ಚೆನ್ನೈ: ಲೆಬನಾನ್‌ ರಾಜಧಾನಿ ಬೈರೂತ್‌ನಲ್ಲಿ ಟನ್‌ಗಟ್ಟಲೆ ಅಮೋನಿಯಂ ನೈಟ್ರೇಟ್‌ ರಾಸಾಯನಿಕ ಸಿಡಿದು ಉಂಟಾದ ಸ್ಫೋಟವನ್ನೇ ಹೋಲುವ ಘಟನೆ ಚೆನ್ನೈ ಬಂದರಿನಲ್ಲೂ ನಡೆಯುವ ಸಾಧ್ಯತೆ ಇದೆ ಎಂದು ಪಿಎಂಕೆ ಪಕ್ಷದ ಸಂಸ್ಥಾಪಕ ರಾಮದಾಸ್‌ ಎಚ್ಚರಿಸಿದ್ದಾರೆ. ಇದಕ್ಕೆ ಕಸ್ಟಮ್ಸ್‌ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದು, ರಾಸಾಯನಿಕ ದಾಸ್ತಾನು ಸುರಕ್ಷಿತವಾಗಿದೆ ಎಂದು ಹೇಳಿದ್ದಾರೆ.

ಚೆನ್ನೈ ಬಂದರಿನ ಗೋದಾಮಿನಲ್ಲಿ 740 ಟನ್‌ ಅಮೋನಿಯಂ ನೈಟ್ರೇಟ್‌ನ ದಾಸ್ತಾನು ಇದ್ದು, ಸೂಕ್ತ ಕ್ರಮಗಳನ್ನು ತೆಗೆದಕೊಳ್ಳದೇ ಹೋದರೆ ಬೈರೂತ್‌ ಬಂದರಿನಲ್ಲಿ ಉಂಟಾದ ಅದೇ ಘಟನೆ ಚೆನ್ನೈನಲ್ಲೂ ಪುನಾರಾವರ್ತನೆಯಾಗಲಿದೆ. 2015ರಿಂದ ಅಲ್ಲಿ ರಾಸಾಯನಿಕ ಶೇಖರಿಸಿ ಇಡಲಾಗಿದ್ದು, ಅಲ್ಲಿಂದ ಅದನ್ನು ತೆರವುಗೊಳಿಸದಿದ್ದರೆ ಅಪಾಯ ತಪ್ಪಿದ್ದಲ್ಲ ಎಂದು ಟ್ವೀಟರ್‌ನಲ್ಲಿ ಬರೆದುಕೊಂಡಿದ್ದಾರೆ. ಇದರ ಬೆನ್ನಲ್ಲೇ ಕಸ್ಟಮ್ಸ್‌ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದು, ರಾಸಾಯನಿಕವನ್ನು ಸುರಕ್ಷಿತವಾಗಿ ದಾಸ್ತಾನು ಮಾಡಲಾಗಿದ್ದು, ಯಾವುದೇ ಅಪಾಯ ಇಲ್ಲ. ಶೀಘ್ರವೇ ಅದನ್ನು ಹರಾಜು ಹಾಕಲಾಗುವುದು ಎಂದು ಹೇಳಿದ್ದಾರೆ.

ಲೆಬನಾನ್‌ನಲ್ಲಿ ಸ್ಫೋಟವಾಗಿದ್ದು 2750 ಟನ್‌ ಅಮೋನಿಯಂ ನೈಟ್ರೇಟ್‌!

1.80 ಕೋಟಿ ಬೆಲೆ ಬಾಳುವ ಈ ರಾಸಾಯನಿಕವನ್ನು 2015ರ ನವೆಂಬರ್‌ನಲ್ಲಿ ತಮಿಳುನಾಡು ಮೂಲದ ವರ್ತಕ ಅಕ್ರಮವಾಗಿ ಆಮದು ಮಾಡಿಕೊಳ್ಳುವಾಗ ವಶ ಪಡಿಸಲಾಗಿತ್ತು. ಮಂಗಳವಾರ ಬೈರೂತ್‌ ಬಂದರಿನಲ್ಲಿ 2750 ಟನ್‌ ರಾಸಾಯನಿಕ ಸ್ಫೋಟಿಸಿ 135 ಮಂದಿ ಸಾವನ್ನಪ್ಪಿದ್ದರು. 4000 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.