Madhya Pradesh Food Poisoning Incident: ಮಧ್ಯಪ್ರದೇಶದಲ್ಲಿ ಪಾನಿಪುರಿ ತಿಂದು 97 ಮಕ್ಕಳು ಅಸ್ವಸ್ಥರಾಗಿದ್ದು ಎಲ್ಲರನ್ನೂ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ. ಆಸ್ಪತ್ರೆಗೆ ಕೇಂದ್ರ ಸಚಿವ ಭೇಟಿ ಕೊಟ್ಟು ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ. 

ಮಂಡ್ಲ: ಮಧ್ಯಪ್ರದೇಶದ ಮಂಡ್ಲ ಜಿಲ್ಲೆಯಲ್ಲಿ ಪಾನಿಪುರಿ ತಿಂದು ಸುಮಾರು 97 ಮಕ್ಕಳು ಅಸ್ವಸ್ಥರಾಗಿರುವ ಘಟನೆ ನಡೆದಿದೆ (97 children hospitalised after eating Pani Puri). ಒಂದೇ ಅಂಗಡಿಯಲ್ಲಿ ಪಾನಿಪುರಿ ತಿಂದ ಮಕ್ಕಳು ಅಸ್ವಸ್ಥರಾಗಿದ್ದು, ಪಾನಿಪುರಿ ಮಾರಾಟಗಾರನನ್ನು ಬಂಧಿಸಲಾಗಿದೆ. ಜತೆಗೆ ಪಾನಿಪುರಿ ಸ್ಯಾಂಪಲ್‌ ಅನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ನೀಡಲಾಗಿದೆ ಎಂದು ಭಾನುವಾರ ಮಧ್ಯಪ್ರದೇಶದ ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಶನಿವಾರ ಸಂಜೆ ಎಲ್ಲಾ ಮಕ್ಕಳೂ ಪಾನಿಪುರಿ ಅಂಗಡಿಯಲ್ಲಿ ವಿವಿಧ ರೀತಿಯ ತಿಂಡಿಯನ್ನು ತಿಂದಿದ್ದಾರೆ. ಮಧ್ಯಪ್ರದೇಶದ ಮಂಡ್ಲ ಜಿಲ್ಲೆಯ ಸಿಂಗಾರ್‌ಪುರ್‌ ಏರಿಯಾದಲ್ಲಿ ಬುಡಕಟ್ಟು ಜನಾಂಗದ ಜಾತ್ರೆ ನಡೆಯುತ್ತಿದ್ದು, ಜಾತ್ರೆಯಲ್ಲಿ ಪಾನಿಪುರಿ ಅಂಗಡಿ ಹಾಕಲಾಗಿದೆ. ನಿನ್ನೆ ಸಂಜೆ ಪಾನಿಪುರಿ ತಿಂದು ಸ್ವಲ್ಪ ಹೊತ್ತಿನಲ್ಲೇ ಮಕ್ಕಳು ವಾಂತಿ ಮಾಡಲು ಆರಂಭಿಸಿದ್ದಾರೆ. 

ಅದಾದ ನಂತರ ಸಿಂಗಾರ್‌ಪುರ್‌ನಿಂದ ಸುಮಾರು 38 ಕಿಲೋಮೀಟರ್‌ ದೂರದಲ್ಲಿರುವ ಜಿಲ್ಲಾ ಕೇಂದ್ರಕ್ಕೆ ಕರೆದೊಯ್ದು ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ. ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಜಿಲ್ಲಾ ಆಸ್ಪತ್ರೆ ಸಿವಿಲ್‌ ಸರ್ಜನ್‌ ಡಾ. ಕೆ ಆರ್‌ ಶಕ್ಯ, "ಒಟ್ಟು 97 ಮಕ್ಕಳನ್ನು ಶನಿವಾರ ರಾತ್ರಿ ಅಡ್ಮಿಟ್‌ ಮಾಡಲಾಗಿದೆ. ಎಲ್ಲರೂ ಒಂದೇ ಅಂಗಡಿಯಲ್ಲಿ ಪಾನಿಪುರಿ ತಿಂದಿದ್ದಾರೆ. ಎಲ್ಲರಿಗೂ ಫುಡ್‌ ಪಾಯ್ಸನ್‌ ಆಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಮತ್ತು ಸುರಕ್ಷಿತರಾಗಿದ್ದಾರೆ," ಎಂದು ತಿಳಿಸಿದ್ದಾರೆ. 

ಪಾನಿಪುರಿ ಅಂಗಡಿಯವನನ್ನು ತಕ್ಷಣ ಪೊಲೀಸರು ವಶಕ್ಕೆ ಪಡೆದಿದ್ದು, ಅಂಗಡಿಯಲ್ಲಿದ್ದ ಎಲ್ಲಾ ತಿಂಡಿಯನ್ನೂ ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ದುರುದ್ಧೇಶದಿಂದಲೇ ಈ ರೀತಿ ಮಾಡಿದ್ದಾನ ಅಥವಾ ಅಚಾನಕ್ಕಾಗಿ ಆದ ತಪ್ಪಿನಿಂದ ಮಕ್ಕಳು ಅಸ್ವಸ್ಥರಾಗಿದ್ದಾರ ಎಂಬ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದೆ. ಕೇಂದ್ರ ಸಚಿವ ಫಗ್ಗಾನ್‌ ಕುಲಸ್ತೆ, ಮಂಡ್ಲ ಸಂಸದ ಆಸ್ಪತ್ರೆಗೆ ಭೇಟಿ ನೀಡಿದ್ದು, ಮಕ್ಕಳ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. 

ಇದನ್ನೂ ಓದಿ: Big Breaking: ಉತ್ತರಪ್ರದೇಶ ಪ್ರವಾಸಕ್ಕೆ ತೆರಳಿದ್ದ ಬೀದರ್‌ನ 7 ಮಂದಿ ದುರ್ಮರಣ

ಜಂಕ್‌ ಫುಡ್‌ ತಿನ್ನುವುದರಿಂದ ಆಗುವ ಆರೋಗ್ಯ ಸಮಸ್ಯೆಗಳ ಬಗ್ಗೆ ವೈದ್ಯಾಧಿಕಾರಿಗಳು ಆಗಾಗ ಜನರಿಗೆ ಮನವರಿಕೆ ಮಾಡಲು ಯತ್ನಿಸುತ್ತಲೇ ಇರುತ್ತಾರೆ. ಪಾನಿ ಪುರಿ, ಮಸಾಲ ಪುರಿ ಸೇರಿದಂತೆ ವಿಪರೀತ ಖಾರವಿರುವ ಆಹಾರಗಳನ್ನು ಮತ್ತು ಫಾಸ್ಟ್‌ ಫುಡ್‌ಗಳನ್ನು ಸೇವಿಸುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀಳುತ್ತದೆ ಎಂಬುದನ್ನು ತಿಳಿದಿದ್ದರೂ ಬಾಯಿ ಮಾತ್ರ ಕೇಳುವುದಿಲ್ಲ. 

ಇದನ್ನೂ ಓದಿ: ಮಾಂಸಾಹಾರ ಸೇವಿಸಿದ್ದರಿಂದ ಗಣೇಶ ದೇಗುಲ ಪ್ರವೇಶಿಸದ ಪವಾರ್‌!

ಈ ಘಟನೆಯಿಂದ ಪೋಷಕರು ಎಚ್ಚೆತ್ತುಕೊಳ್ಳಬೇಕು ಮತ್ತು ಮಕ್ಕಳಿಗೆ ಉತ್ತಮ ಆಹಾರ ಡಯಟ್‌ ಅಭ್ಯಾಸ ಮಾಡಿಸಬೇಕು. ಆಗಾಗ ಜಂಕ್‌ ಫುಡ್‌ ತಿನ್ನುವುದರಿಂದ ಅಷ್ಟೇನೂ ಸಮಸ್ಯೆ ಕಾಣಿಸದಿದ್ದರೂ, ಭವಿಷ್ಯದಲ್ಲಿ ಇದರ ಅಡ್ಡ ಪರಿಣಾಮ ಖಂಡಿತ ಇರುತ್ತದೆ. ಹೃದಯ ಸಂಬಂಧಿ ಖಾಯಿಲೆ, ಜೀರ್ಣ ಕ್ರಿಯೆಗೆ ಸಮಸ್ಯೆ ಮತ್ತು ಲಿವರ್‌ ಮೇಲೂ ಈ ಪಾಸ್ಟ್‌ ಮತ್ತು ಜಂಕ್‌ ಫುಡ್‌ಗಳು ಸಮಸ್ಯೆ ಬೀರಬಹುದು ಎನ್ನುತ್ತಾರೆ ತಜ್ಞರು. ಈ ಹಿನ್ನೆಲೆಯಲ್ಲಿ ಜನ ಸ್ವಲ್ಪ ಎಚ್ಚೆತ್ತರೆ ಒಳ್ಳೆಯದು. 

ಇದಕ್ಕಿಂತ ಮುಖ್ಯವಾಗಿ, ಕೆಲ ದಿನಗಳ ಹಿಂದೆ ಪಾನಿಪುರಿಯಲ್ಲಿ ಮೂತ್ರ ವಿಸರ್ಜನೆ ಮಾಡಿ ಅದನ್ನೇ ಗ್ರಾಹಕರಿಗೆ ನೀಡುತ್ತಿದ್ದ ಅಸಹ್ಯ ಪ್ರಕರಣ ಬೆಳಕಿಗೆ ಬಂದಿತ್ತು. ಇತ್ತೀಚೆಗೆ ಈ ರೀತಿಯ ಪ್ರಕರಣಗಳು ಕೂಡ ಹೆಚ್ಚುತ್ತಿರುವುದರಿಂದ, ಬೇಕೆಂದೇ ಮಧ್ಯಪ್ರದೇಶದಲ್ಲಿ ಪಾನಿಪುರಿಗೆ ಏನಾದರೂ ಮಿಶ್ರಣ ಮಾಡಿ ಮಕ್ಕಳಿಗೆ ತಿನ್ನಿಸಿದ್ದಾನ ಅಂಗಡಿ ಮಾಲಿಕ ಎಂಬ ಬಗ್ಗೆಯೂ ತನಿಖೆ ಮುಂದುವರೆದಿದೆ. ಅದೃಷ್ಟವಶಾತ್‌ ಯಾವ ಮಗುವೂ ಸಾವಿಗೀಡಾಗಿಲ್ಲ ಎಂಬುದಷ್ಟೇ ನೆಮ್ಮದಿಯ ಸಂಗತಿ.