ಮನೆ ಕೆಲಸಕ್ಕಿದ್ದ ದಲಿತ ಹುಡುಗಿಯ ಮೇಲೆ ಡಿಎಂಕೆ ಶಾಸಕನ ಮಗ ಸೊಸೆಯಿಂದ ಹಲ್ಲೆ
ಡಿಎಂಕೆ ಶಾಸಕ ಐ ಕರುಣಾನಿಧಿ ಪುತ್ರ 18 ವರ್ಷದ ಮನೆ ಕೆಲಸದಾಕೆಯ ಮೇಲೆ ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದ್ದು, ಈ ಸಂಬಂಧ, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಚೆನ್ನೈ: ಡಿಎಂಕೆ ಶಾಸಕ ಐ ಕರುಣಾನಿಧಿ ಪುತ್ರ 18 ವರ್ಷದ ಮನೆ ಕೆಲಸದಾಕೆಯ ಮೇಲೆ ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದ್ದು, ಈ ಸಂಬಂಧ, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಡಿಎಂಕೆ ಶಾಸಕ ಕರುಣಾನಿಧಿ ಎಂಬುವವರ ಮಗ ಅಂಟೋ ಮಥಿವನನ್ ಹಾಗೂ ಸೊಸೆ ಮರ್ಲಿನ್ ಇಬ್ಬರು ಸೇರಿ 18 ವರ್ಷದ ಮನೆಕೆಲಸ ಮಾಡುತ್ತಿದ್ದ ಬಾಲಕಿ ಮೇಲೆ ಹಲ್ಲೆ ಮಾಡಿದ್ದು, ಆಕೆಗೆ ವೈದ್ಯಕೀಯ ಸೌಲಭ್ಯವನ್ನು ಕಲ್ಪಿಸದೇ ದೌರ್ಜನ್ಯವೆಸಗಿದ್ದಾರೆ ಎಂದು ತಿಳಿದು ಬಂದಿದೆ.
ಆದರೆ ಶಾಸಕ ಕರುಣಾನಿಧಿ ಈ ಆರೋಪವನ್ನು ನಿರಾಕರಿಸಿದ್ದು, ನಮ್ಮ ಮಗನ ಕುಟುಂಬದವರು ಆಕೆಯನ್ನು ಚೆನ್ನಾಗಿಯೇ ನೋಡಿಕೊಂಡಿದ್ದಾರೆ. ಆಕೆ ಏನು ತಪ್ಪು ಮಾಡಿದಾಗ ಕೇವಲ ಆಕೆಯನ್ನು ಎಳೆದಿದ್ದಾರೆ ಅಷ್ಟೆ ಎಂದು ತಮ್ಮ ಮಗನ ಮೇಲಿನ ಅರೋಪವನ್ನು ನಿರಾಕರಿಸಿದ್ದಾರೆ. ಇನ್ನು ಈ ಹುಡುಗಿ ಪರಿಶಿಷ್ಟ ಜಾತಿಗೆ ಸೇರಿದವಳಾಗಿದ್ದು, 12ನೇ ತರಗತಿಯಲ್ಲಿ ಓದುತ್ತಿದ್ದಳು. ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್‌ಗೆ ಕೋಚಿಂಗ್‌ಗೆ ದಾಖಲಾಗುವ ಸಲುವಾಗಿ ಮತಿವನನ್ ಮನೆಯಲ್ಲಿ ಕೆಲಸ ಮಾಡುತ್ತಿದ್ದಳು ಎಂದು ಅಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.
ತಮಿಳುನಾಡಿನಲ್ಲಿ ವ್ಯಾಪಕ ದಲಿತ ದೌರ್ಜನ್ಯ: ರಾಜ್ಯಪಾಲ ರವಿ ಆರೋಪ
ಈ ಬಗ್ಗೆ ಇವಿಡೆನ್ಸ್ ಎಂಬ ಎನ್‌ಜಿಒ ಹಂಚಿಕೊಂಡಿರುವ ವೀಡಿಯೋದಲ್ಲಿ, ಹಲ್ಲೆಗೊಳಗಾದ ಹುಡುಗಿ, ತನಗೆ ಏಜೆಂಟ್ ಸಹಾಯದಿಂದ ಈ ಕೆಲಸ ಸಿಕ್ಕಿತ್ತು ಎಂದು ಹೇಳಿಕೊಂಡಿದ್ದಾರೆ. ಕಳೆದ 7 ತಿಂಗಳಿಂದ ಮಥಿವನನ್ ಮನೆಯಲ್ಲಿ ತಾನು ಕೆಲಸ ಮಾಡುತ್ತಿದ್ದೆ ಎಂದು ಆಕೆ ಹೇಳಿಕೊಂಡಿದ್ದು, ಮನೆಯವರು ತನ್ನ ಮೇಲೆ ದೈಹಿಕ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾಳೆ. ಅವರು ನನ್ನ ಮೇಲೆ ಅವವರಿಗೆ ಹೇಗೆ ಬೇಕೋ ಹಾಗೆ ಹಲ್ಲೆ ಮಾಡಿದ್ದಾರೆ. ಇದರ ಜೊತೆಗೆ ಅವರು ನನ್ನ ಕೆಲಸಕ್ಕೆ ಸರಿಯಾಗಿ ಸಂಬಳವನ್ನು ನೀಡಿಲ್ಲ ಎಂದು ಹುಡುಗಿ ಆರೋಪಿಸಿದ್ದಾಳೆ.
ವೀಡಿಯೋದಲ್ಲಿ ಅಳುತ್ತಾ ತನ್ನ ಕಷ್ಟ ಹೇಳಿಕೊಂಡಿರುವ ಹುಡುಗಿ, ಸಣ್ಣ ತಪ್ಪಾದರೂ ಅವರು ನನ್ನ ಕೆನ್ನೆಗೆ ಬಾರಿಸುತ್ತಿದ್ದರು. ಅವರು ಮುಂಜಾನೆ ಮನೆ ಬಿಡುತ್ತಿದ್ದರಿಂದ ಬೆಳಗ್ಗೆ ಆರು ಗಂಟೆಗೆ ಆಹಾರ ಸಿದ್ಧಪಡಿಸಲು ಹೇಳುತ್ತಿದ್ದರು. ಆದರೆ ಹಿಂದಿನ ರಾತ್ರಿ ನಾನು 2 ಗಂಟೆಯಾದರೂ ಮಲಗಿರಲಿಲ್ಲ, ನಿದ್ದೆ ಇಲ್ಲದೇ ಯಾರು ಬದುಕಲು ಸಾಧ್ಯವಿಲ್ಲ, ಹೀಗಾಗಿ ನನಗೆ 7 ಗಂಟೆಗಷ್ಟೇ ಏಳಲು ಸಾಧ್ಯವಾಗಿತ್ತು. ಹೀಗಾಗಿ ನನಗೆ ಆಹಾರ ಸಿದ್ಧಪಡಿಸಲು ಆಗಲಿಲ್ಲ, ಇದರಿಂದ ಸಿಟ್ಟಿಗೆದ್ದ ಅವರು ನನ್ನ ಕೈಗೆ ಹೇರ್ ಸ್ಟ್ರೈಟ್ನರ್‌ನ್ನು ಬಿಸಿ ಮಾಡಿ ಇಟ್ಟು ಸುಟ್ಟಿದ್ದಾರೆ.
Muruga Mata Case: ಮುರುಘಾ ಶ್ರೀ ವಿರುದ್ಧ ದಲಿತ ದೌರ್ಜನ್ಯ ಪ್ರಕರಣವೂ ದಾಖಲು
ತನಗೆಷ್ಟೇ ನೋವಾಗಲಿ, ಗಾಯವಾಗಲಿ ರಕ್ತ ಸೋರಲಿ ಅವರು ಮಾತ್ರ ನನ್ನನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿರಲಿಲ್ಲ, ವೈದ್ಯಕೀಯ ಸೇವೆ ನೀಡುತ್ತಿರಲಿಲ್ಲ, ನಾನು ಸ್ವತಃ ನಾನಾಗೆ ನನ್ನ ಗಾಯಗಳ ಆರೈಕೆ ಮಾಡ್ತಿದ್ದೆ ಎಂದು ಹುಡುಗಿ ಅಳುತ್ತಾ ಹೇಳಿಕೊಂಡಿದ್ದಾಳೆ.
ಅಲ್ಲದೇ ತಮಗೆ ರಾಜಕೀಯ ಪ್ರಭಾವ ಇರುವುದರಿಂದ ಈ ದೌರ್ಜನ್ಯ ವಿಚಾರವನ್ನು ಯಾರಿಗಾದರೂ ಹೇಳಿಕೊಂಡಲ್ಲಿ ಯಾರೂ ನಿನ್ನ ಸಹಾಯಕ್ಕೆ ಬರುವುದಿಲ್ಲ ಎಂದು ಕೂಡ ಈ ದಂಪತಿ ಹುಡುಗಿಗೆ ಬೆದರಿಕೆ ಹಾಕಿದ್ದಾರೆ. ಆದರೆ ಪೊಂಗಲ್ ಸಮಯದಲ್ಲಿ ಮನೆಗೆ ಹೋದ ನಂತರವೇ ಈ ಪ್ರಕರಣ ಬೆಳಕಿಗೆ ಬಂದಿದೆ. ಕುಟುಂಬ ಸದಸ್ಯರು ಆಕೆಯ ದೇಹದಲ್ಲಾದ ಗಾಯಗಳ ಬಗ್ಗೆ ಗಮನಿಸಿ ಕೇಳಿದಾಗ ಆಕೆ ಬಾಯ್ಬಿಟ್ಟಿದ್ದು, ಬಳಿಕ ಸಮೀಪದ ಸರ್ಕಾರಿ ಆಸ್ಪತ್ರೆಗೆ ಆಕೆಯನ್ನು ಕರೆದೊಯ್ದಿದ್ದಾರೆ . ಅಲ್ಲಿ ವೈದ್ಯರು ಆಕೆಯನ್ನು ತಪಾಸಣೆ ಮಾಡಿದಾಗ ಗಾಯದ ಜೊತೆಗೆ ಸಿಗರೇಟ್‌ನಿಂದ ಸುಟ್ಟಿರುವುವು ಕಂಡು ಬಂದಿದೆ. ನಂತರ ಅಲ್ಲಿನ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ ಹುಡುಗಿಯಾಗಲಿ, ಆಕೆಯ ಮನೆಯವರಾಗಲಿ ಈ ಬಗ್ಗೆ ಯಾವುದೇ ಅಧಿಕೃತ ದೂರು ನೀಡಿಲ್ಲ,
ಬಾಲಕಿಯನ್ನು ಉಲ್ದುರ್ಪೆಟ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿನ ವೈದ್ಯರು ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಲು ನಾವು ಆಕೆಯ ಜೊತೆ ಮಾತುಕತೆ ನಡೆಸಲು ಪ್ರಯತ್ನಿಸುತ್ತಿದ್ದೇವೆ. ಆದರೆ ಆಕೆಯ ಮನೆಯವರಾಗಲಿ ಆಕೆಯಾಗಲಿ ಈಗ ನಮ್ಮ ಕೈಗೆ ಸಿಗುತ್ತಿಲ್ಲ, ಅವರು ಬಹುಶಃ ಈ ಬಗ್ಗೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಅನಿಸುತ್ತಿದೆ ಎಂದು ನೀಲಂಗರೈ ಪೊಲೀಸ್ ಸ್ಟೇಷನ್ ಅಧಿಕಾರಿ ಹೇಳಿದ್ದಾರೆ.
ಆಕೆಯ ಕೈಯಲ್ಲಿರುವ ಗಾಯಗಳು ಹಳೆಯದಾಗಿವೆ, ಪ್ರಕರಣದ ತನಿಖೆಯ ನಂತರವೇ ಸತ್ಯಾಂಶ ಹೊರಬರಲಿದೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಶಾಸಕ ಕರುಣಾನಿಧಿ ಮಗ ಸೊಸೆ ಮೇಲಿನ ಈ ಗಂಭೀರ ಆರೋಪವನ್ನು ತಳ್ಳಿ ಹಾಕಿದ್ದು, ಅವರು ಆಕೆಯ ಶಿಕ್ಷಣಕ್ಕೆ ಸಹಾಯ ಮಾಡಿದ್ದರು, ಜೊತೆಗೆ ಆಕೆಗೆ ಇತ್ತೀಚೆಗೆ ಆಭರಣವನ್ನು ಕೊಂಡು ತಂದಿದ್ದರು ಎಂದು ಹೇಳಿದ್ದಾರೆ.