2ನೇ ತರಗತಿಯ ವಿದ್ಯಾರ್ಥಿಯನ್ನು ಬಿಟ್ಟು ತರಗತಿಗೆ ಬೀಗ: 10 ಶಾಲಾ ಸಿಬ್ಬಂದಿ ಅಮಾನತು
ಉತ್ತರ ಪ್ರದೇಶದಲ್ಲಿ ತರಗತಿಯಲ್ಲಿ ಮಲಗಿದ್ದ 6 ವರ್ಷದ ಬಾಲಕನನ್ನು ಕ್ಲಾಸ್‌ನಲ್ಲೇ ಬಿಟ್ಟು ಶಾಲೆಗೆ ಬೀಗ ಹಾಕಿರುವ ಘಟನೆ ವರದಿಯಾಗಿದೆ. ಈ ಸಂಬಂಧ ಆ ಶಾಲೆಯ ಹೆಡ್‌ಮಾಸ್ಟರ್ ಸೇರಿ 10 ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.
ಸಣ್ಣ ವಯಸ್ಸಿನ ಮಕ್ಕಳನ್ನು ಶಾಲೆಗೆ ಕಳಿಸೋದು ಅಷ್ಟು ಸುಲಭದ ಕೆಲಸವಲ್ಲ. ಹಲವು ಮಕ್ಕಳಿಗೆ ಶಾಲೆಗೆ ಹೋಗೋದೇ ಇಷ್ಟವಿರುವುದಿಲ್ಲ. ಅಲ್ಲದೆ, ಮಕ್ಕಳನ್ನು ರೆಡಿ ಮಾಡಿ ಶಾಲೆಗೆ ಕಳಿಸೋದೇ ತಾಯಿಗೆ ಹರಸಾಹಸವಿದ್ದಂತೆ. ಆದರೆ, ಇಷ್ಟು ಕಷ್ಟ ಪಟ್ಟು ಮಕ್ಕಳನ್ನು ಶಾಲೆಗೆ ಕಳಿಸಿದ ಬಳಿಕ ಶಾಲೆಯಲ್ಲಿ ಕೆಟ್ಟ ಘಟನಗಳು ನಡೆದರೆ ಮಕ್ಕಳ ಮನಸ್ಸಲ್ಲಿ ಭಯ ಮತ್ತಷ್ಟು ಹೆಚ್ಚಾಗುತ್ತದಲ್ಲವೇ. ಉತ್ತರ ಪ್ರದೇಶದ ಸರ್ಕಾರಿ ಶಾಲೆಯಲ್ಲಿ ನಡೆದ ಈ ಘಟನೆಯ ವಿವರ ಓದಿದರೆ ನಿಮಗೂ ಹೀಗನ್ನಿಸಬಹುದು.
ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯ ಸರ್ಕಾರಿ ಶಾಲೆಯ ತರಗತಿಯೊಂದರಲ್ಲಿ ಮಲಗಿದ್ದ 2ನೇ ಕ್ಲಾಸ್ ವಿದ್ಯಾರ್ಥಿಯನ್ನು ಕ್ಲಾಸ್‌ರೂಂನಲ್ಲೇ ಬಿಟ್ಟು ಬೀಗ ಹಾಕಲಾಗಿದೆ. ಈ ಘಟನೆ ಸಂಬಂಧ ಆ ಸರ್ಕಾರಿ ಶಾಲೆಯ ಹೆಡ್ ಮಾಸ್ಟರ್ ಸೇರಿ 10 ಮಂದಿ ಶಾಲಾ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ ಎಂದು ಅಧಿಕಾರಿಗಳು ಶನಿವಾರ ಮಾಹಿತಿ ನೀಡಿದ್ದಾರೆ. ಹತ್ರಾಸ್ ಜಿಲ್ಲೆಯ ನಗ್ಲಾ ಪ್ರದೇಶದ ಶಾಲೆಯಲ್ಲಿ 6 ವರ್ಷದ ಪ್ರೇಮ್ ಪ್ರಕಾಶ್ ಆ ಶಾಲೆಯ ತರಗತಿಯಲ್ಲೇ ಮಲಗಿದ್ದ. ಆದರೂ, ಅದನ್ನು ಗಮನಿಸದ ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿ ಶಾಲೆಯನ್ನು ಲಾಕ್ ಮಾಡಿ ಆ ವಿದ್ಯಾರ್ಥಿಯನ್ನು ಹಾಗೇ ಬಿಟ್ಟು ಹೋಗಿದ್ದಾರೆ. ನಂತರ ಸಂಜೆ ಸುಮಾರು 5 ಗಂಟೆ ವೇಳೆಗೆ ಬಾಲಕನಿಗೆ ಎಚ್ಚರವಾದಾಗ ಆತ ಅಳಲು ಶುರು ಮಾಡಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಿಷಾಹಾರ ಸೇವನೆ: ವಾಂತಿ ಬೇಧಿಯಿಂದಾಗಿ ಆಸ್ಪತ್ರೆ ಸೇರಿದ ಹಾಸ್ಟೆಲ್ ವಿದ್ಯಾರ್ಥಿಗಳು
ನಂತರ,ಬಾಲಕ ಅಳುತ್ತಿರುವುದನ್ನು ಕೇಳಿದ ಶಾಲೆಯ ಸುತ್ತಮುತ್ತಲಿನ ಜನರು, ಕ್ಲಾಸ್‌ರೂಂನಲ್ಲಿ ಆತ ಲಾಕ್ ಆಗಿರುವುದು ಅವರ ಗಮನಕ್ಕೆ ಬಂದಿದೆ.ಆ ಸಮಯದಲ್ಲಿ, ಆ ಬಾಲಕನ ತಂದೆ ಸಹ ಶಾಲೆಗೆ ಹೋಗಿದ್ದು, ತನ್ನ ಮಗ ಲಾಕ್ ಆಗಿರುವುದನ್ನು ನೋಡಿ ಇತರರ ಸಹಾಯದಿಂದ ಶಾಲೆಯ ಬಾಗಿಲು ಒಡೆದು ವಿದ್ಯಾರ್ಥಿಯನ್ನು ರಕ್ಷಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ, ಮೂಲ ಶಿಕ್ಷಣದ ಅಧಿಕಾರಿ ಸಂದೀಪ್ ಸಿಂಗ್ ಸಾಸ್ನಿಯ ಬಿಇಒ ಅಖಿಲೇಶ್ ಪ್ರತಾಫ್ ಸಿಂಗ್‌ಗೆ ಈ ವಿಚಾಋದ ಬಗ್ಗೆ ತನಿಖೆ ನಡೆಸುವಂತೆ ಸೂಚಿಸಿದ್ದಾರೆ. ನಂತರ ಪ್ರಾಥಮಿಕ ತನಿಖೆ ನಡೆದ ಬಳಿಕ ಹೆಡ್ ಮಾಸ್ಟರ್, ಶಿಕ್ಷಾ ಮಿತ್ರರು, ಶಾಲೆಯ ಬೋಧಕ ಸೇರಿ 10 ಶಿಕ್ಷಕರನ್ನು ಶುಕ್ರವಾರ ಅಮಾನತು ಮಾಡಲಾಗಿದೆ ಎಂದು ಸಂದೀಪ್ ಸಿಂಗ್ ಮಾಹಿತಿ ನೀಡಿದ್ದಾರೆ. ಅಲ್ಲದೆ, ಸರ್ಕಾರಿ ಶಾಲೆಯ ಒಬ್ಬರು ಬೋಧಕರು ಹಾಗೂ ಮೂರು ಶಿಕ್ಷಾ ಮಿತ್ರರ ಒಂದು ತಿಂಗಳ ಸಂಬಳವನ್ನು ತಡೆ ಹಿಡಿಯುವಂತೆಯೂ ಅವರು ನಿರ್ದೇಶಿಸಿದ್ದಾರೆ.
ಕೋಟೆನಾಡಿನಲ್ಲಿ ಕಡಿಮೆ ಆಗದ ಹಾಸ್ಟೆಲ್ ವಿದ್ಯಾರ್ಥಿಗಳ ಅಸ್ವಸ್ಥ ಪ್ರಕರಣ!
ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಎರಡನೇ ಘಟನೆಯಾಗಿದೆ. ಈ ಹಿಂದೆ ಯುಪಿಯ ಬಲ್ಲಿಯಾ ಜಿಲ್ಲೆಯಲ್ಲಿ 5 ವರ್ಷದ ಬಾಲಕನನ್ನು ಇದೇ ರೀತಿ ತರಗತಿಯಲ್ಲೇ ಬಿಟ್ಟು ಲಾಕ್ ಮಾಡಿದ್ದರು. ನಂತರ, ಪೋಷಕರು ಆ ಬಾಲಕನನ್ನು ರಕ್ಷಿಸಿದ್ದು ಸಹ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆ ವೇಳೆಯೂ ಘಟನೆ ಬಗ್ಗೆ ತನಿಖೆ ನಡೆಸಿದ್ದ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿ ಘಟನೆಗೆ ಕಾರಣವಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳೋದಾಗಿ ಹೇಳಿದ್ದರು. ಈಗ ಆ ಬೆನ್ನಲ್ಲೇ ಮತ್ತೊಂದು ಘಟನೆ ನಡೆದಿರುವುದರಿಂದ ಪುಟ್ಟ ಮಕ್ಕಳನ್ನು ಶಾಲೆಗೆ ಕಳಿಸಲು ಪೋಷಕರು ಹೆದರುವಂತಾಗಿದೆ. ಮಕ್ಕಳನ್ನು ಈ ರೀತಿ ತರಗತಿಯಲ್ಲಿ ಲಾಕ್ ಮಾಡಿ ಹೋದರೆ, ಮನೆಗೆ ಬಾರದ ಮಕ್ಕಳಿಗಾಗಿ ಪೋಷಕರ ಆತಂಕ ಎಷ್ಟಿರಬಹುದು ಹಾಗೂ ಆ ಮಗುವಿನ ಮನಸ್ಥಿತಿ ಹೇಗಿರಬಹುದು ಎಂಬ ಬಗ್ಗೆಯೂ ನಾವಿಲ್ಲಿ ಆಲೋಚಿಸಬೇಕಿದೆ.