ನವದೆಹಲಿ(ಮೇ.14): ಭಾರತ 2ನೇ ಕೊರೋನಾ ಅಲೆ ಎದುರಿಸಲು ಹೆಣಗಾಡುತ್ತಿದೆ. ಸಮಸ್ಯೆಗಳ ಆಗರದಲ್ಲಿ ಸಿಲುಕಿದೆ. ಇದೀಗ ಎಲ್ಲಾ ರಾಜ್ಯಗಳಿಂದ ಕೇಳಿಬರುತ್ತಿರುವ ಬಹುದೊಡ್ಡ ಬೇಡಿಕೆ ಲಸಿಕೆ. ಸದ್ಯ ಭಾರತದಲ್ಲಿ ಭಾರತ್ ಭಯೋಟೆಕ್ ಸಂಸ್ಥೆಯ ಕೋವಾಕ್ಸಿನ್, ಸೀರಂ ಸಂಸ್ಥೆಯ ಕೋವಿಶೀಲ್ಡ್ ಲಸಿಕೆ ನೀಡಲಾಗುತ್ತಿದೆ. ಮುಂದಿನ ವಾರದಿಂದ ರಷ್ಯಾದ ಸ್ಫುಟನಿಕ್ ಲಸಿಕೆ ಕೂಡ ಲಭ್ಯವಾಗಲಿದೆ. ಇಷ್ಟಾದರೂ ಲಸಿಕೆ ಕೊರತೆ ನೀಗಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ಪ್ರಾಯೋಗಿಕ ಅಂತಿಮ ಹಂತದಲ್ಲಿರುವ ಮತ್ತಷ್ಟು ಲಸಿಕೆಗೆ ಕೇಂದ್ರ ಮುಂದಾಗಿದೆ.

ಆಗಸ್ಟ್‌ ವೇಳೆಗೆ ಮಾಸಿಕ 18 ಕೋಟಿ ಡೋಸ್‌ ಉತ್ಪಾದನೆಯ ಭರವಸೆ!

ಕಾರಣ ಭಾರತ್ ಬಯೋಟೆಕ್ ಹಾಗೂ ಸೀರಂ ಸಂಸ್ಥೆಯ ಮತ್ತೆರಡು ಲಸಿಕೆ ಕೂಡ ಶೀಘ್ರದಲ್ಲೇ ಮಾರುಕಟ್ಟೆ ಪ್ರವೇಶಿಸಲಿದೆ. ಇದರ ಜೊತೆಗೆ ಇನ್ನೂ ನಾಲ್ಕು ಲಸಿಕೆಗಳು ಪ್ರಯೋಗದ ಹಂತದಲ್ಲಿದ್ದು, ಶೀಘ್ರದಲ್ಲೇ ಕೇಂದ್ರದಿಂದ ಅನುಮೋದನೆ ಸಿಗಲಿದೆ. 

ಡಿಸೆಂಬರ್ ಅಂತ್ಯದ ವೇಳೆ ದೇಶದ ಎಲ್ಲರಿಗೂ ಲಸಿಕೆ ಸಿಗಲಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಆರೋಗ್ಯ ಇಲಾಖೆ ಹಂಚಿಕೊಂಡಿರುವ ಮಾಹಿತಿ ಪ್ರಕಾರ, ಆಗಸ್ಟ್‌ನಿಂದ ಡಿಸೆಂಬರ್ ತಿಂಗಳ ಒಳಗೆ 216 ಕೋಟಿ ಲಸಿಕೆ ಉತ್ಪಾದನೆಯಾಗಲಿದೆ ಎಂದಿದೆ. ಇದರಲ್ಲಿ 75 ಕೋಟಿ ಕೋವಿಶೀಲ್ಡ್ ಹಾಗೂ 55 ಕೋಟಿ ಕೋವಾಕ್ಸಿನ್ ಉತ್ಪಾದನೆಯಾಗಲಿದೆ.

ಆಗಸ್ಟ್‌ನಿಂದ ಡಿಸೆಂಬರ್ ತಿಂಗಳಲ್ಲಿ ಉತ್ಪಾದನೆಯಾಗಲಿರುವ ಲಸಿಕೆ
ಕೋವಿಶೀಲ್ಡ್ = 75 ಕೋಟಿ
ಕೋವಾಕ್ಸಿನ್ = 55 ಕೋಟಿ
ಬಯೋ ಇ ಸಬ್ ಯುನಿಟ್ ಲಸಿಕೆ = 30 ಕೋಟಿ
ಜೈಡಸ್ ಕ್ಯಾಡಿಲಾ DNA ಲಸಿಕೆ = 05.0 ಕೋಟಿ
SII ನೋವಾಕ್ಸ್ =  20 ಕೋಟಿ
BB ನೇಸಲ್ ಲಸಿಕೆ = 10 ಕೋಟಿ
ಜೆನೋವಾ mRNA ಲಸಿಕೆ = 06 ಕೋಟಿ
ಸ್ಫುಟ್ನಿಕ್ ಲಸಿಕೆ  =  15.6 ಕೋಟಿ

ಇದರಲ್ಲಿ ನೋವಾಕ್ಸ್ ಸೀರಂ ಸಂಸ್ಥೆ ಲಸಿಕೆಯಾಗಿದ್ದರೆ, ನೇಸಲ್ ಲಸಿಕೆ ಭಾರತ್ ಬಯೋಟೆಕ್ ಲಸಿಕೆಯಾಗಿದೆ. ಒಟ್ಟು 8 ಲಸಿಕೆಗಳು ಭಾರತದಲ್ಲಿ ಆಗಸ್ಟ್ ತಿಂಗಳನಿಂದ ಹಂತ ಹಂತವಾಗಿ ಲಭ್ಯವಾಗಲಿದೆ.