*  ರಾಜ್ಯಗಳ 12 ಶಾಸನಸಭೆಗಳ ಗ್ರಂಥಾಲಯ ಸಂಯೋಜನಾ ಕಾರ್ಯ ಪ್ರಗತಿಯಲ್ಲಿ*  ದಾಖಲೆಯ 995 ಗಂಟೆ ಸಭೆ*  ಕಳೆದ 3 ವರ್ಷಗಳಲ್ಲಿ ಲೋಕಸಭಾ ಚಟುವಟಿಕೆಗಳಿಗಾಗಿ ಕೇಂದ್ರ ಸರ್ಕಾರ 2475 ಕೋಟಿ ಅನುದಾನ  

ಡೆಲ್ಲಿ ಮಂಜು

ನವದೆಹಲಿ(ಜೂ.19): ಡಿಜಿಟಲ್‌ ತಂತ್ರಜ್ಞಾನದ ಆಳವಡಿಕೆಯಿಂದ ಲೋಕಸಭಾ ಕಾರ್ಯಾಲಯವು ತೆರಿಗೆದಾರರ 668 ಕೋಟಿಯಷ್ಟು ಹಣ ಉಳಿತಾಯ ಮಾಡಿದೆ ಎಂದು ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ತಿಳಿಸಿದ್ದಾರೆ.

ಲೋಕಸಭಾ ಸ್ಪೀಕರ್‌ ಆಗಿ ಮೂರು ವರ್ಷಗಳು ಅವಧಿ ಪೂರೈಸಿದ ಹಿನ್ನೆಲೆಯಲ್ಲಿ ಪ್ರಾದೇಶಿಕ ಭಾಷೆಗಳ ಮಾಧ್ಯಮಗಳ ಜೊತೆ ಅಭಿಪ್ರಾಯ ಹಂಚಿಕೊಂಡ ಅವರು, ಕಳೆದ 3 ವರ್ಷಗಳಲ್ಲಿ ಲೋಕಸಭಾ ಚಟುವಟಿಕೆಗಳಿಗಾಗಿ ಕೇಂದ್ರ ಸರ್ಕಾರ 2475 ಕೋಟಿ ಅನುದಾನ ಒದಗಿಸಿದೆ. ಇದರಲ್ಲಿ ಲೋಕಸಭಾ ಕಾರ್ಯಾಲಯ .668 ಕೋಟಿಯಷ್ಟುಮೊತ್ತವನ್ನು ಉಳಿತಾಯ ಮಾಡಿದೆ. ಅಂದರೆ ಶೇ.27ರಷ್ಟುಹಣವನ್ನು ಉಳಿತಾಯ ಮಾಡಿದ್ದೇವೆ. ಇದಕ್ಕೆ ಕಾರಣ ಡಿಜಿಟಲೀಕರಣಕ್ಕೆ ಒತ್ತು ನೀಡಿದ್ದು ಎಂದರು.

Youth Parliament Festival ರಾಷ್ಟ್ರ ಮೊದಲು, ಯುವ ಸಂಸತ್ ಉತ್ಸವದಲ್ಲಿ ಲೋಕಸಭಾಧ್ಯಕ್ಷ ಓಂ ಬಿರ್ಲಾ ಸಂದೇಶ!

ಡಿಜಿಟಲೀಕರಣದ ಪ್ರಮುಖ ಅಂಶ ಎಂದರೆ ಸಂಸತ್‌ ಗ್ರಂಥಾಲಯವನ್ನು ಎಲ್ಲರಿಗೂ ಆನ್‌ಲೈನ್‌ ವ್ಯವಸ್ಥೆ ಒದಗಿಸುತ್ತಿರುವುದು ಇದೇ ಮೊದಲ ಬಾರಿಯಾಗಿದ್ದು, ಆನ್‌ಲೈನ್‌ ಮೂಲಕ ಗ್ರಂಥಾಲಯ ಭೇಟಿಗೆ ಕಾಯ್ದರಿಸಬಹುದಾಗಿದೆ. ಇದಲ್ಲದೆ ಸಂಸತ್‌ ಗ್ರಂಥಾಲಯದ ಜೊತೆ ರಾಜ್ಯಗಳ 12 ಶಾಸನಸಭೆಗಳ ಗ್ರಂಥಾಲಯಗಳನ್ನು ಸಂಯೋಜಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ದಾಖಲೆಯ 995 ಗಂಟೆ ಸಭೆ:

ಇದೇ ವೇಳೆ ಲೋಕಸಭಾ ಚಟುವಟಿಕೆಗಳ ಕುರಿತಾಗಿಯೂ ಮಾಹಿತಿ ಹಂಚಿಕೊಂಡ ಸ್ಪೀಕರ್‌, ಈ 17ನೇ ಲೋಕಸಭೆಯ 8 ಅಧಿವೇಶನಗಳಲ್ಲಿ ಶೇ.106 ಉತ್ಪಾದಕತೆ(ಪೊ›ಡಕ್ಟೀವ್‌ ಆಫ್‌ ಹೌಸ್‌) ಆಗಿದೆ. 16ನೇ ಲೋಕಸಭೆಯ 8 ಅಧಿವೇಶನಗಳಲ್ಲಿ ಶೇ.95ರಷ್ಟು ಉತ್ಪಾದಕತೆ ಆಗಿತ್ತು ಎಂದರು. ಅದಲ್ಲದೇ ಕಳೆದ ಮೂರು ಅಧಿವೇಶನಗಳಿಗೆ ಹೋಲಿಕೆ ಮಾಡಿದರೆ 17ನೇ ಲೋಕಸಭೆ 995 ಗಂಟೆಗಳ ಕಾಲ ಅಧಿವೇಶನ ನಡೆಸಿ ದಾಖಲೆ ಸೃಷ್ಟಿಸಿದೆ. ಇನ್ನು ಕಳೆದ 8 ಅಧಿವೇಶನಗಳಲ್ಲಿ 139 ಮಸೂದೆಗಳನ್ನು ಆಡಳಿತ ಪಕ್ಷ ಮಂಡಿಸಿದೆ. ಬಾಕಿ ಇದ್ದ 10 ಮಸೂದೆಗಳು ಸೇರಿ ಒಟ್ಟು 149 ಮಸೂದೆಗಳು ಪಾಸ್‌ ಆಗಿವೆ. ಪ್ರತಿ ಮಸೂದೆ ಸರಾಸರಿ 132 ನಿಮಿಷಗಳು ಚರ್ಚೆಯಾಗಿವೆ ಎಂದರು.