7 ಕೋಟಿ ಚಿನ್ನ ದೋಚಿದ್ದವರು 20 ತಾಸಿನೊಳಗೆ ಸೆರೆ| ಸೂಪರ್ ಕಾಫ್ಸ್: ಹೊಸೂರಿನ ಮುತ್ತೂಟ್ ಫೈನಾನ್ಸ್ ದರೋಡೆ ಕೇಸ್| ಸೈಬರಾಬಾದ್ ಪೊಲೀಸರಿಂದ ಮಿಂಚಿನ ಕಾರ್ಯಾಚರಣೆ
ಹೈದರಾಬಾದ್(ಜ.24): ಆನೇಕಲ್ ಗಡಿಭಾಗದ, ತಮಿಳುನಾಡಿನ ಹೊಸೂರಿನ ಮುತ್ತೂಟ್ ಫೈನಾನ್ಸ್ ಗೋಲ್ಡ್ ಲೋನ್ ಸಂಸ್ಥೆಯಿಂದ 7 ಕೋಟಿ ರು. ಮೌಲ್ಯದ 25 ಕೆ.ಜಿ. ಚಿನ್ನಾಭರಣ ಹಾಗೂ 96,000 ನಗದು ದೋಚಿ ಪರಾರಿಯಾಗಿದ್ದ ಅಂತರ್ ರಾಜ್ಯ ಕಳ್ಳರ ಗುಂಪನ್ನು ಸೈಬರಾಬಾದ್ ಪೊಲೀಸರು ಸಿನಿಮೀಯ ರೀತಿ ಕಾರ್ಯಚಾರಣೆ ನಡೆಸಿ ಕೇವಲ 20 ಗಂಟೆಯೊಳಗೆ ಬಂಧಿಸಿದ್ದಾರೆ.
"
ಹೈದರಾಬಾದ್‌ನ ಸಂಸತ್‌ಪುರ ಹೆದ್ದಾರಿಯಲ್ಲಿ ಶನಿವಾರ ನಸುಕಿನ ವೇಳೆ ಮಿಂಚಿನ ಕಾರ್ಯಾಚರಣೆ ನಡೆಸಿ 7 ಮಂದಿ ಆರೋಪಿಗಳನ್ನು ಮಾಲು ಸಮೇತ ಸೆರೆ ಹಿಡಿಯಲಾಗಿದ್ದು, ಆರೋಪಿಗಳು ಸಾಗಣೆಗೆ ಬಳಸಿದ್ದ ಕಂಟೇನರ್ ಲಾರಿ, 7 ನಾಡ ಪಿಸ್ತೂಲ್ ಹಾಗೂ ಮಾರಕಾಸ್ತ್ರ ವಶಪಡಿಸಿಕೊಳ್ಳಲಾಗಿದೆ. ಓರ್ವ ತಲೆಮರೆಸಿಕೊಂಡಿದ್ದಾನೆ. ಬಂಧಿತರು ಜಾರ್ಖಂಡ್, ಉತ್ತರ ಪ್ರದೇಶ, ಮಧ್ಯಪ್ರದೇಶಕ್ಕೆ ಸೇರಿದವರು ಎಂದು ಸೈಬರಾಬಾದ್ ಪೊಲೀಸ್ ಆಯುಕ್ತ ಸಜ್ಜನರ್ ಮಾಹಿತಿ ನೀಡಿದ್ದಾರೆ.
ಹಿಂದೆ ಸಹ ಸಿಕ್ಕಿಬಿದ್ದಿದ್ದರು:
ಕಳೆದ ಅಕ್ಟೋಬರ್‌ನಲ್ಲಿ ಇದೇ ಗುಂಪು ಲೂಧಿಯಾನದಲ್ಲಿ ಮುತ್ತೂಟ್ ಫೈನಾನ್ಸ್‌ನ ಶಾಖೆ ಲೂಟಿಗೆ ಯತ್ನಿಸಿತ್ತು. ಆ ವೇಳೆಯೂ ದರೋಡೆಕೋರರನ್ನು ಬಂಧಿಸಲಾಗಿತ್ತು. ಆ ವೇಳೆ ತಪ್ಪಿಸಿಕೊಂಡಿದ್ದ ಇಬ್ಬರು ಆರೋಪಿಗಳು ಈಗಿನ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿದ್ದಾರೆ.
ಸಿನಿಮಾ ಸೈಟಲ್ಲಿ ಚೇಸ್
ಶುಕ್ರವಾರ ಮುಂಜಾನೆ 9.30ಕ್ಕೆ ಕಳ್ಳರ ಗುಂಪು ಬಂದೂಕು ತೋರಿಸಿ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರು ಪಟ್ಟಣದಲ್ಲಿರುವ ಮುತ್ತೂಟ್ ಫೈನಾನ್ಸ್ ಕಂಪನಿಯಿಂದ 25 ಕೆ.ಜಿ. ಚಿನ್ನ ಹಾಗೂ ನಗದು ದೋಚಿ ಪರಾರಿ ಆಗಿತ್ತು. ಪ್ರಾಥಮಿಕ ತನಿಖೆಯಿಂದ ಲಭ್ಯವಾದ ಮಾಹಿತಿಯನ್ನು ಆಧರಿಸಿ ದರೋಡೆಕೋರರ ಚಲನವಲನದ ಬಗ್ಗೆ ಕರ್ನಾಟಕ, ತಮಿಳುನಾಡು ಮತ್ತು ತೆಲಂಗಾಣ ಪೊಲೀಸ್ ಇಲಾಖೆಗೆ ತಕ್ಷಣವೇ ಸಂದೇಶ ರವಾನಿಸಲಾಗಿತ್ತು. ಈ ಮಧ್ಯೆ ‘ದಿಶಾ ಎನ್‌ಕೌಂಟರ್’ ಖ್ಯಾತಿಯ ವಿ.ಜಿ. ಸಜ್ಜನರ್, ಕೃಷ್ಣಗಿರಿ ಎಸ್.ಪಿ. ಬಿಂಡಿ ಗಂಗಾಧರ್ ಅವರು ತೆಲಂಗಾಣ ಪೊಲೀಸರ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಮಾಹಿತಿ ಹಂಚಿಕೊಂಡಿದ್ದರು.
ಶುಕ್ರವಾರ ರಾತ್ರಿ ಶಸ್ತ್ರ ಸಜ್ಜಿತ ದರೋಡೆಕೋರರು ಆಂಧ್ರ ಪ್ರದೇಶದತ್ತ ಬರುತ್ತಿರುವ ಬಗ್ಗೆ ತಮಿಳುನಾಡು ಪೊಲೀಸರು ನೀಡಿದ ಮಾಹಿತಿಯನ್ನು ಆಧರಿಸಿ ಹಲವು ಪೊಲೀಸ್ ತಂಡ ರಚಿಸಿ ಕಾರ್ಯಾಚರಣೆ ಇಳಿಸಲಾಗಿತ್ತು. ಕೆಲವೇ ಹೊತ್ತಿನಲ್ಲಿ 100 ಮಂದಿ ಪೊಲೀಸ್ ಅಧಿಕಾರಿಗಳು ರಾತ್ರೋರಾತ್ರಿ ಹೆದ್ದಾರಿಗಳಲ್ಲಿ ಕಾರ್ಯಾರಣೆಗೆ ಇಳಿದಿದ್ದರು.
ಮುಂಜಾನೆ 3 ಗಂಟೆಯ ವೇಳೆಗೆ ಟಾಟಾ ಸುಮೋವೊಂದು ಕರ್ನೂಲ್ ಹೆದ್ದಾರಿಯಲ್ಲಿ ಅನುಮಾನಾಸ್ಪದವಾಗಿ ಹೋಗುತ್ತಿರುವುದನ್ನು ಗಮನಿಸಿದ ಪೊಲೀಸರು ರಾಯ್ಕಲ್ ಟೋಲ್ ಪ್ಲಾಜಾಕ್ಕೆ ಮಾಹಿತಿ ರವಾನಿಸಿದ್ದರು. ಬಳಿಕ ಟೋಲ್ ಪ್ಲಾಜಾದಿಂದ ಆ ವಾಹನವನ್ನು ಹೋಗಲು ಬಿಟ್ಟು ಹಿಂಬಾಲಿಸಿಕೊಂಡು ಹೋಗಲಾಯಿತು. ಟೊಂಡುಪಳ್ಳೆ ಟೋಲ್ ಪ್ಲಾಜಾದಲ್ಲಿ ಟಾಟಾ ಸುಮೋವನ್ನು ತಪಾಸಣೆ ಮಾಡಿ ಐವರನ್ನು ವಶಕ್ಕೆ ಪಡೆಯಲಾಯಿತು. ವಿಚಾರಣೆ ವೇಳೆ ಆರೋಪಿಗಳು ಮುತ್ತೂಟ್ ಫೈನಾನ್ಸ್‌ನಲ್ಲಿ ಲೂಟಿಯಲ್ಲಿ ಭಾಗಿಯಾಗಿದ್ದ ಸಂಗತಿಯನ್ನು ಬಾಯಿ ಬಿಟ್ಟಿದ್ದು, ಟ್ರಕ್‌ವೊಂದರ ಕಂಟೇನರ್‌ನಲ್ಲಿ ಚಿನ್ನಾಭರಣಗಳನ್ನು ಬಚ್ಚಿಟ್ಟಿರುವ ಬಗ್ಗೆ ತಿಳಿಸಿದ್ದಾರೆ ಎಂದು ಪೊಲೀಸ್ ಆಯುಕ್ತ ಸಜ್ಜನರ್ ಮಾಹಿತಿ ನೀಡಿದ್ದಾರೆ.
ಚಿನ್ನಾಭರಣ ವಶ:
ಆರೋಪಿಗಳು ನೀಡಿದ ಸುಳಿವಿನ ಮೇರೆಗೆ ಹೈದರಾಬಾದ್‌ನತ್ತ ತೆರಳುತ್ತಿದ್ದ ಲಾರಿಯನ್ನು ಪತ್ತೆಗೆ ಕಾರ್ಯಾಚರಣೆ ನಡೆಸಲಾಯಿತು. ತಕ್ಷಣವೇ ಬಾಲಾನಗರ್ ಪೊಲೀಸರಿಗೆ ಸೂಚನೆ ನೀಡಿ ಲಾರಿಯನ್ನು ವಶಕ್ಕೆ ಪಡೆಯಲಾಯಿತು. ಲಾರಿಯ ಬಾಕ್ಸ್‌ವೊಂದರಲ್ಲಿ ಶಸ್ತ್ರಾಸ್ತ್ರಗಳ ಜೊತೆ ಚಿನ್ನಭಾರಣಗಳನ್ನು ಬಚ್ಚಿಡಲಾಗಿತ್ತು ಎಂದು ಸಜ್ಜನರ್ ತಿಳಿಸಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 24, 2021, 1:25 PM IST