8ನೇ ವೇತನ ಆಯೋಗವನ್ನು ರಚಿಸಲಾಗಿದ್ದು, ಜಾರಿ ಯಾವಾಗ, ಎಲ್ಲಿಂದ ಅನ್ವಯ, ಎಷ್ಟು ಹೆಚ್ಚಳ ಎಂಬ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಸಂಸತ್ತಿನಲ್ಲಿ ಸರ್ಕಾರ ಹೇಳಿದ್ದೇನು ಎನ್ನುವ ವಿಷಯ ಇಲ್ಲಿದೆ.
ಲಕ್ಷಾಂತರ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರು 8ನೇ ವೇತನ ಆಯೋಗ ಯಾವಾಗ ಜಾರಿಯಾಗುತ್ತೋ ಎಂದು ತುದಿಗಾಲಿನಲ್ಲಿ ಕಾತರದಿಂದ ಕಾಯುತ್ತಿದ್ದರೆ, ಆ ಬಗ್ಗೆ ಗೂಗಲ್ನಲ್ಲಿ ತಡಕಾಡುತ್ತಿದ್ದರೆ, ಅಂಥವರಿಗೆ ಇಲ್ಲೊಂದು ವಿಷಯವಿದೆ. ಆದರೆ ಹೀಗೆ ಕಾಯುತ್ತಿದ್ದವರು ಸ್ವಲ್ಪ ತಾಳ್ಮೆಯಿಂದ ಇರಬೇಕಾದ ಅಗತ್ಯವೂ ಇದೆ. ಅದಕ್ಕೆ ಕಾರಣ ಏನೆಂದರೆ, ಈ ಬಗ್ಗೆ ಮೊನ್ನೆಯಷ್ಟೇ ಸಂಸತ್ತಿನಲ್ಲಿಯೂ ಈ ವಿಷಯದ ಚರ್ಚೆಯಾಗಿತ್ತು. ಲಿಖಿತ ಉತ್ತರದಲ್ಲಿ, ಹಣಕಾಸು ರಾಜ್ಯ ಸಚಿವ ಪಂಕಜ್ ಚೌಧರಿ ಅವರು ನವೆಂಬರ್ 3, 2025 ರಂದು ಸರ್ಕಾರವು ಔಪಚಾರಿಕವಾಗಿ 8ನೇ ಕೇಂದ್ರ ವೇತನ ಆಯೋಗವನ್ನು ಸ್ಥಾಪಿಸಿದೆ ಎಂದು ದೃಢಪಡಿಸಿದ್ದರು. ಕೇಂದ್ರ ಸರ್ಕಾರಿ ನೌಕರರ ವೇತನ, ಭತ್ಯೆಗಳು ಮತ್ತು ಪಿಂಚಣಿಗಳ ಕುರಿತು ತನ್ನ ಶಿಫಾರಸುಗಳನ್ನು ಸಲ್ಲಿಸಲು ಆಯೋಗಕ್ಕೆ 18 ತಿಂಗಳುಗಳ ಕಾಲಾವಕಾಶ ನೀಡಲಾಗಿದೆ ಎಂದು ಅವರು ಹೇಳಿದ್ದರು.
ಸಂಸತ್ತಿನಲ್ಲಿ ಮಾಹಿತಿ
“8ನೇ ಕೇಂದ್ರ ವೇತನ ಆಯೋಗದ (ಸಿಪಿಸಿ) ರಚನೆಗೆ ಅಧ್ಯಕ್ಷರು ಮತ್ತು ಸದಸ್ಯರ ನೇಮಕಾತಿಯೊಂದಿಗೆ, ಅದು ರಚನೆಯಾದ 18 ತಿಂಗಳೊಳಗೆ ಕೇಂದ್ರ ಸರ್ಕಾರಿ ನೌಕರರ ವೇತನ, ಭತ್ಯೆಗಳು, ಪಿಂಚಣಿ ಇತ್ಯಾದಿ ವಿವಿಧ ವಿಷಯಗಳ ಕುರಿತು ತನ್ನ ಶಿಫಾರಸುಗಳನ್ನು ಮಾಡುತ್ತದೆ ಎಂದು 03.11.2025 ರಂದು ಸರ್ಕಾರವು ನಿರ್ಣಯವನ್ನು ಪ್ರಕಟಿಸಿದೆ ಎಂಬ ವಿಷಯವನ್ನು ಅವರು ತಿಳಿಸಿದ್ದಾರೆ. ಶಿಫಾರಸುಗಳನ್ನು ಸಲ್ಲಿಸಿ ಅಂಗೀಕರಿಸಿದ ನಂತರವೇ ಹಣಕಾಸಿನ ಪರಿಣಾಮ ತಿಳಿಯುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. 8 ನೇ ವೇತನ ಆಯೋಗವು ಜನವರಿ 1, 2026 ರಿಂದ ಜಾರಿಗೆ ಬರಲಿದೆ ಎಂದು ನಿರೀಕ್ಷಿಸಲಾಗಿದ್ದರೂ, ನಿಜವಾದ ಪ್ರಯೋಜನವು ಉದ್ಯೋಗಿಗಳನ್ನು ತಲುಪಲು ಹೆಚ್ಚು ಸಮಯ ತೆಗೆದುಕೊಳ್ಳಬಹುದು ಎಂದು ಇದೀಗ ಅಂದಾಜಿಸಲಾಗಿದೆ.
ಪ್ರಶ್ನಾವಳಿ ಅಪ್‌ಲೋಡ್
ಇದಾಗಲೇ, MyGov ಪೋರ್ಟಲ್‌ನಲ್ಲಿ 18 ಪ್ರಶ್ನೆಗಳನ್ನು ಹೊಂದಿರುವ ವಿವರವಾದ ಪ್ರಶ್ನಾವಳಿಯನ್ನು ಅಪ್‌ಲೋಡ್ ಮಾಡಲಾಗಿದೆ. ಸಚಿವಾಲಯಗಳು, ಇಲಾಖೆಗಳು, ರಾಜ್ಯ ಸರ್ಕಾರಗಳು, ಉದ್ಯೋಗಿಗಳು, ಪಿಂಚಣಿದಾರರು, ಒಕ್ಕೂಟಗಳು, ಶಿಕ್ಷಣ ತಜ್ಞರು ಮತ್ತು ವ್ಯಕ್ತಿಗಳಿಂದ ಪ್ರತಿಕ್ರಿಯೆಗಳನ್ನು ಆಹ್ವಾನಿಸಲಾಗುತ್ತಿದೆ. ಪ್ರತಿಕ್ರಿಯೆಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 31, 2026, ಮತ್ತು ಆನ್‌ಲೈನ್ ಸಲ್ಲಿಕೆಗಳನ್ನು ಮಾತ್ರ ಸ್ವೀಕರಿಸಲಾಗುತ್ತದೆ.
ಯಾವಾಗಿನಿಂದ ಜಾರಿ? ಎಷ್ಟು ಹೆಚ್ಚಳ?
GenZCFO ಸಂಸ್ಥಾಪಕ CA ಮನೀಶ್ ಮಿಶ್ರಾ ಸಂಭವನೀಯ ವಿಳಂಬವನ್ನು ಹೀಗೆ ವಿವರಿಸಿದ್ದಾರೆ: "8ನೇ ವೇತನ ಆಯೋಗವು ಜನವರಿ 1, 2026 ರಿಂದ ಜಾರಿಗೆ ಬರಲಿದೆ ಎಂದು ದಾಖಲೆಯಲ್ಲಿ ಇರುವುದು ನಿಜ. ಆದರೆ ಪ್ರಾಯೋಗಿಕವಾಗಿ ಹೆಚ್ಚಿನ ಸಂಬಳವು 2026 ರ ಅಂತ್ಯದವರೆಗೆ ಅಥವಾ 2026–27 ರ ಹಣಕಾಸು ವರ್ಷದಲ್ಲಿ ನೌಕರರ ಬ್ಯಾಂಕ್ ಖಾತೆಗಳನ್ನು ತಲುಪುವುದಿಲ್ಲ, ಹಿಂದಿನ ವೇತನ ಆಯೋಗಗಳ ನಂತರ ಉಂಟಾದ ವಿಳಂಬದಂತೆ ಇದು ಕೂಡ ಆಗುವ ಸಾಧ್ಯತೆ ಇದೆ ಎಂದಿದ್ದಾರೆ. ಇದೇ ವೇಳೆ ಅವರು ಗುಡ್ನ್ಯೂಸ್ ಕೂಡ ಕೊಟ್ಟಿದ್ದಾರೆ. 8ನೇ ವೇತನ ಆಯೋಗ ಜಾರಿ ವಿಳಂಬವಾದರೂ, ಜನವರಿ 1, 2026 ರಿಂದ ಲೆಕ್ಕಹಾಕಲಾಗುತ್ತದೆ ಎಂದು ಅಂದಾಜಿಸಲಾಗಿದೆ. 8ನೇ ವೇತನ ಆಯೋಗದಲ್ಲಿ ಶೇಕಡಾ 20-35 ರಷ್ಟು ಸಂಬಳ ಹೆಚ್ಚಾಗುವ ಸಾಧ್ಯತೆ ಇದ್ದರೂ, ಮುಂದಿನ 12-18 ತಿಂಗಳುಗಳಲ್ಲಿ ಹಣದುಬ್ಬರ, 16 ನೇ ಹಣಕಾಸು ಆಯೋಗದ ನಂತರದ ಹಣಕಾಸಿನ ಸ್ಥಳ, ತೆರಿಗೆ ತೇಲುವಿಕೆ ಮತ್ತು ರಾಜಕೀಯ ಹಿತಾಸಕ್ತಿಗಳನ್ನು ಅವಲಂಬಿಸಿರುತ್ತದೆ.


