ಹಿಟ್ ಆ್ಯಂಡ್ ರನ್ ಮಾಡಿದವರಿಗಷ್ಟೇ 10 ವರ್ಷ ಜೈಲು ಶಿಕ್ಷೆ ಆಗಲಿದೆ. ಅಪಘಾತದ ಮಾಹಿತಿ ನೀಡಿದರೆ ಕಠಿಣ ಕಾಯ್ದೆ ಅನ್ವಯ ಇಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ನವದೆಹಲಿ (ಜನವರಿ 3, 2024): ಭಾರತೀಯ ನ್ಯಾಯ ಸಂಹಿತೆಯಲ್ಲಿ, 10 ವರ್ಷ ಜೈಲು ಶಿಕ್ಷೆಗೆ ಗುರಿಪಡಿಸುವ ಹಿಟ್ ಆ್ಯಂಡ್ ರನ್ ಕಾಯ್ದೆಗೆ (ಸೆಕ್ಷನ್ 106-1, 106- 2) ವಿರೋಧ ವ್ಯಕ್ತಪಡಿಸಿ ಲಾರಿ ಚಾಲಕರು ಮುಷ್ಕರ ಆರಂಭಿಸಿರುವ ಬೆನ್ನಲ್ಲೇ, ಚಾಲಕರ ಕಳವಳವನ್ನು ದೂರ ಮಾಡುವ ಯತ್ನವನ್ನು ಕೇಂದ್ರ ಸರ್ಕಾರ ಮಾಡಿದೆ. ‘ಹಿಟ್ ಆ್ಯಂಡ್ ರನ್ ಮಾಡಿದವರಿಗಷ್ಟೇ 10 ವರ್ಷ ಜೈಲು ಶಿಕ್ಷೆ ಆಗಲಿದೆ. ಅಪಘಾತದ ಮಾಹಿತಿ ನೀಡಿದರೆ ಕಠಿಣ ಕಾಯ್ದೆ ಅನ್ವಯ ಇಲ್ಲ’ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಯಾರಿಗೆ ಅನ್ವಯವಿಲ್ಲ?:
ಯಾವುದೇ ಚಾಲಕರು ಅತಿವೇಗದ ಚಾಲನೆ ಅಥವಾ ಅಜಾಗರೂಕವಾಗಿ ವಾಹನ ಚಾಲನೆ ಮಾಡಿ ಯಾವುದೇ ವ್ಯಕ್ತಿಯ ಸಾವಿಗೆ ಕಾರಣವಾದರೆ, ಅಂಥ ವೇಳೆ ಅಪಘಾತವೆಸಗಿದ ಚಾಲಕ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಬೇಕು ಮತ್ತು ಈ ಕುರಿತು ಪೊಲೀಸರು ಅಥವಾ ಮ್ಯಾಜಿಸ್ಟ್ರೇಟ್‌ಗೆ ಮಾಹಿತಿ ನೀಡಬೇಕು. ಜೊತೆಗೆ, ಇಂಥ ಅಪಘಾತದ ಪ್ರಕರಣವು ಉದ್ದೇಶಪೂರ್ವಕ ಕೃತ್ಯವಾಗಿರಬಾರದು. ಇಂಥ ಪ್ರಕರಣಗಳಲ್ಲಿ ಚಾಲಕರ ವಿರುದ್ಧ 10 ವರ್ಷಗಳ ಜೈಲು ಶಿಕ್ಷೆ ಮತ್ತು 7 ಲಕ್ಷ ರೂ. ದಂಡ ವಿಧಿಸುವ ಕಠಿಣ ಕಾಯ್ದೆ ಅನ್ವಯವಾಗದು. ಈ ಕೇಸುಗಳಲ್ಲಿ ಸೆಕ್ಷನ್ 106 (1) ಅನ್ವಯ ಕೇಸು ದಾಖಲಿಸಲಾಗುವುದು. ಇದು ಜಾಮೀನು ಸಹಿತ ಪ್ರಕರಣವಾಗಿರುತ್ತದೆ. ಇದರಡಿ ದೋಷಿಗೆ ಗರಿಷ್ಠ 5 ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನು ಓದಿ: 10 ವರ್ಷ ಜೈಲು ಶಿಕ್ಷೆ ಬಗ್ಗೆ ಮರುಪರಿಶೀಲನೆ: ಕೇಂದ್ರ ಸರ್ಕಾರದ ಭರವಸೆ ಬೆನ್ನಲ್ಲೇ ಲಾರಿ ಮುಷ್ಕರ ವಾಪಸ್
ಒಂದು ವೇಳೆ ಅಪಘಾತದ ಘಟನಾ ಸ್ಥಳದಲ್ಲಿ ತಾನು ಇದ್ದರೆ ಅಥವಾ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ತಾನು ಸಂತ್ರಸ್ತರ ಕಡೆಯಿಂದ ದಾಳಿಗೆ ಒಳಗಾಗುವ ಭೀತಿ ಆರೋಪಿ ಚಾಲಕರನ್ನು ಕಾಡಿದರೆ, ಅಂಥ ವೇಳೆ ಅವರು ಸಮೀಪದ ಪೊಲೀಸ್ ಠಾಣೆಗೆ ತೆರಳಿ ಘಟನೆ ಕುರಿತು ಮಾಹಿತಿ ನೀಡಬೇಕು ಅಥವಾ ಉಚಿತವಾಗಿ ಲಭ್ಯವಿರುವ ತುರ್ತು ಸಹಾಯವಾಣಿ ಸಂಖ್ಯೆ 108ಕ್ಕೆ ಕರೆ ಮಾಡಿ, ತನ್ನ ವಾಹನ ಸಂಖ್ಯೆ, ತನ್ನ ಸಂಪರ್ಕದ ವಿಳಾಸದ ಮಾಹಿತಿ ನೀಡಬೇಕು ಮತ್ತು ಮುಂದಿನ ದಿನಗಳಲ್ಲಿ ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಬೇಕು. ಆಗ ಕಠಿಣ ಕಾಯ್ದೆಗೆ ಅವರು ಒಳಪಡುವುದಿಲ್ಲ ಎಂದು ಕೇಂದ್ರ ಸರ್ಕಾರದ ಮೂಲಗಳು ಸ್ಪಷ್ಟಪಡಿಸಿವೆ.
ಯಾರಿಗೆ ಅನ್ವಯ?:
ಒಂದು ವೇಳೆ ಚಾಲಕರು, ಅಪಘಾತದ ಬಳಿಕ ಸಂತ್ರಸ್ತರನ್ನು ಆಸ್ಪತ್ರೆಗೆ ಕರೆದೊಯ್ಯದೇ ಮತ್ತು ಪೊಲೀಸರಿಗೆ ಮಾಹಿತಿ ನೀಡದೇ ಪರಾರಿಯಾದರೆ ಮತ್ತು ಕುಡಿದು ವಾಹನ ಚಾಲನೆ ಮಾಡಿ ಸಂಭವಿಸುವ ಅಪಘಾತ ಪ್ರಕರಣದ ವೇಳೆ ಸೆಕ್ಷನ್ 106 (2) ಅನ್ವಯ ಪ್ರಕರಣ ದಾಖಲಿಸಲಾಗುತ್ತದೆ. ಇದು ಜಾಮೀನು ರಹಿತವಾಗಿರುತ್ತದೆ. ಇಲ್ಲಿ ದೋಷಿಗಳಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿರುತ್ತದೆ.
ಹಿಟ್ ಅಂಡ್ ರನ್ ಕಾಯ್ದೆ ವಿರೋಧಿಸಿ ನಡೆಸಿದ ಪ್ರತಿಭಟನೆ ಕೈಬಿಟ್ಟ ಟ್ರಕ್ ಚಾಲಕರ ಸಂಘ!
ಅಜಾಗರೂಕ, ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿ ಇತರರ ಸಾವಿಗೆ ಕಾರಣವಾಗುವ ಪ್ರಕರಣಗಳಲ್ಲಿ ದೋಷಿಗಳ ವಿರುದ್ಧ ಕಠಿಣ ಕ್ರಮ ಅಗತ್ಯ ಎಂಬ ಸುಪ್ರೀಂಕೋರ್ಟ್‌ನ ಸೂಚನೆ ಅನ್ವಯವೇ ಕಾಯ್ದೆಯನ್ನು ಕಠಿಣಗೊಳಿಸಲಾಗಿದೆ ಎಂದು ಮೂಲಗಳು ಹೇಳಿವೆ.
