ಪ್ರಣಬ್ ಚೇತರಿಕೆಗಾಗಿ 72 ತಾಸುಗಳ ಹೋಮ!
ಕೊರೋನಾ ಸೋಂಕಿನ ನಡುವೆಯೇ ಮೆದುಳಿನ ಶಸ್ತ್ರ ಚಿಕಿತ್ಸೆ| ಪ್ರಣಬ್ ಮುಖರ್ಜಿ ಅವರ ಆರೋಗ್ಯ ಸ್ಥಿತಿ ಗಂಭೀರ| ಪ್ರಣಬ್ ಚೇತರಿಕೆಗಾಗಿ 72 ತಾಸುಗಳ ಹೋಮ!
ನವದೆಹಲಿ(ಆ.13): ಕೊರೋನಾ ಸೋಂಕಿನ ನಡುವೆಯೇ ಮೆದುಳಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿಯೇ ಇದೆ. ವೆಂಟಿಲೇಟರ್ ಅಳವಡಿಸಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸೇನಾ ಆಸ್ಪತ್ರೆ ಬುಧವಾರ ತಿಳಿಸಿದೆ.
ಮೆದುಳು ಸರ್ಜರಿ ಬಳಿಕ ಮಾಜಿ ರಾಷ್ಟ್ರಪತಿ ಪ್ರಣಬ್ ಸ್ಥಿತಿ ಚಿಂತಾಜನಕ!
ಈ ನಡುವೆ ಮುಖರ್ಜಿ ಅವರ ಪುತ್ರಿ ಶರ್ಮಿಷ್ಠಾ ‘ದೇವರು ತಂದೆಯವರಿಗೆ ಒಳಿತು ಮಾಡಲಿ, ಏನೇ ಆದರೂ ಎದುರಿಸುವ ಶಕ್ತಿಯನ್ನು ದೇವರು ನನಗೆ ನೀಡಲಿ’ ಎಂದು ಟ್ವೀಟ್ ಮಾಡಿದ್ದಾರೆ. ಮತ್ತೊಂದೆಡೆ ಪ್ರಣಬ್ ಮುಖರ್ಜಿ ಅವರು ಶೀಘ್ರ ಗುಣಮುಖರಾಗಲೆಂದು ಅವರು ಹುಟ್ಟೂರು ಪಶ್ಚಿಮ ಬಂಗಾಳದ ಕಿರ್ನಾಹಾರ್‌ನಲ್ಲಿ ಮಂಗಳವಾರದಿಂದ 72 ತಾಸುಗಳ ಕಾಲ ಹೋಮ- ಹವನ ನಡೆಸಲಾಗುತ್ತಿದೆ.
ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಗೆ ತಗುಲಿದ ಕೊರೋನಾ!
84 ವರ್ಷದ ಮುಖರ್ಜಿ ಸೋಮವಾರ ಗಂಭೀರ ಸ್ಥಿತಿಯಲ್ಲಿ ಸೇನಾ ಸಂಶೋಧನೆ ಮತ್ತು ರೆಫರಲ್ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಕೊರೋನಾ ಸೋಂಕಿರುವುದೂ ಪತ್ತೆಯಾಗಿತ್ತು. ಮೆದುಳಿನಲ್ಲಿ ದೊಡ್ಡ ಪ್ರಮಾಣದ ರಕ್ತ ಹೆಪ್ಪುಗಟ್ಟಿದ್ದ ಕಾರಣ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿತ್ತು. ಇದರ ಬೆನ್ನಲ್ಲೇ ಮುಖರ್ಜಿ ಅವರ ಆರೋಗ್ಯ ಸ್ಥಿತಿ ವಿಷಮಗೊಂಡಿದೆ.
2012ರ ಜುಲೈನಿಂದ 2017ರವರೆಗೆ ಪ್ರಣಬ್ ಮುಖರ್ಜಿ ಅವರು ದೇಶದ 13ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದರು.