Asianet Suvarna News Asianet Suvarna News

ಹೆಣ್ಣು ಮಕ್ಕಳ ಹಾಸ್ಟೆಲ್‌ಗೆ ನುಗ್ಗಿದ ಚಿರತೆ: ಕಕ್ಕಾಬಿಕ್ಕಿಯಾಗಿ ಓಡಿ ಕೋಣೆ ಸೇರಿದ ಮಕ್ಕಳು: ವೀಡಿಯೋ

ರಾಜಸ್ಥಾನದ ಉದಯ್‌ಪುರದಲ್ಲಿ ಚಿರತೆಯೊಂದು ಹೆಣ್ಣು ಮಕ್ಕಳು ವಾಸವಿದ್ದ ಹಾಸ್ಟೆಲ್‌ಗೆ ನುಗ್ಗಿದ್ದು, ಇದರಿಂದ ಹಾಸ್ಟೆಲ್‌ನಲ್ಲಿದ್ದ ವಿದ್ಯಾರ್ಥಿಗಳು ಗಲಿಬಿಲಿಗೊಂಡು ಓಡಿದ ಘಟನೆ ನಡೆದಿದೆ. 

A leopard broke into the girls hostel In Udaipur video goes viral akb
Author
First Published Dec 9, 2023, 2:49 PM IST

ರಾಜಸ್ಥಾನದ ಉದಯ್‌ಪುರದಲ್ಲಿ ಚಿರತೆಯೊಂದು ಹೆಣ್ಣು ಮಕ್ಕಳು ವಾಸವಿದ್ದ ಹಾಸ್ಟೆಲ್‌ಗೆ ನುಗ್ಗಿದ್ದು, ಇದರಿಂದ ಹಾಸ್ಟೆಲ್‌ನಲ್ಲಿದ್ದ ವಿದ್ಯಾರ್ಥಿಗಳು ಗಲಿಬಿಲಿಗೊಂಡು ಓಡಿದ ಘಟನೆ ನಡೆದಿದೆ. ಮುಂಜಾನೆಯ ಸಮಯದಲ್ಲಿ ಚಿರತೆಯೊಂದು ಹೆಣ್ಣು ಮಕ್ಕಳಿದ್ದ ಹಾಸ್ಟೆಲ್‌ಗೆ ನುಗ್ಗಿದ್ದು, ಇದರ ವೀಡಿಯೋ ಈಗ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ. ಇದರಿಂದ ಭಯಭೀತಗೊಂಡ ಹಾಸ್ಟೆಲ್ ಮಕ್ಕಳು ರೂಮ್‌ನಿಂದ ಹೊರಗೆ ಬರದೇ ಒಳಗೆಯೇ ಬಾಗಿಲು ಹಾಕಿಕೊಂಡು ಕುಳಿತಿದ್ದಾರೆ. ಇಂದು ಮುಂಜಾನೆ ಉದಯ್‌ಪುರದ ಹಾಸ್ಟೆಲ್‌ನಲ್ಲಿ ಈ ಘಟನೆ ನಡೆದಿದೆ. 

ಹಾಸ್ಟೆಲ್‌ನ ಸಿಸಿ ಕ್ಯಾಮರಾದಲ್ಲಿ ಈ ದೃಶ್ಯ ಸೆರೆ ಆಗಿದ್ದು, ವಿದ್ಯಾರ್ಥಿನಿಯೊಬ್ಬಳು ಮೆಟ್ಟಿಲು ಇಳಿದುಕೊಂಡು ಬರುವ ವೇಳೆ ಕೊಠಡಿಯೊಂದರಿಂದ ಚಿರತೆ ಆಗಮಿಸಿದನ್ನು ನೋಡಿ ಮೆಟ್ಟಿಲು ಹತ್ತಿ ಆಕೆ ಮೇಲೆ ಓಡಿದರೆ ಇತ್ತ ಚಿರತೆ ಮೆಟ್ಟಿಲಿಳಿದು ಕೆಳಗೆ ಓಡಿದೆ. ಸಿಸಿ ಕ್ಯಾಮರಾದಲ್ಲಿ ಈ ಅಪರೂಪದ ದೃಶ್ಯ ಸೆರೆ ಆಗಿದೆ. ಉದಯ್‌ಪುರದ ಹಿರಾನ್ ಮಗ್ರಿ ಸೆಕ್ಟರ್‌ನ ಮಹಿಳಾ ಹಾಸ್ಟೆಲ್‌ನಲ್ಲಿ ಈ ಘಟನೆ ನಡೆದಿದೆ. 

ಉತ್ತರಕನ್ನಡ: ಕಾಡು ಬೆಕ್ಕು ಹಿಡಿಯಲು ಹೋಗಿ ವಿದ್ಯುತ್ ತಂತಿ ತಗುಲಿ ಚಿರತೆ ಸಾವು

ಚಿರತೆ ಹೆಣ್ಣು ಮಕ್ಕಳ ಹಾಸ್ಟೆಲ್‌ಗೆ ನುಗ್ಗಿದ ವೀಡಿಯೋವನ್ನು  @vani_mehrotra ಎಂಬುವವರು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು,  ಇದು ನೋಡುಗರಲ್ಲಿ ಭಯ ಹಾಗೂ ಅಚ್ಚರಿ ಮೂಡಿಸಿದೆ. ಕೆಲ ವರದಿಗಳ ಪ್ರಕಾರ ಈ ಚಿರತೆಯೊಂದು ಹಾಸ್ಟೆಲ್ ಅವರಣದಲ್ಲೇ  ವಿದ್ಯಾರ್ಥಿನಿಯೋರ್ವಳನ್ನು ಬೆನ್ನಟ್ಟಲು ನೋಡಿದೆ ಹುಡುಗಿ ಸ್ವಲ್ಪದರಲ್ಲೇ ಚಿರತೆಯಿಂದ ತಪ್ಪಿಸಿಕೊಂಡಿದ್ದು, ಇತ್ತ ಭಯಭೀತಗೊಂಡ ಮಕ್ಕಳು ಚಿರತೆ ಹಾಸ್ಟೆಲ್‌ನಿಂದ ಹೊರಗೆ ಹೋಗುವವರೆಗೂ ಒಳಗೆಯೇ ಬಾಗಿಲು ಹಾಕಿಕೊಂಡು ಹೊರಗೆ ಬಾರದೇ ಕುಳಿತಿದ್ದಾರೆ. 

ತುಮಕೂರು: ದಾಳಿ ಮಾಡಿದ್ದ ಚಿರತೆಯ ಬೆದರಿಸಿ ಓಡಿಸಿ ಮಗು ಉಳಿಸಿಕೊಂಡ ತಂದೆ..!

ಇನ್ನು ಹಾಸ್ಟೆಲ್‌ನಲ್ಲಿ ಚಿರತೆ ಇರುವ ಸುದ್ದಿ ತಿಳಿದು ಹಾಸ್ಟೆಲ್ ಅಧಿಕಾರಿಗಳು ಪೊಲೀಸರು ಹಾಗೂ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದು,  ಅವರು ಸ್ಥಳಕ್ಕೆ ಆಗಮಿಸಿದ್ದರು. ಆದರೆ ಚಿರತೆಯನ್ನು ಹಿಡಿಯಲಾಯಿತೆ ಎಂಬ ಬಗ್ಗೆ ಮಾಹಿತಿ ಇಲ್ಲ. ಆದರೆ ಈ ಹಾಸ್ಟೆಲ್ ನಗರದ ಜನಸಂದಣಿ ಪ್ರದೇಶದಲ್ಲಿ ಇದ್ದು, ಇಲ್ಲಿಗೆ ಚಿರತೆ ಆಗಮಿಸಿದ್ದು ಅಚ್ಚರಿ ಮೂಡಿಸಿದೆ.

 ಇತ್ತ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ವೀಡಿಯೋ ನೋಡಿದ ಕೆಲವರು ತಮಾಷೆಯ ಕಾಮೆಂಟ್ ಮಾಡುತ್ತಿದ್ದಾರೆ. ಚಿರತೆಗಳಿಗೂ ಹೆಣ್ಣು ಮಕ್ಕಳ ಹಾಸ್ಟೆಲ್‌ಗೆ ಪ್ರವೇಶ ಇಲ್ಲ, ಅದ್ಹೇಗೆ ಅದು ಹೆಣ್ಣು ಮಕ್ಕಳ ಹಾಸ್ಟೆಲ್‌ಗೆ ಹೋಯ್ತು ಎಂದು ಒಬ್ಬರು ಪ್ರಶ್ನಿಸಿದ್ದಾರೆ. ಮತ್ತೊಬ್ಬರು ಹೆಣ್ಣು ಮಕ್ಕಳ ಹಾಸ್ಟೆಲ್‌ಗೆ ಚಿರತೆ ಭೇಟಿಗೆ ಅವಕಾಶ ಇದೆ ಹುಡುಗರಿಗೆ ಮಾತ್ರ ಪ್ರವೇಶವಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಚಿರತೆಗೆ ಪ್ರವೇಶವಿಲ್ಲದಿದ್ದರೂ ಚಿರತೆ ಅಕ್ರಮವಾಗಿ ಹೆಣ್ಣು ಮಕ್ಕಳ ಹಾಸ್ಟೆಲ್ ಪ್ರವೇಶಿಸಿದಂತೆ ಕಾಮೆಂಟ್ ಮಾಡಿದ್ದಾರೆ. 

 

Follow Us:
Download App:
  • android
  • ios