ನವದೆಹಲಿ(ಮೇ.22): ಹಂತಹಂತವಾಗಿ ಲಾಕ್‌ಡೌನ್‌ ತೆರವಾಗುತ್ತಲೇ, ದೇಶದಲ್ಲಿ ಹೊಸ ಕೊರೋನಾ ಸೋಂಕಿತರ ಸಂಖ್ಯೆಯೂ ಆತಂಕಕಾರಿ ಪ್ರಮಾಣದಲ್ಲಿ ಏರಿಕೆಯಾಗುವ ಸಂಪ್ರದಾಯ ಮುಂದುವರೆದಿದೆ.

ಗುರುವಾರ ಒಂದೇ ದಿನ 5700 ಹೊಸ ಸೋಂಕಿತರು ಪತ್ತೆಯಾಗಿದ್ದು, ಇದು ಈವರೆಗಿನ ದೈನಂದಿನ ಗರಿಷ್ಠ ಪ್ರಮಾಣವಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 1,16,295ಕ್ಕೆ ತಲುಪಿದೆ. ಇದೇ ವೇಳೆ ಮತ್ತೆ 139 ಜನ ವೈರಸ್‌ಗೆ ಬಲಿಯಾಗಿದ್ದು, ಈವರೆಗೆ ಸಾವನ್ನಪ್ಪಿದವರ ಸಂಖ್ಯೆ 3494ಕ್ಕೆ ಮುಟ್ಟಿದೆ.

ರಾಜ್ಯದಲ್ಲಿ ಜೂನ್‌ ತಿಂಗಳಲ್ಲಿ ಸೋಂಕು ತೀವ್ರ!

ಈ ನಡುವೆ ಸತತ 5ನೇ ದಿನವೂ ಮಹಾರಾಷ್ಟ್ರದಲ್ಲಿ 2000ಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಬುಧವಾರ ಮಹಾರಾಷ್ಟ್ರದಲ್ಲಿ 2161 ಹೊಸ ಕೇಸು ಪತ್ತೆಯಾಗಿದ್ದು, 65 ಜನ ಸಾವನ್ನಪ್ಪಿದ್ದಾರೆ. ಉಳಿದಂತೆ ತಮಿಳುನಾಡಿನಲ್ಲಿ 776, ದೆಹಲಿಯಲ್ಲಿ 571, ಗುಜರಾತ್‌ 371, ಮಧ್ಯಪ್ರದೇಶ 246, ಉತ್ತರ ಪ್ರದೇಶದಲ್ಲಿ 181 ಕೊರೋನಾ ಸೋಂಕು ಪ್ರಕರಣಗಳು ದಾಖಲಾಗಿವೆ. ಇನ್ನು ಈವರೆಗೆ ದೇಶದಲ್ಲಿ 47487 ಜನ ಸೋಂಕಿನಿಂದ ಗುಣಮುಖರಾಗಿ ಮನೆಗೆ ಮರಳಿದ್ದಾರೆ.