ಮರೆಯಾದ ಮಾವುತನಿಗೆ ಗಜರಾಜನ ಕಣ್ಣೀರ ವಿದಾಯ; ವಿಡಿಯೋ
* ಮಾವುತನ ಅಂತಿಮ ದರ್ಶನಕ್ಕೆ ಬಂದು ಕರಣ್ಣೀರಿಟ್ಟ ಆನೆ
* ಸಾಕಿ ಬೆಳೆಸಿದ್ದ ಮಾಲೀಕನಿಗೆ ಅಂತಿಮ ನಮನ
* ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋ
ಕೇರಳ(ಜೂ. 03) ತನ್ನನ್ನು ಸಾಕಿಬೆಳಸಿ ತಿದ್ದಿ ತೀಡಿದ್ದ ಮಾವುತ ನಿಧನವಾಗಿದ್ದ. ಆ ಮೂಕ ಪ್ರಾಣಿ ಮಾವುತನ ಅಂತಿಮ ದರ್ಶನಕ್ಕೆ ಭಾರವಾದ ಹೆಜ್ಜೆ ಇಟ್ಟುಕೊಂಡು ಬಂತು. ಈ ದೃಶ್ಯ ಎಂಥವರ ಕಣ್ಣಂಚಿನಲ್ಲಿಯೂ ಒಂದು ಹನಿ ನೀರು ಮೂಡಿಸದೇ ಇರದು.
"
ಕೇರಳದ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇಲ್ಲಿ ಮಾತಿಲ್ಲ. ಕೇವಲ ಭಾವನೆಗಳು. ಭಾವನೆಗಳೊಂದಿಗೆ ಪ್ರಯಾಣ.. ಅದರೊಂದಿಗೆ ಜೀವನ. ಬದುಕಿನ ಪ್ರಯಾಣ ಮಾವುತ ಮುಗಿಸಿದ್ದಾನೆ ಎನ್ನುವ ಸತ್ಯ ಆನೆಗೂ ಗೊತ್ತು. ಸಮಾಧಾನ ಹೇಳುವುದೊಂದೆ ನಮ್ಮೆಲ್ಲರ ಜವಾಬ್ದಾರಿ.
ಮಾಲೀಕನ ಹುಡುಕಿಕೊಂಡು ಎರಡು ವಾರ ಶ್ವಾನದ ದೂರ ಪ್ರಯಾಣ
ಹಸಿವಾದಾಗ ಆಹಾರ ಕೊಟ್ಟಿದ್ದ, ಯಾವುದೋ ಜಾತ್ರೆ, ತೇರು ಜತೆಯಾಗಿ ತಿರುಗಿದ್ದ ಮಾವುತ ದೂರವಾಗಿದ್ದಾನೆ. ಹೌದು ಬಿಡಿ ಮನುಷ್ಯನ ಆಯಸ್ಸು ಕಡಿಮೆಯೇ.. ಆನೆಗೂ ಗೊತ್ತು ಇನ್ನು ತನ್ನ ಜವಾಬ್ದಾರಿ ನೋಡಿಕೊಳ್ಳಲು ಆತ ಎದ್ದು ಬರುವುದಿಲ್ಲ, ಮೈ ಸವರುವವರು ಇಲ್ಲ... ಜತೆಗೆ ಮಾತನಾಡುವವರು ಇಲ್ಲ!
ಸಾಕು ಪ್ರಾಣಿಗಳೆ ಹಾಗೆ..ನೆಚ್ಚಿಕೊಂಡರೆ ಮುಗಿಯಿತು.. ಅವು ರೋದಿಸುತ್ತವೆ. ಅಳುತ್ತವೆ.. ಮೂಕವಾಗಿಯೇ ತಮ್ಮ ಕಣ್ಣೀರು ಸುರಿಸುತ್ತವೆ. ತೋರಿಕೆಯ ದುಖಃ ಹಂಚುವ ಮಾನವ ಪ್ರಪಂಚದಲ್ಲಿ ಪ್ರಾಣಿಗಳೆ ಮಿಗಿಲು.
ತನ್ನ ಕರುವನ್ನು ಕೊಂದ ಬಸ್ ಬಣ್ಣ ಬದಲಾಗಿದ್ದರೂ ವರ್ಷಗಳ ಕಾಲ ದ್ವೇಷ ಸಾಧಿಸುತ್ತ ಆ ಬಸ್ ಬಂದಾಗಲೆಲ್ಲ ಅಟ್ಟಿಸಿಕೊಂಡು ಹೋಗುವ ಹಸು ಶಿರಸಿಯಲ್ಲಿದೆ. ಐಎಎಸ್ ಅಧಿಕಾರಿ ಡಿಕೆ ರವಿ ಸಾವನ್ನಪ್ಪಿದಾಗ ಅವರ ಮನೆಯ ಶ್ವಾನ ರೋದಿಸುತ್ತಿದ್ದ ದೃಶ್ಯ ಹಲವರ ಕಣ್ಣಮುಂದೆ ಹಾಗೆ ಇರಬಹುದು. ಮಾಲೀಕನ ಶವ ಮಣ್ಣು ಮಾಡಿದ್ದರೂ ವಾರಗಟ್ಟಲೇ ಅಲ್ಲಿಯೇ ಕೂತ ಶ್ವಾನದ ಕತೆಯನ್ನು ಕೇಳಿದ್ದೇವೆ. ತನ್ನ ಮರಿಗಾಗಿ ಇಡೀ ದಿನ ಹೆದ್ದಾರಿಯ ಮೇಲು ಸೇತುವೆ ಮೇಲೆ ನಿಂತಿದ್ದ ಕುದುರೆ ಸುದ್ದಿ ಚಿತ್ರದುರ್ಗದಿಂದ ಬಂದಿತ್ತು. Coorg the Kashmir of Karnataka ಪೇಜ್ ವಿಡಿಯೋ ಹಂಚಿಕೊಂಡಿದೆ.