* ಬೀಮಾ ಕೊರೆಗಾವ್ ಹಿಂಸಾಚಾರ ಪ್ರಕರಣದ ಆರೋಪಿ ನಿಧನ* ಜಾಮೀನಿಗೆ ಅರ್ಜಿ ಸಲ್ಲಿಸಿದ್ದ ಸ್ಟಾನ್ ಸ್ವಾಮಿ ಇನ್ನಿಲ್ಲ* ಸೋಮವಾರ ಮಧ್ಯಾಹ್ನ 1:30ಕ್ಕೆ ಮೃತಪಟ್ಟಿರುವುದಾಗಿ ಮಾಹಿತಿ ಕೊಟ್ಟ ವಕೀಲ

ಮುಂಬೈ(ಜು.05): ಬೀಮಾ ಕೊರೆಗಾವ್ ಹಿಂಸಾಚಾರ ಪ್ರಕರಣದಲ್ಲಿ ಕಳೆದ ಕೆಲ ಸಮಯದಿಂದ ನ್ಯಾಯಾಂಗ ಬಂಧನದಲ್ಲಿದ್ದ ಬುಡಕಟ್ಟು ಹಕ್ಕುಗಳ ಹೋರಾಟಗಾರ ಸ್ಟಾನ್ ಸ್ವಾಮಿ ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಸ್ಟಾನ್‌ರವರು ಸೋಮವಾರ ಮಧ್ಯಾಹ್ನ 1:30ಕ್ಕೆ ಮೃತಪಟ್ಟಿರುವುದಾಗಿ ಅವರ ವಕೀಲರು ಬಾಂಬೆ ಹೈಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ.

UAPA ಕೇಸ್

ಭೀಮಾ ಕೊರೆಗಾಂವ್ ಪ್ರಕರಣದ ಆರೋಪಿಯಾಗಿದ್ದ ಸ್ಟಾನ್‌ ಸ್ವಾಮಿ ವಿರುದ್ಧ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ ಆರೋಪ ಕೇಳಿ ಬಂದಿತ್ತು. ಈ ಪ್ರಕರಣ ಸಂಬಂಧ ಎನ್‌ಐಎ ಅವರನ್ನು ಕಳೆದ ವರ್ಷ ರಾಂಚಿಯಲ್ಲಿ ಬಂಧಿಸಿತ್ತು. ಬಳಿಕ ಅವರನ್ನು ನ್ಯಾಯಾಂಗ ಬಂಧನದಲ್ಲಿರಿಸಿದ್ದು, ಅವರ ವಿರುದ್ಧ UAPA ವಿಧಿಸಲಾಗಿತ್ತು. ಕಳೆದ ವಾರವಷ್ಟೇ ಹೈಕೋರ್ಟ್‌ನಲ್ಲಿ ಜಾಮೀನು ಕೋರಿ ಅವರು ಹೊಸ ಅರ್ಜಿಯನ್ನು ಸಲ್ಲಿಸಿದ್ದರು. ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆಯ (ಯುಎಪಿಎ) ಒಂದು ಸೆಕ್ಷನ್ ಪ್ರಶ್ನಿಸಿದ್ದರು. ಎಲ್ಗಾರ್ ಪ್ರಕರಣದಲ್ಲಿ ಸ್ಟಾನ್ ಸ್ವಾಮಿ ಹಾಗೂ ಸಹ-ಆರೋಪಿಗಳನ್ನು ನವೀ ಮುಂಬಯಿಯ ತಲೋಜ ಜೈಲಿನಲ್ಲಿಇರಿಸಲಾಗಿತ್ತು. ಜೈಲಿನಲ್ಲಿ ಅಸಮರ್ಪಕ ಆರೋಗ್ಯ ಸೌಲಭ್ಯಗಳ ಬಗ್ಗೆ ಸ್ವಾಮಿ ಪದೇ ಪದೇ ದೂರು ನೀಡಿದ್ದರು.

ನಕ್ಸಲರೊಂದಿಗೆ ಸಂಪರ್ಕದ ಆರೋಪ

ಐದು ದಶಕಗಳಿಂದ ಜಾರ್ಖಂಡ್‌ನಲ್ಲಿ ಬುಡಕಟ್ಟು ಜನಾಂಗದವರ ಪರವಾಗಿ ಕೆಲಸ ಮಾಡಿದ ಸ್ಟಾನ್ ಸ್ವಾಮಿ ಅವರಿಗೆ ನಕ್ಸಲರೊಂದಿಗೆ ಸಂಪರ್ಕವಿದೆ ಎಂದೂ ಎನ್‌ಐಎ ಆರೋಪಿಸಿತ್ತು. ಕಾನೂನುಬಾಹಿರ ಚಟುವಟಿಕೆಗಳು(ತಡೆಗಟ್ಟುವಿಕೆ) ಕಾಯ್ದೆಯಡಿ ನಿಷೇಧಿತ ಸಂಘಟನೆಯಾದ ಸಿಪಿಐಎಂ ಹಿರಿಯ ನಾಯಕರು ಎಲ್ಗರ್ ಪರಿಷತ್ ಕಾರ್ಯಕ್ರಮದ ಸಂಘಟಕರು ಮತ್ತು ಬಂಧಿತ ಕಾರ್ಯಕರ್ತರೊಂದಿಗೆ ಸಂಪರ್ಕದಲ್ಲಿದ್ದಾರೆ ಮತ್ತು ಮಾವೋವಾದಿ ಮತ್ತು ನಕ್ಸಲ್ ಸಿದ್ಧಾಂತವನ್ನು ಹರಡುವ ಗುರಿಯನ್ನು ಹೊಂದಿದ್ದಾರೆ ಎಂದ ಉಲ್ಲೇಖಿಸಲಾಗಿತ್ತು. 

ಶನಿವಾರ ಹೃದಯಾಘಾತ

ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ 84 ವರ್ಷದ ಸ್ಟಾನ್ ಸ್ವಾಮಿ ಅವರಿಗೆ ಶನಿವಾರ ಹೃದಯಾಘಾತವಾಗಿತ್ತು. ಭಾನುವಾರ ಅವರಿಗೆ ವೆಂಟಿಲೇಟರ್ ಅಳವಡಿಸಿ ಕೃತಕ ಉಸಿರಾಟ ಅಳವಡಿಸಲಾಗಿತ್ತು. ಆದರೀಗ ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಮಧ್ಯಾಹ್ನ 1:30ಕ್ಕೆ ಸಾವನ್ನಪ್ಪಿದ್ದಾರೆ. ಮೇ 28 ರಂದು ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಸ್ಟಾನ್ ಸ್ವಾಮಿ ಅವರು ಮುಂಬೈನ ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.