ಕ್ಯಾನ್ಸರ್ ವಿರುದ್ಧ ಗೆದ್ದು 52ನೇ ವಯಸ್ಸಿನಲ್ಲಿ ಮರು ಮದುವೆ... ಅಮ್ಮನ ನಿರ್ಧಾರ ಶ್ಲಾಘಿಸಿದ ಪುತ್ರ
- 52ನೇ ವಯಸ್ಸಿನಲ್ಲಿ ಮರು ಮದುವೆಯಾದ ತಾಯಿ
- ಕ್ಯಾನ್ಸರ್ ಹಾಗೂ ಖಿನ್ನತೆಯಿಂದ ಬಳಲುತ್ತಿದ್ದ ಮಹಿಳೆ
- ತಾಯಿಯ ನಿರ್ಧಾರವನ್ನು ಸ್ವಾಗತಿಸಿದ ಮಗ
ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದ ಮಹಿಳೆಯೊಬ್ಬರು ತಮ್ಮ 52ನೇ ವಯಸ್ಸಿನಲ್ಲಿ ಪ್ರೀತಿಸಿ ಮರು ಮದುವೆಯಾಗಿದ್ದು, ಅವರ ಈ ನಿರ್ಧಾರವನ್ನು ಅವರ ಪುತ್ರ ಹೃದಯತುಂಬಿ ಶ್ಲಾಘಿಸಿದ್ದಾರೆ. ಜೊತೆಗೆ ಹೀಗೆ ಒಂಟಿಯಾದ ಪೋಷಕರ ಮನಸ್ಸನ್ನು ಅರ್ಥ ಮಾಡಿಕೊಂಡು ಅವರಿಗೆ ಸಂಗಾತಿಯನ್ನು ಹುಡುಕಿ ಅಥವಾ ಅವರ ನಿರ್ಧಾರವನ್ನು ಗೌರವಿಸಿ ಗೌರವಯುತವಾಗಿ ಬಾಳಲು ಬಿಡಿ ಎಂದು ಸಾಮಾಜಿಕ ಜಾಲತಾಣದ ಮೂಲಕ ಸಮಾಜಕ್ಕೆ ಮನವಿ ಮಾಡಿದ್ದಾರೆ.
ಹೊಂದಿ ಬಾಳುವ, ನಿನಗೆ ನಾನು ನನಗೆ ನೀನು ಎಂದು ಜೀವನಪೂರ್ತಿ ಕೈ ಹಿಡಿದವನೊಂದಿಗೆ ಬದುಕುವ ಅವಕಾಶ ಎಲ್ಲರಿಗೂ ಇರುವುದಿಲ್ಲ. ಯೌವ್ವನದಲ್ಲಿ ಅಥವಾ ಕೈ ಕಾಲು ಗಟ್ಟಿ ಇರುವ ಕಾಲಕ್ಕಿಂತ ಇಳಿವಯಸ್ಸಿನಲ್ಲಿ ಸಂಗಾತಿಯ ಅಗತ್ಯ ತುಂಬಾ ಇರುವುದು. ಎಳವೆಯ ಪ್ರಾಯದಲ್ಲಿ ಪತಿ ಅಥವಾ ಪತ್ನಿಯನ್ನು ಕಳೆದುಕೊಂಡವರು ಮದುವೆಯಾಗದೇ ಇರುವವರು ಇಳಿವಯಸ್ಸಿನಲ್ಲಿ ಒಂಟಿತನದಿಂದ ಕೊರಗುತ್ತಿರುತ್ತಾರೆ. ಅದರಲ್ಲೂ ನಮ್ಮ ದೇಶದಲ್ಲಿ ಮಹಿಳೆಯರ ಬದುಕು ಕೆಲವು ಕುಟುಂಬಗಳಲ್ಲಿ ಶೋಚನೀಯವಾಗಿರುತ್ತದೆ. ಮದುವೆಯ ನಂತರ ಸಣ್ಣ ಪ್ರಾಯದಲ್ಲೇ ಪತಿಯನ್ನು ಕಳೆದುಕೊಂಡು ಪುಟ್ಟ ಮಕ್ಕಳಿರುವ ಅದೆಷ್ಟೋ ಹೆಣ್ಣು ಮಕ್ಕಳು ಮತ್ತೆ ಮದುವೆಯಾಗುವ ಗೋಜಿಗೆ ಹೋಗದೇ ಮಕ್ಕಳಲ್ಲೇ ಎಲ್ಲಾ ಖುಷಿಯನ್ನು ಕಂಡು ತಮ್ಮ ಜೀವನವನ್ನು ಸವೆಸುತ್ತಾರೆ. ಒಂಟಿಯಾಗಿ ಮಕ್ಕಳನ್ನು ಬೆಳೆಸಿ ಒಂದು ದಾರಿ ಸೇರಿಸುವ ಅನೇಕ ತಂದೆ ತಾಯಿಯರ ಮಾನಸಿಕ ಸ್ಥಿತಿಯನ್ನು ಅನೇಕ ಮಕ್ಕಳು(childrens) ಅರ್ಥ ಮಾಡಿಕೊಳ್ಳುವುದೇ ಇಲ್ಲ.
ಮೊಹಮ್ಮದ್ ಅಜರುದ್ದೀನ್ - ದಿನೇಶ್ ಕಾರ್ತಿಕ್ : ಮರು ಮದುವೆಯಾದ ಕ್ರಿಕೆಟಿಗರು
ಆದರೆ ಇಲ್ಲೊಬ್ಬ ಮಗ ಎಲ್ಲರಿಗಿಂತಲೂ ವಿಭಿನ್ನ, ಹೌದು ಜೀಮಿತ್ ಗಾಂಧಿ (Jimeet Gandhi) ಎಂಬ ಯುವಕ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ತಾಯಿ ಕ್ಯಾನ್ಸರ್ ಗೆದ್ದು ಬಂದು 52ನೇ ವಯಸ್ಸಿನಲ್ಲಿ ಬಾಳ ಸಂಗಾತಿಯನ್ನು ಹುಡುಕಿ ಮದುವೆಯಾದ ವಿಚಾರವನ್ನು ಸಾಮಾಜಿಕ ಜಾಲತಾಣವಾದ ಲಿಂಕ್ಡಿನ್‌ನಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೇ ಈ ಪೋಸ್ಟನ್ನು ಅವರ ತಾಯಿಗೆ(Mother) ಅರ್ಪಿಸಿದ್ದಾರೆ. ನನ್ನ ತಾಯಿ ಕ್ಯಾನ್ಸರ್ ಹಾಗೂ ಖಿನ್ನತೆ ಈ ಎರಡು ಕಾಯಿಲೆಗಳೊಂದಿಗೆ ಹೋರಾಡಿದರು. ಆದರೆ ಅವರು ಎಂದಿಗೂ ಭರವಸೆಯನ್ನು ಕಳೆದುಕೊಳ್ಳಲಿಲ್ಲ. 44ನೇ ವಯಸ್ಸಿನಲ್ಲಿ ತನ್ನ ಪತಿಯನ್ನು ಕಳೆದುಕೊಂಡ ಅಮ್ಮ 52ನೇ ವಯಸ್ಸಿನಲ್ಲಿ ಮತ್ತೊಮ್ಮೆ ಪ್ರೀತಿಯನ್ನು ಕಂಡು ಮದುವೆಯಾದರು ಎಂದು ಮಗ ಬರೆದುಕೊಂಡಿದ್ದಾನೆ.
ಸೆಂಚುರಿ ಬಾರಿಸಿ ಮರು ಮದುವೆಯಾದ ತಾತ... ಮೊಮ್ಮಕ್ಕಳಿಂದಲೇ ವಿವಾಹ ಆಯೋಜನೆ
ಜೀಮಿತ್ ತಾಯಿ ಕೇವಲ 44 ವರ್ಷದವರಿದ್ದಾಗ 2013ರಲ್ಲಿ ತನ್ನ ಪತಿಯನ್ನು ಕಳೆದುಕೊಂಡರು. ನಂತರ 2019ರಲ್ಲಿ ಅವರಿಗೆ ಮೂರನೇ ಹಂತದ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ನಂತರ ಅವರು ಅನೇಕ ಕೀಮೋಥೆರಪಿಗಳಿಗೆ ಒಳಗಾದರು. ಆದರೆ ಎರಡು ವರ್ಷಗಳ ನಂತರ ಮತ್ತೆ ಪುಟಿದೆದ್ದರು. ಆದರೆ ನಂತರದಲ್ಲಿ ಅವರನ್ನು ಕೋವಿಡ್ ಡೆಲ್ಟಾ ರೂಪಾಂತರವೂ ಬಾಧಿಸಿತ್ತು. ನಾನು ಬೇರೆಡೆ ನನ್ನ ವೃತ್ತಿಗಾಗಿ ದೂರ ಇದ್ದಿದ್ದರಿಂದ ಆಕೆ ಒಬ್ಬಂಟಿಯಾಗಿದ್ದರು. ಆದರೆ ಒಂದರ ಹಿಂದೆ ಒಂದರಂತೆ ಬಂದ ಎಲ್ಲಾ ಆಘಾತಗಳ ನಡುವೆಯೂ ಛಲ ಬಿಡದ ಆಕೆ ಭಾರತೀಯ ಸಮಾಜದಲ್ಲಿನ ಎಲ್ಲಾ ಕಳಂಕಗಳನ್ನು, ಎಲ್ಲಾ ನಿಷೇಧಗಳನ್ನು ಮುರಿಯಲು ನಿರ್ಧರಿಸಿದರು. ತನ್ನ 52ನೇ ವಯಸ್ಸಿನಲ್ಲಿ ಪ್ರೀತಿಯನ್ನು ಕಂಡುಕೊಂಡರು. ಅವಳೊಬ್ಬಳು ಸೈನಿಕಳು. ಅವಳೊಬ್ಬಳು ಹೋರಾಟಗಾರ್ತಿ ಎಂದು ತಾಯಿಯನ್ನು ಪುತ್ರ ಬಣ್ಣಿಸಿದ್ದಾನೆ. ಅಲ್ಲದೇ ನಿಮ್ಮ ಮನೆಯಲ್ಲೂ ಒಬ್ಬಂಟಿ ಪೋಷಕರಿದ್ದರೆ ಅವರು ಒಡನಾಡಿಯನ್ನು ಆಯ್ಕೆ ಮಾಡುವ ನಿರ್ಧಾರವನ್ನು ಸ್ವಾಗತಿಸಿ. ಪ್ರೀತಿ ಹಾಗೂ ಮಾನಸಿಕ ಆರೋಗ್ಯ ಎಲ್ಲಕ್ಕಿಂತ ಮುಖ್ಯ ಎಂದು ಅವರು ಬರೆದಿದ್ದಾರೆ.
ಫೆಬ್ರವರಿ 14 ಇವರ ತಾಯಿ ಮುಂಬೈನಲ್ಲಿ (Mumbai) ಮರು ಮದುವೆಯಾಗಿದ್ದಾಗಿ ಯುವಕ ಬರೆದುಕೊಂಡಿದ್ದಾರೆ.