ಹೈದರಾಬಾದ್‌ (ಫೆ.21): ಕಳೆದ ವರ್ಷ ಚೀನಾದ ವುಹಾನ್‌ನಿಂದ ಕೊರೋನಾ ವೈರಸ್‌ ಹರಡತೊಡಗಿದ ಮೇಲೆ ನಾನಾ ದೇಶಗಳಲ್ಲಿ ಅದು ಸಾವಿರಾರು ರೂಪಗಳನ್ನು ತಳೆದಿದ್ದು, ಭಾರತವೊಂದರಲ್ಲೇ 7569 ರೂಪದ ಕೊರೋನಾ ವೈರಸ್‌ಗಳಿವೆ ಎಂಬ ಅಚ್ಚರಿಯ ಸಂಗತಿ ಹೊರಬಿದ್ದಿದೆ.

ಹೈದರಾಬಾದ್‌ನ ಸೆಂಟರ್‌ ಫಾರ್‌ ಸೆಲ್ಯುಲರ್‌ ಅಂಡ್‌ ಮಾಲೆಕ್ಯುಲರ್‌ ಬಯಾಲಜಿ (ಸಿಸಿಎಂಬಿ) ಪ್ರಯೋಗಾಲಯದ ವಿಜ್ಞಾನಿಗಳ ತಂಡ ಈ ಕುರಿತು ಪ್ರಬಂಧವೊಂದನ್ನು ಪ್ರಕಟಿಸಿದ್ದು, ಅದರಲ್ಲಿ ಕಳೆದ ವರ್ಷ ಭಾರತದಲ್ಲಿ ಕೊರೋನಾ ವೈರಸ್‌ ಪತ್ತೆಯಾದ ನಂತರ ಇಲ್ಲಿಯವರೆಗೆ ಒಟ್ಟು 7569 ರೂಪಗಳನ್ನು ಗುರುತಿಸಲಾಗಿದೆ ಎಂದು ಹೇಳಲಾಗಿದೆ. 

ನೆರೆ ರಾಜ್ಯಗಳಲ್ಲಿ ಹೆಚ್ಚುತ್ತಿದೆ ಕೊರೊನಾ ಕೇಸ್‌: ಆರೋಗ್ಯ ಸಚಿವರಿಂದ ಸುದ್ಧಿಗೋಷ್ಠಿ

ನಮ್ಮ ದೇಶದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಕೊರೋನಾ ವೈರಸ್‌ನ ಮಾದರಿಗಳನ್ನು ಸೀಕ್ವೆನ್ಸಿಂಗ್‌ ಮಾಡಿಲ್ಲದೆ ಇದ್ದರೂ ಇಷ್ಟುರೂಪಗಳು ಪತ್ತೆಯಾಗಿವೆ. ಇನ್ನಷ್ಟುಮಾದರಿಗಳನ್ನು ಸೀಕ್ವೆನ್ಸಿಂಗ್‌ಗೆ ಒಳಪಡಿಸಿದರೆ ಇನ್ನೂ ಹೆಚ್ಚು ರೂಪಾಂತರಗಳು ಪತ್ತೆಯಾಗಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಇಷ್ಟೊಂದು ವಿಧದ ಕೊರೋನಾ ವೈರಸ್‌ನಲ್ಲಿ ವೇಗವಾಗಿ ಹರಡುವ ಕೆಲ ಜಾತಿಗಳು ಹಾಗೂ ನಿಧಾನವಾಗಿ ಹರಡುವ ಕೆಲ ಜಾತಿಗಳು ಹೀಗೆ ಬೇರೆ ಬೇರೆ ತೀವ್ರತೆಯ ವೈರಾಣುಗಳಿವೆ. ಒಟ್ಟಾರೆಯಾಗಿ ಭಾರತದಲ್ಲಿ ತೀರಾ ವೇಗವಾಗಿ ಹರಡುವ ಕೊರೋನಾ ವೈರಸ್‌ ಕಂಡುಬಂದಿಲ್ಲ. ದಕ್ಷಿಣದ ರಾಜ್ಯಗಳಲ್ಲಿ ಹೆಚ್ಚಾಗಿ ಎನ್‌440ಕೆ ಎಂಬ ಜಾತಿಯ ಕೊರೋನಾ ವೈರಸ್‌ ಹರಡುತ್ತಿದೆ. ಇದು ಹೇಗೆ ಹರಡುತ್ತದೆ ಎಂಬ ಬಗ್ಗೆ ಇನ್ನಷ್ಟುಅಧ್ಯಯನ ನಡೆಸಬೇಕಿದೆ ಎಂದು ಸಿಸಿಎಂಬಿ ನಿರ್ದೇಶಕ ಡಾ.ರಾಕೇಶ್‌ ಮಿಶ್ರಾ ಹೇಳಿದ್ದಾರೆ.