ಗುಜರಾತ್‌ನ ಭರೂಚ್‌ನಲ್ಲಿ ದುರಂತ, ಕೆಮಿಕಲ್ ಫ್ಯಾಕ್ಟರಿಯಲ್ಲಿ ಸ್ಪೋಟ, 6 ಕಾರ್ಮಿಕರು ಸಾವು!
* ಗುಜರಾತ್‌ನ ಭರೂಚ್ ಜಿಲ್ಲೆಯಲ್ಲಿ ಭಾರೀ ಅಪಘಾತ
* ಕೆಮಿಕಲ್ ಫ್ಯಾಕ್ಟರಿಯಲ್ಲಿ ಸ್ಪೋಟ, 6 ಕಾರ್ಮಿಕರು ಸಾವು
* ಅಹಮದಾಬಾದ್‌ನಿಂದ ಸುಮಾರು 235 ಕಿಮೀ ದೂರದಲ್ಲಿರುವ ದಹೇಜ್‌ನಲ್ಲಿ ಘಟನೆ
ಅಹಮದಾಬಾದ್(ಏ.11): ಗುಜರಾತ್‌ನ ಭರೂಚ್ ಜಿಲ್ಲೆಯಲ್ಲಿ ಭಾರೀ ಅಪಘಾತದ ಸುದ್ದಿ ಬೆಳಕಿಗೆ ಬಂದಿದೆ. ಇಲ್ಲಿನ ಕೆಮಿಕಲ್ ಫ್ಯಾಕ್ಟರಿ ಕಾರ್ಖಾನೆಯಲ್ಲಿ ಭಾರಿ ಸ್ಫೋಟ ಸಂಭವಿಸಿದೆ. ಈ ಸ್ಫೋಟದಲ್ಲಿ 6 ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆ ಕುರಿತು ಮಾಹಿತಿ ಪಡೆದ ತಕ್ಷಣ ಜಿಲ್ಲಾಡಳಿತ ಹಾಗೂ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದೆ. ಈ ವೇಳೆ ಓರ್ವ ಕೂಲಿ ಕಾರ್ಮಿಕನ ಪ್ರಾಣ ರಕ್ಷಿಸಲಾಗಿದೆ.
ರಾತ್ರಿ ಮೂರು ಗಂಟೆಗೆ ಆತಂಕ
ವಾಸ್ತವವಾಗಿ, ಅಹಮದಾಬಾದ್‌ನಿಂದ ಸುಮಾರು 235 ಕಿಮೀ ದೂರದಲ್ಲಿರುವ ದಹೇಜ್ ಕೈಗಾರಿಕಾ ಪ್ರದೇಶದಲ್ಲಿರುವ ಘಟಕದಲ್ಲಿ ಭಾನುವಾರ ರಾತ್ರಿ 3 ಗಂಟೆಗೆ ಈ ದುರಂತ ಸಂಭವಿಸಿದೆ. ಹೀಗಿರುವಾಗ ಸ್ಫೋಟದ ಬಳಿಕ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡು ಇಲ್ಲಿ ಕೆಲಸ ಮಾಡುತ್ತಿದ್ದ ಆರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಅಲ್ಲದೇ ಓರ್ವ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ.
ಬೆಂಕಿಯನ್ನು ನಿಯಂತ್ರಣಕ್ಕೆ ತಂದ ಸಿಬ್ಬಂದಿ
ಅಪಘಾತದ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಗಳು ಇದು ಸಾವಯವ ರಾಸಾಯನಿಕ ಕಾರ್ಖಾನೆ ಎಂದು ಹೇಳಿದ್ದಾರೆ. ತಡರಾತ್ರಿ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಿಂದಾಗಿ ಕಾರ್ಖಾನೆಗೆ ಬೆಂಕಿ ಹೊತ್ತಿಕೊಂಡಿದೆ. ನಂತರ ಶವಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಬೆಂಕಿ ಕೂಡ ನಿಯಂತ್ರಣಕ್ಕೆ ಬಂದಿದೆ. ಆದರೆ, ಈ ಅಪಘಾತದ ಬಗ್ಗೆ ಹೆಚ್ಚಿನ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ ಎಂದಿದ್ದಾರೆ.
ಕಳೆದ ವರ್ಷ ವಡೋದರಾದಲ್ಲಿ ಭೀಕರ ದುರಂತ
ಕಳೆದ ವರ್ಷವೂ ವಡೋದರದ ಜಗಡಿಯಾ ಬಳಿಯ ಗುಜರಾತ್ ಇಂಡಸ್ಟ್ರಿಯಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಪ್ರದೇಶದ ರಾಸಾಯನಿಕ ಕಾರ್ಖಾನೆಯಲ್ಲಿ ಇದೇ ರೀತಿಯ ಭೀಕರ ಸ್ಫೋಟ ಸಂಭವಿಸಿತ್ತು ಎಂಬುವುದು ಉಲ್ಲೇಖನೀಯ. ಅಲ್ಲಿ ಸ್ಫೋಟದ ನಂತರ ಬೆಂಕಿ ಹೊತ್ತಿಕೊಂಡಿತ್ತು. ಸ್ಫೋಟವು ಎಷ್ಟು ಪ್ರಬಲವಾಗಿತ್ತು ಎಂದರೆ ಅದರ ಶಬ್ದದಿಂದಾಗಿ ಸುತ್ತಮುತ್ತಲಿನ ಮನೆಗಳ ಕಿಟಕಿಗಳು ಮುರಿದು 24 ಕಾರ್ಮಿಕರು ಗಾಯಗೊಂಡಿದ್ದರು. ವಡೋದರಾ ಮತ್ತು ಅಂಕಲೇಶ್ವರದ ಆಸ್ಪತ್ರೆಗಳಿಗೆ ದಾಖಲಾಗಿದ್ದರು.