ಟಿಎಂಸಿಗರಿಂದ ಹಲ್ಲೆಗೆ ಒಳಗಾಗಿದ್ದ 82ರ ವೃದ್ಧೆ ಸಾವು| ಶಾ-ಮಮತಾ ಮಧ್ಯೆ ವೃದ್ಧೆ ಸಾವಿನ ಯುದ್ಧ| ಟಿಎಂಸಿ ಕಾರ‍್ಯಕರ್ತರ ದಾಳಿಯಿಂದ ಸಾವು: ಶಾ| ‘ಹಾತ್ರಸ್’ ಬಗ್ಗೆ ಏಕೆ ಮೌನವಾಗಿದ್ದಿರಿ: ಮಮತಾ
ಕೊಲ್ಕತಾ(ಮಾ.30): ಬಿಜೆಪಿ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಡುವಿನ ಜಿದ್ದಾಜಿದ್ದಿ ಸಮರಕ್ಕೆ ಸಾಕ್ಷಿಯಾಗಿರುವ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರೊಬ್ಬರ ವಯೋವೃದ್ಧ ತಾಯಿಯ ಸಾವಿನ ವಿಚಾರದಲ್ಲಿ ಉಭಯ ಪಕ್ಷಗಳ ಹಿರಿಯ ನಾಯಕರ ನಡುವೆ ತೀವ್ರ ಕೆಸರೆರಚಾಟ ಆರಂಭವಾಗಿದೆ.
‘ಉತ್ತರ 24 ಪರಗಣ’ ಜಿಲ್ಲೆಯ ನಿಮ್ಟಾಎಂಬ ಊರಿನಲ್ಲಿ ತಿಂಗಳ ಹಿಂದೆ ಟಿಎಂಸಿ ಕಾರ್ಯಕರ್ತರಿಂದ ಹಲ್ಲೆಗೊಳಗಾಗಿದ್ದಾರೆ ಎನ್ನಲಾಗಿದ್ದ ಬಿಜೆಪಿ ಕಾರ್ಯಕರ್ತರೊಬ್ಬರ 82 ವರ್ಷದ ತಾಯಿ ಸೋಮವಾರ ಸಾವನ್ನಪ್ಪಿದ್ದಾರೆ. ಈ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿ, ‘ಬಂಗಾಳದ ಮಗಳು ಶೋವಾ ಮಜುಂದಾರ್ ಟಿಎಂಸಿ ಗೂಂಡಾಗಳಿಂದ ಹಲ್ಲೆಗೊಳಗಾಗಿ ಸಾವನ್ನಪ್ಪಿರುವುದು ತೀವ್ರ ದುಃಖ ತಂದಿದೆ. ಆ ಕುಟುಂಬದ ನೋವು ಮಮತಾ ದೀದಿಯನ್ನು ಬಹುಕಾಲ ಕಾಡಲಿದೆ. ಬಂಗಾಳ ನಾಳೆ ಹಿಂಸಾಚಾರದಿಂದ ಮುಕ್ತಿಗಾಗಿ ಹೋರಾಡಲಿದೆ’ ಎಂದು ಕಿಡಿಕಾರಿದ್ದಾರೆ.
ಅದಕ್ಕೆ ಪ್ರತ್ಯುತ್ತರ ನೀಡಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ‘ಶೋವಾ ಸಾವಿಗೆ ಏನು ಕಾರಣವೆಂಬುದು ನನಗೆ ಗೊತ್ತಿಲ್ಲ. ನಾವು ಮಹಿಳೆಯರ ಮೇಲಿನ ಹಿಂಸಾಚಾರವನ್ನು ಬೆಂಬಲಿಸುವುದಿಲ್ಲ. ಆದರೆ, ಬಿಜೆಪಿ ಇದನ್ನು ರಾಜಕೀಕರಣಗೊಳಿಸುತ್ತಿದೆ. ಅಯ್ಯೋ ಬಂಗಾಳಕ್ಕೇನಾಯಿತು ಎಂದು ಅಮಿತ್ ಶಾ ಟ್ವೀಟ್ ಮಾಡುತ್ತಿದ್ದಾರೆ. ಉತ್ತರ ಪ್ರದೇಶದ ಹಾತ್ರಸ್‌ನಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆದಾಗ ಇವರೇಕೆ ಮೌನವಾಗಿದ್ದರು’ ಎಂದು ಪ್ರಶ್ನಿಸಿದ್ದಾರೆ.
ಅಲ್ಲದೆ, ‘ಬಿಜೆಪಿ ಕಾರ್ಯಕರ್ತರು ಪೊಲೀಸರ ವೇಷದಲ್ಲಿ ಆಗಮಿಸಿ ದೌರ್ಜನ್ಯ ನಡೆಸುತ್ತಿದ್ದಾರೆ’ ಎಂದೂ ಆರೋಪಿಸಿದ್ದಾರೆ. ಈ ಹಿಂದೆಯೇ ಟಿಎಂಸಿ, ಮಹಿಳೆ ಮೇಲೆ ತಮ್ಮ ಕಾರ‍್ಯಕರ್ತರು ಹಲ್ಲೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿತ್ತು.
