾರ‍ಯಚರಣೆ’ ಎಂಬ ಖ್ಯಾತಿಗೆ ಪಾತ್ರವಾಗಿದೆ. 100 ಮೀ. ಎತ್ತರದ ಕಟ್ಟಡವನ್ನು ಈ ಕಾರಾರ‍ಯಚರಣೆಯಲ್ಲಿ ಧ್ವಂಸಗೊಳಿಸಲಾಗಿದೆ. ಕೇರಳದಲ್ಲಿ 68 ಮೀ. ಎತ್ತರದ ಅಪಾರ್ಚ್‌ಮೆಂಟನ್ನು ಇದೇ ಮಾದರಿಯಲ್ಲಿ ಧ್ವಂಸ ಮಾಡಲಾಗಿತ್ತು. ಇದು ಧ್ವಂಸಗೊಂಡ ಈವರೆಗಿನ ಅತಿ ಹೆಚ್ಚು ಎತ್ತರದ ಕಟ್ಟಡ ಎನ್ನಿಸಿಕೊಂಡಿತ್ತು.

ನೋಯ್ಡಾದ ಅವಳಿ ಗೋಪುರ ಇನ್ನು ಇತಿಹಾಸ: 9 ಸೆಕೆಂಡ್‌ಗಳಲ್ಲೇ ಧ್ವಂಸ..!

40 ಬೀದಿ ನಾಯಿಗಳನ್ನೂ ರಕ್ಷಿಸಿ ಮಾನವೀಯತೆ
ನೋಯ್ಡಾ: ಕಟ್ಟಡ ಧ್ವಂಸ ಕಾರ್ಯಾಚರಣೆಗೂ ಮುನ್ನ, ಸುತ್ತಮುತ್ತಲಿನ ಪ್ರದೇಶದಲ್ಲಿ ಸಂಚರಿಸುತ್ತಿದ್ದ ಸುಮಾರು 40 ಬೀದಿಗಳನ್ನು ಸ್ಥಳೀಯ ಸ್ವಯಂ ಸೇವಕ ಸಂಘದ ಸದಸ್ಯರು ರಕ್ಷಿಸಿ, ತಾತ್ಕಾಲಿಕವಾಗಿ ಕಟ್ಟಡವೊಂದರಲ್ಲಿ ಇರಿಸಿದ್ದರು. ಈ ಮೂಲಕ ಧ್ವಂಸ ಕಾರ್ಯಾಚರಣೆ ವೇಳೆ ಅವುಗಳನ್ನು ರಕ್ಷಿಸುವ ಕೆಲಸ ಮಾಡಿದರು. ಎನ್‌ಜಿಒಗಳ ಈ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ನೋಯ್ದಾದ ಅವಳಿ ಗೋಪುರ ನೆಲಸಮ: ವಿಡಿಯೋ ನೋಡಿ

ಧ್ವಂಸಕ್ಕೆ ಬಳಸಿದ ಸ್ಫೋಟಕ 3 ಅಗ್ನಿ, 12 ಬ್ರಹ್ಮೋಸ್‌, 4 ಪೃಥ್ವಿ ಕ್ಷಿಪಣಿಗೆ ಸಮ!
ಸೂಪರ್‌ಟೆಕ್‌ ಕಂಪನಿ ನೋಯ್ಡಾದಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಿದ್ದ ಅವಳಿ ಗೋಪುರಗಳನ್ನು ನೆಲಸಮಗೊಳಿಸಲು 3700 ಕೆ.ಜಿ. ಸ್ಫೋಟಕವನ್ನು ಬಳಸಲಾಗಿದೆ. ಇದು ಮೂರು ಅಗ್ನಿ-5, 12 ಬ್ರಹ್ಮೋಸ್‌ ಹಾಗೂ 4 ಪೃಥ್ವಿ ಕ್ಷಿಪಣಿಗಳಿಗೆ ಸಮ ಎಂಬುದು ಗಮನಾರ್ಹ. ಅಗ್ನಿ ಕ್ಷಿಪಣಿಯ ಸಿಡಿತಲೆಯಲ್ಲಿ 1500 ಕೆ.ಜಿ. ಸ್ಫೋಟಕ ತುಂಬಲಾಗುತ್ತದೆ. ಬ್ರಹ್ಮೋಸ್‌ ಕ್ಷಿಪಣಿ 300 ಕೆ.ಜಿ. ಸ್ಫೋಟಕ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.

Follow Us:
Download App:
  • android
  • ios