- Home
- Karnataka Districts
- Udupi
- ಆಟಿ ಅಮಾವಾಸ್ಯೆ ವಿಶೇಷ! ಅಮೃತಕ್ಕೆ ಸಮಾನ ಹಾಲೆ ಮರದ ಕಷಾಯ.. ತುಳುನಾಡಿನಲ್ಲಿ ಇವತ್ತು ಇದನ್ನ ಕುಡಿಯೋದು ಯಾಕೆ?
ಆಟಿ ಅಮಾವಾಸ್ಯೆ ವಿಶೇಷ! ಅಮೃತಕ್ಕೆ ಸಮಾನ ಹಾಲೆ ಮರದ ಕಷಾಯ.. ತುಳುನಾಡಿನಲ್ಲಿ ಇವತ್ತು ಇದನ್ನ ಕುಡಿಯೋದು ಯಾಕೆ?
ತುಳುನಾಡಿನಾದ್ಯಂತ ಪಾರಂಪರಿಕ 'ಪಾಲೆ' ಮರದ ತೊಗಟೆಯ ಕಷಾಯ ಮತ್ತು ಪಿತೃ ಕಾರ್ಯಗಳೊಂದಿಗೆ ಆಟಿ ಅಮಾವಾಸ್ಯೆಯನ್ನು ಆಚರಿಸಲಾಯಿತು. ವಿಶೇಷವೆಂದರೆ, ಇದೇ ಮೊದಲ ಬಾರಿಗೆ ಕೇರಳ ಸಮಾಜಂ ವತಿಯಿಂದ ಮಲ್ಪೆ ಕಡಲತೀರದಲ್ಲಿ ಕೇರಳ ಶೈಲಿಯ 'ಬಲಿತರ್ಪಣಂ' ಆಯೋಜಿಸಲಾಗಿತ್ತು.

ಆಟಿ ಅಮಾವಾಸ್ಯೆ ಎಂದರೆ ಅದು ಕೇವಲ ಒಂದು ತಿಥಿಯಲ್ಲ
ತುಳುನಾಡಿನಲ್ಲಿ ಆಟಿ ಅಮಾವಾಸ್ಯೆ ಎಂದರೆ ಅದು ಕೇವಲ ಒಂದು ತಿಥಿಯಲ್ಲ, ಅದು ಪ್ರಕೃತಿ ನೀಡುವ ಔಷಧ ಮತ್ತು ಪೂರ್ವಜರಿಗೆ ಸಲ್ಲಿಸುವ ಕೃತಜ್ಞತೆಯ ಸಮಾಗಮ. ಈ ಬಾರಿ ಉಡುಪಿಯಲ್ಲಿ ಒಂದು ವಿಶೇಷ ಇತಿಹಾಸ ಸೃಷ್ಟಿಯಾಯಿತು. ಸಾಮಾನ್ಯವಾಗಿ ಕೇರಳದ ಓಣಂ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದ ಉಡುಪಿಯ 'ಕೇರಳ ಸಮಾಜಂ' ಇದೇ ಮೊದಲ ಬಾರಿಗೆ ಪಿತೃಗಳಿಗೆ ತರ್ಪಣ ಬಿಡುವ 'ಬಲಿತರ್ಪಣಂ' ಕಾರ್ಯಕ್ರಮವನ್ನು ಕೇರಳದ ಶೈಲಿಯಲ್ಲೇ ಆಯೋಜಿಸಿ ಗಮನ ಸೆಳೆಯಿತು.
ಮಲ್ಪೆ ಕಡಲತೀರದಲ್ಲಿ ಕೇರಳ ತಂತ್ರಿಗಳ ಮಂತ್ರಘೋಷ
ಉಡುಪಿಯಲ್ಲಿ ನೆಲೆಸಿರುವ ಕೇರಳ ಮೂಲದ ನೂರಾರು ಕುಟುಂಬಗಳು ಇಷ್ಟು ವರ್ಷಗಳ ಕಾಲ ಸ್ಥಳೀಯ ಪದ್ಧತಿಯಂತೆ ತರ್ಪಣ ಬಿಡುತ್ತಿದ್ದವು. ಆದರೆ ಈ ವರ್ಷ ಕೇರಳದಿಂದಲೇ ನುರಿತ ತಂತ್ರಿಗಳನ್ನು ಕರೆಸಲಾಗಿತ್ತು. ಮಲ್ಪೆ ಕಡಲತೀರದ ಅಲೆಗಳ ಸದ್ದಿನ ನಡುವೆ, ಕೇರಳದ ವಿಶಿಷ್ಟ ವಿಧಿವಿಧಾನಗಳೊಂದಿಗೆ ಸುಮಾರು 70ಕ್ಕೂ ಹೆಚ್ಚು ಕುಟುಂಬಗಳು ತಮ್ಮ ಅಗಲಿದ ಪಿತೃಗಳಿಗೆ ಬಲಿತರ್ಪಣಂ ಸಲ್ಲಿಸಿದವು. ಮೃತರ ಆತ್ಮಕ್ಕೆ ಅವರವರ ಸಂಪ್ರದಾಯದಂತೆಯೇ ಸದ್ಗತಿ ನೀಡಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಡಲತೀರದಲ್ಲಿ ಕೇರಳ ಮೂಲದ ಬಾಂಧವರು ಭಕ್ತಿಭಾವದಿಂದ ಪಿತೃಕಾರ್ಯ ಮುಗಿಸಿ ಸಂತೃಪ್ತಿ ವ್ಯಕ್ತಪಡಿಸಿದರು.
ಹಾಲೆ ಮರದ ಕಷಾಯ
ಇನ್ನೊಂದೆಡೆ, ತುಳುನಾಡಿನ ಪ್ರತಿಯೊಂದು ಮನೆಯಲ್ಲೂ ಸೂರ್ಯೋದಯಕ್ಕೂ ಮುನ್ನವೇ ಸಂಭ್ರಮ ಮನೆಮಾಡಿತ್ತು. ಆಟಿ ಅಮಾವಾಸ್ಯೆಯಂದು ಹಾಲೆ ಮರದ (ಪಾಲೆ ಮರ) ಕಷಾಯ ಕುಡಿಯುವುದು ಇಲ್ಲಿನ ಅನಾದಿಕಾಲದ ಸಂಪ್ರದಾಯ. ನಂಬಿಕೆಯ ಪ್ರಕಾರ, ಈ ದಿನ ಹಾಲೆ ಮರದ ತೊಗಟೆಯಲ್ಲಿ 640 ಬಗೆಯ ಔಷಧೀಯ ಗುಣಗಳು ಅಡಗಿರುತ್ತವೆ.
ಮನೆಯ ಪುರುಷರು ಸೂರ್ಯೋದಯಕ್ಕೂ ಮುನ್ನ ಕಾಡಿಗೆ ಹೋಗಿ, ಮರದ ತೊಗಟೆಯನ್ನು ತರುತ್ತಾರೆ. ಮಹಿಳೆಯರು ಅದನ್ನು ಬೆಣಚು ಕಲ್ಲಿನಿಂದ ಜಜ್ಜಿ, ಕಾಳು ಮೆಣಸು, ಬೆಳ್ಳುಳ್ಳಿ, ಓಮ ಸೇರಿಸಿ ಕಷಾಯ ಸಿದ್ಧಪಡಿಸುತ್ತಾರೆ. ಮನೆಯವರೆಲ್ಲರೂ ಈ ಕಹಿ ಕಷಾಯವನ್ನು ಕುಡಿದು 'ಸರ್ವರೋಗ ನಿವಾರಣೆ'ಗೆ ಪ್ರಾರ್ಥಿಸುತ್ತಾರೆ. ಕಷಾಯದ ಕಹಿ ತಣಿಸಲು ನಂತರ ಮೆಂತ್ಯೆ ಗಂಜಿಯನ್ನು ಸವಿಯುವುದು ಇಲ್ಲಿನ ವಿಶೇಷ. ಇದು ಶರೀರದ ಉಷ್ಣತೆಯನ್ನು ಕಡಿಮೆ ಮಾಡಿ ದೇಹವನ್ನು ತಂಪುಗೊಳಿಸುತ್ತದೆ.
ಮರುವಂತೆಯಲ್ಲಿ ಸಮುದ್ರ ಸ್ನಾನ
ಉಡುಪಿ ಜಿಲ್ಲೆಯ ಮರುವಂತೆಯ ಮಹಾರಾಜ ವರಾಹ ಸ್ವಾಮಿ ದೇವಸ್ಥಾನದಲ್ಲಿ ಇಂದು ಸಡಗರದ ವಾತಾವರಣ. ಆಟಿ ಅಮಾವಾಸ್ಯೆಯ ಅಂಗವಾಗಿ ಲಕ್ಷಾಂತರ ಭಕ್ತರು ಮರುವಂತೆ ಕಡಲಿನಲ್ಲಿ ಪುಣ್ಯಸ್ನಾನ ಮಾಡಿದರು. ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲೇ ಸಾಗರ ಮತ್ತು ನದಿ ಭೇಟಿಯಾಗುವ ಈ ಪುಣ್ಯಕ್ಷೇತ್ರದಲ್ಲಿ ಸಮುದ್ರ ಸ್ನಾನ ಮಾಡಿ ವರಾಹ ಸ್ವಾಮಿಯ ದರ್ಶನ ಪಡೆಯುವುದು ಕರ್ಕಾಟಕ ಅಮಾವಾಸ್ಯೆಯ ವಿಶೇಷತೆಯಾಗಿದೆ.
ಪೂರ್ವಜರ ಆತ್ಮಕ್ಕೆ ಶಾಂತಿ ಕೋರುವ ದಿನ
ಒಟ್ಟಾರೆಯಾಗಿ ಈ ಬಾರಿಯ ಆಟಿ ಅಮಾವಾಸ್ಯೆಯು ತುಳುನಾಡಿನ ಸಾಂಪ್ರದಾಯಿಕ ಕಷಾಯದ ಆರೋಗ್ಯ ಮತ್ತು ಕೇರಳ ಶೈಲಿಯ ತರ್ಪಣದ ಭಕ್ತಿಯೊಂದಿಗೆ ವಿಶಿಷ್ಟವಾಗಿ ಆಚರಿಸಲ್ಪಟ್ಟಿತು. ಮನುಷ್ಯನ ಆರೋಗ್ಯ ಮತ್ತು ಪೂರ್ವಜರ ಆತ್ಮಕ್ಕೆ ಶಾಂತಿ ಕೋರುವ ಈ ದಿನವು ಕರಾವಳಿಯ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಮತ್ತೊಮ್ಮೆ ಅನಾವರಣಗೊಳಿಸಿತು.

