ನವದೆಹಲಿ(ಆ29): ಕೊರೋನಾ ವೈರಸ್‌ ಪ್ರಕರಣಗಳು ಮತ್ತೊಮ್ಮೆ ದಾಖಲೆಯ ಪ್ರಮಾಣದಲ್ಲಿ ಏರಿಕೆ ಆಗಿವೆ. ಮತ್ತೊಂದೆಡೆ ಕೊರೋನಾ ಸಾವಿನಲ್ಲಿ ಮೆಕ್ಸಿಕೋವನ್ನು ಹಿಂದಿಕ್ಕಿ ಭಾರತ 3ನೇ ಸ್ಥಾನಕ್ಕೆ ಏರಿದೆ. ದೇಶದಲ್ಲಿ ಶುಕ್ರವಾರ ದಾಖಲೆಯ 77,050 ಕೊರೋನಾ ವೈರಸ್‌ ಪ್ರಕರಣಗಳು ದಾಖಲಾಗಿದ್ದು, ಸೋಂಕಿತರ ಸಂಖ್ಯೆ 34.53 ಲಕ್ಷಕ್ಕೆ ಏರಿಕೆ ಆಗಿದೆ. ಇದೇ ವೇಳೆ ಕೊರೋನಾದಿಂದ 1030 ಮಂದಿ ಸಾವನ್ನಪ್ಪಿದ್ದು, ಮೃತರ ಸಂಖ್ಯೆ 62,625ಕ್ಕೆ ಏರಿಕೆ ಆಗಿದೆ. ಈ ಮೂಲಕ ಸಾವಿನ ಸಂಖ್ಯೆಯಲ್ಲಿ ಮೂರನೇ ಸ್ಥಾನದಲ್ಲಿರುವ ಮೆಕ್ಸಿಕೋ (62,594)ವನ್ನು ಭಾರತ ಹಿಂದಿಕ್ಕಿದೆ. ಅಮೆರಿಕ (1,85,131) ಮತ್ತು ಬ್ರೆಜಿಲ್‌ (1,18,726) ಕ್ರಮವಾಗಿ ಸಾವಿನಲ್ಲಿ ಮೊದಲ 2 ಸ್ಥಾನದಲ್ಲಿವೆ.

ಇದೇ ವೇಳೆ ಕೊರೋನಾದಿಂದ ಒಂದೇ ದಿನ 64,538 ಮಂದಿ ಚೇತರಿಸಿಕೊಂಡಿದ್ದು, ಗುಣಮುಖರಾದವರ ಸಂಖ್ಯೆ 26 ಲಕ್ಷದ ಗಡಿ ದಾಡಿದೆ. ಅಲ್ಲದೇ ದೇಶದಲ್ಲಿ ಈಗ ಸಕ್ರಿಯ ಪ್ರಕರಣಗಳಿಗಿಂತಲೂ ಗುಣಮುಖರಾದವರ ಪ್ರಮಾಣ 3.5 ಪಟ್ಟು ಅಧಿಕ ಇದೆ. ಈ ಮಧ್ಯೆ ಕೊರೋನಾ ಸಾವಿನ ಪ್ರಮಾಣ ಶೇ.1.82ಕ್ಕೆ ಇಳಿಕೆ ಕಂಡಿದೆ. ಚೇತರಿಕೆ ಪ್ರಮಾಣ ಶೇ.76.28ಕ್ಕೆ ಏರಿಕೆ ಆಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಸಾವು: ಟಾಪ್‌ 5 ದೇಶಗಳು

ಅಮೆರಿಕ 1.85 ಲಕ್ಷ

ಬ್ರೆಜಿಲ್‌ 1.18 ಲಕ್ಷ

ಭಾರತ 62,625

ಮೆಕ್ಸಿಕೋ 62,594

ಬ್ರಿಟನ್‌ 41,477