ಜಮ್ಮು ಕಾಶ್ಮೀರದ 60 ಯುವಕರು ಏಕಾಏಕಿ ನಾಪತ್ತೆ: LoCಯಲ್ಲಿ ಉಗ್ರರ ಶಿಬಿರ ಪ್ರತ್ಯಕ್ಷ!
* ಕಣಿವೆ ನಾಡಿನಲ್ಲಿ ಹೆಚ್ಚಿದ ಆತಂಕ
* ಜಮ್ಮು ಕಾಶ್ಮೀರದ 60 ಯುವಕರು ನಾಪತ್ತೆ
* ಗಡಿ ನಿಯಂತ್ರಣಾ ರೇಖೆ ಬಳಿ ಮತ್ತೆ ಉಗ್ರರ ಶಿಬಿರ
ಶ್ರೀನಗರ(ಆ.31): ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚಾಗುವ ಲಕ್ಷಣಗಳು ಕಂಡು ಬಂದಿವೆ. ಭದ್ರತಾ ಸಂಸ್ಥೆಗಳ ಪ್ರಕಾರ, ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಟ್ಟಹಾಸ ಆರಂಭವಾದ ಬಳಿಕ, ನೆರೆ ರಾಷ್ಟ್ರಗಳಲ್ಲಿ ಭಯೋತ್ಪಾದಕ ಸಂಘಟನೆಗಳ ಮನೋಬಲ ಹೆಚ್ಚಾಗಿದೆ. ಕನಿಷ್ಠ ಆರು ಭಯೋತ್ಪಾದಕ ಸಂಘಟನೆಗಳು ಜಮ್ಮು ಮತ್ತು ಕಾಶ್ಮೀರಕ್ಕೆ ನುಸುಳಿವೆ ಎಂದು ಭಾರತೀಯ ಭದ್ರತಾ ಸಂಸ್ಥೆಗಳು ಎಚ್ಚರಿಕೆ ನೀಡಿವೆ. ರಾಜ್ಯದ ಸುಮಾರು 60 ಯುವಕರು ಇದ್ದಕ್ಕಿದ್ದಂತೆ ಕಾಣೆಯಾಗಿದ್ದಾರೆ ಎಂಬುದು ಅತ್ಯಂತ ಆತಂಕಕಾರಿ ವಿಚಾರವಾಗಿದೆ. ಈ ಯುವಕರು ಭಯೋತ್ಪಾದಕರ ಮಾತಿಗೆ ಮರುಳಾಗಿರಬಹುದು ಅಥವಾ ಅವರ ಸಂಪರ್ಕದಲ್ಲಿರಬಹುದು ಎನ್ನಲಾಗಿದೆ.
ಕೆಲಸವಿದೆ ಎಂದು ಹೇಳಿ ಹೋದ ಯುವಕರು
ಜಮ್ಮು ಮತ್ತು ಕಾಶ್ಮೀರದಲ್ಲಿ ಕನಿಷ್ಠ 60 ಯುವಕರು ಕಾಣೆಯಾಗಿದ್ದು, ಇವರೆಲ್ಲರೂ ಮನೆಯಲ್ಲಿ ಹೆಚ್ಚಿನವರು ಯಾವುದೋ ನೆಪದಲ್ಲಿ ಕೊಟ್ಟು ಮನೆ ಬಿಟ್ಟು ಹೋಗಿದ್ದರೆ, ಇನ್ನು ಕೆಲವರು ಕೆಲಸಕ್ಕೆ ಹೋಗುವ ಅಥವಾ ಕೆಲಸ ಹುಡುಕುವ ನೆಪದಲ್ಲಿ ಮನೆ ಬಿಟ್ಟಿದ್ದಾರೆ ಎಂದು ಏಜೆನ್ಸಿಗಳು ಸಂಗ್ರಹಿಸಿದ ಮಾಹಿತಿಯಲ್ಲಿ ತಿಳಿದು ಬಂದಿದೆ.
ಕಾಶ್ಮೀರದ ಹಿರಿಯ ಪೊಲೀಸ್ ಅಧಿಕಾರಿ ವಿಜಯ್ ಕುಮಾರ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಇಷ್ಟು ದೊಡ್ಡ ಸಂಖ್ಯೆಯ ಯುವಕರು ಕಣ್ಮರೆಯಾಗುತ್ತಿರುವುದು ಆತಂಕವನ್ನು ಹೆಚ್ಚಿಸಿದೆ. ಯುವಕರು ಹಾದಿ ತಪ್ಪಿದ್ದರೆ, ತಪ್ಪು ದಾರಿ ಹಿಡಿದಿದ್ದರೆ ಹಿಂಸೆಯ ಹಾದಿ ಹಿಡಿಯಬೇಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದಿದ್ದಾರೆ.
ಕಣಿವೆ ನಾಡಿನಲ್ಲಿ ಹೆಚ್ಚಿದ ಹಿಂಸಾಚಾರ
ಕಳೆದ ಒಂದು ತಿಂಗಳಲ್ಲಿ ಕಣಿವೆ ನಾಡಿನ ಪರಿಸ್ಥಿತಿ ಕೊಂಚ ಬದಲಾಗಿದೆ. ಕಳೆದ ಕೆಲವು ವರ್ಷಗಳಿಂದ ಶಾಂತವಾಗಿದ್ದ ಕಣಿವೆಯಲ್ಲಿ ಹಿಂಸಾಚಾರದ ಘಟನೆಗಳು ಹೆಚ್ಚಾಗಿವೆ. ಹೀಗಾಗಿ ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಆತಂಕ ಹೆಚ್ಚಾಗಿದೆ. ಇದು ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಹಿಡಿತದ ಬಳಿಕದ ಬೆಳವಣಿಗೆ ಎನ್ನಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದು, ಕಳೆದ ಒಂದು ತಿಂಗಳಿನಿಂದ ಪ್ರತಿದಿನ ದಾಳಿ ನಡೆಯುತ್ತಿದೆ. ಈ ದಾಳಿ ಭದ್ರತಾ ಪಡೆಗಳ ಮೇಲೆ ಅಥವಾ ರಾಜಕೀಯ ನಾಯಕರ ಮೇಲೆ ನಡೆಯುತ್ತಿದೆ ಎಂದಿದ್ದಾರೆ.
ಎಲ್‌ಒಸಿಯಲ್ಲಿ ಭಯೋತ್ಪಾದಕ ಶಿಬಿರಗಳು ಮತ್ತೆ ಆಕ್ಟಿವ್
ಪಾಕಿಸ್ತಾನದಿಂದ ಕದನ ವಿರಾಮದ ನಂತರ ಲಾಂಚ್ ಪ್ಯಾಡ್‌ಗಳಲ್ಲಿ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಕನಿಷ್ಠ 300 ಭಯೋತ್ಪಾದಕರು ಮತ್ತೊಮ್ಮೆ ಗಡಿ ನಿಯಂತ್ರಣ ರೇಖೆಯ ಸುತ್ತಲೂ ಶಿಬಿರಗಳನ್ನು ನಿರ್ಮಿಸಿದ್ದಾರೆ ಎಂದು ಏಜೆನ್ಸಿಗಳು ಹೇಳಿವೆ. ನಾವು ಎಚ್ಚರಿಕೆಯಿಂದ ಇದ್ದೇವೆ ಹಾಗೂ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಿದ್ಧರಿದ್ದೇವೆ ಎಂದು ಭದ್ರತಾ ಏಜೆನ್ಸಿಗಳು ಹೇಳಿವೆ.