ಇಲ್ಲೊಬ್ಬಳು ಮಹಿಳೆ ನಿಗದಿಗಿಂತ ಹೆಚ್ಚು ಲಗೇಜ್ ತುಂಬಿಸಿಕೊಂಡು ಬಂದಿದ್ದು ಏರ್‌ಫೋರ್ಟ್‌ನ ಕಸ್ಟಮ್ಸ್ ಅಧಿಕಾರಿಗಳು ದಂಡ ಪಾವತಿಸುವಂತೆ ಹೇಳಿದಾಗ ಆಕೆ ಬಾಂಬ್ ಬಾಂಬ್ ಎಂದು ಕಿರುಚಾಡಿ ಎಲ್ಲರನ್ನು ಬೆಚ್ಚಿ ಬೀಳಿಸಿದ ಘಟನೆ ಮುಂಬೈನ ಏರ್‌ಪೋರ್ಟ್‌ನಲ್ಲಿ ನಡೆದಿದೆ.
ಮುಂಬೈ : ಇತ್ತೀಚೆಗೆ ವಿಮಾನ ಪ್ರಯಾಣ ಹಾಗೂ ವಿಮಾನ ನಿಲ್ದಾಣಗಳು ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇವೆ. ವಿಮಾನದಲ್ಲಿ ಪ್ರಯಾಣಿಸುವ ವೇಳೆ ರೈಲು ಗೂಡ್ಸ್ ಗಾಡಿಗಳಲ್ಲಿ ಹೋಗುವಂತೆ ಇರುವ ಲಗೇಜ್‌ಗಳನ್ನೆಲ್ಲಾ ತುಂಬಿಸಿಕೊಂಡು ಹೋಗಲಾಗದು ನಿಗದಿತ ಲಗೇಜ್ ಭಾರಕ್ಕಿಂತ ತುಸುವೇ ಹೆಚ್ಚಾದರೂ ಪ್ರತಿ ಫೀಸಿಗೆ 2 ಸಾವಿರ ರೂಪಾಯಿಯಂತೆ ದುಬಾರಿ ದಂಡ ಅಥವಾ ಶುಲ್ಕ ಪಾವತಿ ಮಾಡಬೇಕು. ಆದರೆ ಇಲ್ಲೊಬ್ಬಳು ಮಹಿಳೆ ಹೀಗೆ ನಿಗದಿಗಿಂತ ಹೆಚ್ಚು ಲಗೇಜ್ ತುಂಬಿಸಿಕೊಂಡು ಬಂದಿದ್ದು, ಇದನ್ನು ಗಮನಿಸಿದ ಏರ್‌ಫೋರ್ಟ್‌ನ ಕಸ್ಟಮ್ಸ್ ಅಧಿಕಾರಿಗಳು ದಂಡ ಪಾವತಿಸುವಂತೆ ಹೇಳಿದಾಗ ಆಕೆ ಬಾಂಬ್ ಬಾಂಬ್ ಎಂದು ಕಿರುಚಾಡಿ ಎಲ್ಲರನ್ನು ಬೆಚ್ಚಿ ಬೀಳಿಸಿದ ಘಟನೆ ಮುಂಬೈನ ಏರ್‌ಪೋರ್ಟ್‌ನಲ್ಲಿ ನಡೆದಿದೆ.
ಮೇ 29 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹೆಚ್ಚುವರಿ ಲಗೇಜ್‌ಗೆ ಹಣ ನೀಡುವಂತೆ ಕೇಳಿದ್ದಕ್ಕೆ ಅಸಮಾಧಾನಗೊಂಡ ಮಹಿಳೆ ಬ್ಯಾಗ್‌ನಲ್ಲಿ ಬಾಂಬಿದೆ ಎಂದು ಹೆದರಿಸಿದ್ದಾಳೆ. ಇದರಿಂದ ಮುಂಬೈ (Mumbai) ಅಂತಾರಾಷ್ಟ್ರೀಯ ವಿಮಾನ (International Airport) ನಿಲ್ದಾಣದ ಸಿಬ್ಬಂದಿ ಗಾಬರಿಗೊಂಡಿದ್ದು, ಆಕೆಯನ್ನು ವಶಕ್ಕೆ ಪಡೆದಿದ್ದಾರೆ. ನಂತರ ಆಕೆಯ ಬ್ಯಾಗ್ ಅನ್ನು ತಪಾಸಣೆ ಮಾಡಿದಾಗ ಅದರಲ್ಲಿ ಯಾವುದೇ ಅನುಮಾನಾಸ್ಪದ ವಸ್ತುಗಳು ಇರಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮೇ 29 ರಂದು ದಕ್ಷಿಣ ಮುಂಬೈನ ಗೃಹಿಣಿಯೊಬ್ಬರು ತನ್ನ ಪತಿ ಮತ್ತು ಮಕ್ಕಳೊಂದಿಗೆ ತನ್ನ ತಾಯಿಯನ್ನು ಭೇಟಿ ಮಾಡಲು ಮುಂಬೈನಿಂದ ವಿಮಾನದ ಮೂಲಕ ಕೋಲ್ಕತ್ತಾಗೆ ಹೊರಟಿದ್ದರು. ಚೆಕ್-ಇನ್ ಕೌಂಟರ್ ತಲುಪಿದ ನಂತರ, ಅವರು ವಿಮಾನಯಾನ ಉದ್ಯೋಗಿಯೊಬ್ಬರಿಗೆ ಬೋರ್ಡಿಂಗ್ ಪಾಸ್ ಕೇಳಿದ್ದಾರೆ ಮತ್ತು ಎರಡು ಬ್ಯಾಗ್‌ಗಳನ್ನು ಸಿಬ್ಬಂದಿಗೆ ನೀಡಿದ್ದಾರೆ. ಆದರೆ ಏರ್‌ಲೈನ್ಸ್ ನಿಯಮಗಳ ಪ್ರಕಾರ, ಪ್ರತಿ ದೇಶೀಯ ಫ್ಲೈಯರ್‌ಗೆ ಗರಿಷ್ಠ 15 ಕೆಜಿ ತೂಕದ ಒಂದೇ ಚೀಲವನ್ನು ತೆಗೆದುಕೊಂಡು ಹೋಗುವುದಕ್ಕೆ ಮಾತ್ರ ಅವಕಾಶವಿದೆ. ಆದರೆ ಮಹಿಳೆಯ ಬ್ಯಾಗ್ ಒಟ್ಟು 22.05 ಕೆಜಿ ತೂಕವಿದ್ದ ಕಾರಣ, ಹೆಚ್ಚುವರಿ ಲಗೇಜ್‌ಗೆ ಹಣ ನೀಡುವಂತೆ ಕೇಳಲಾಗಿದೆ ಎಂದು ವಿಮಾನ ನಿಲ್ದಾಣ ಸಿಬ್ಬಂದಿ ತಿಳಿಸಿದ್ದಾರೆ.
ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಕಚ್ಚಿದ ಚೇಳು!
ಆದರೆ ಹೆಚ್ಚುವರಿ ತೂಕದ ಹಣ ನೀಡಲು ನಿರಾಕರಿಸಿದ ಮಹಿಳೆ ಏರ್‌ಲೈನ್ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾಳೆ. ಅಷ್ಟೇ ಅಲ್ಲದೇ ಏರ್‌ಪೋರ್ಟ್ ಸಿಬ್ಬಂದಿಗೆ ಪೀಕಲಾಟ ನೀಡಲು ನಿರ್ಧರಿಸಿದ ಆಕೆ ಇನ್ನೊಂದು ಬ್ಯಾಗ್‌ನಲ್ಲಿ ಬಾಂಬ್ ಇದೆ ಎಂದು ಕುಚೇಷ್ಟೆ ಮೆರೆದಿದ್ದಾಳೆ. ಇದಾದ ಬಳಿಕ ಕರ್ತವ್ಯನಿರತ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF) ಸಿಬ್ಬಂದಿ ಆಕೆಯ ಬ್ಯಾಗ್ ಅನ್ನು ಪರಿಶೀಲಿಸಿದರೂ ಅದರಲ್ಲಿ ಅನುಮಾನಾಸ್ಪದ ವಸ್ತುಗಳು ಯಾವುದೂ ಕಂಡು ಬಂದಿಲ್ಲ. ಆದರೆ ಮಹಿಳೆಯ ಕಿರುಚಾಟದಿಂದ ವಿಮಾನ ನಿಲ್ದಾಣದಲ್ಲಿ ಸ್ವಲ್ಪ ಸಮಯದವರೆಗೆ ಭಯ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ನಂತರ ಮಹಿಳೆಯನ್ನು ಮುಂಬೈನ ಸಹಾರ್ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಆಕೆಯ ವಿರುದ್ಧಇತರರ ಜೀವ ಮತ್ತು ಸುರಕ್ಷತೆಗೆ ಅಪಾಯ ಆತಂಕ ತಂದೊಡಿದ್ದಕ್ಕಾಗಿ ಎಫ್‌ಐಆರ್ (FIR) ದಾಖಲಿಸಲಾಗಿದೆ. ಅಲ್ಲದೇ ಆಕೆಯ ವಿರುದ್ಧ ಪೊಲೀಸರು ಆರೋಪ ಪಟ್ಟಿಯನ್ನು ಸಲ್ಲಿಸಿದ್ದಾರೆ.
ಸೀಫುಡ್ ಕೊಟ್ಟಿಲ್ಲ ಅಂತ ಗಗನಸಖಿಯ ಕೈ ಹಿಡಿದು ಎಳೆದಾಡಿದ ವಿದೇಶಿ ಪ್ರಜೆ ಅಂದರ್
