ಪತಂಜಲಿ ಕಂಪನಿ ಕೊರೋನಿಲ್ ಕಿಟ್ ಆಂಧ್ರಪ್ರದೇಶದಲ್ಲಿ ಕಾಳಸಂತೆಯಲ್ಲಿ ಒಂದಕ್ಕೆ ನಾಲ್ಕು ಪಟ್ಟು ಹಣ ನೀಡಿ ಖರೀದಿಸುತ್ತಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಹೈದರಾಬಾದ್(ಜು.17): ಜೀವನಿರೋಧಕ ಶಕ್ತಿ ಹೆಚ್ಚಿಸಲು ನೆರವಾಗುವ ಬಾಬಾ ರಾಮ್‌ದೇವ್ ಅವರ ಪತಂಜಲಿ ಕಂಪನಿ ಕೊರೋನಿಲ್ ಕಿಟ್ ಆಂಧ್ರಪ್ರದೇಶದಲ್ಲಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ.
ಹೇಗಾದರೂ ಮಾಡಿ ಕೊರೋನಾ ಬರದಂತೆ ತಡೆಯಲು ಯತ್ನಿಸುತ್ತಿರುವ ಜನರು, ಒಂದಕ್ಕೆ ನಾಲ್ಕು ಪಟ್ಟು ಹಣ ಕೊಟ್ಟು ರಾಮ್‌ದೇವ್ ಕಂಪನಿ ಉತ್ಪನ್ನ ಖರೀದಿಸುತ್ತಿದ್ದಾರೆ. ಪತಂಜಲಿ ಕಂಪನಿಯ ಕೊರೋನಿಲ್ ಕಿಟ್‌ನಲ್ಲಿ 3 ಬಗೆಯ ಔಷಧಗಳಿದ್ದು, ಅದರ ದರ 545 ರು. ಆದರೆ ಅದನ್ನು 2000 ರು.ವರೆಗೂ ಕಾಳಸಂತೆಯಲ್ಲಿ ಮಾರಲಾಗುತ್ತಿದೆ.
ಪತಂಜಲಿಯ ಕೊರೋನಿಲ್ ಮಾರಾಟಕ್ಕೆ ಗ್ರೀನ್ ಸಿಗ್ನಲ್!
ಸ್ಥಳೀಯ ರಖಂ ಮಾರಾಟಗಾರರು, ಕೊರೋನಿಲ್ ಔಷಧ ಮಾರುಕಟ್ಟೆಗೆ ಬಿಡುಗಡೆಯಾದ ದಿನದಂದೇ ಭಾರೀ ಪ್ರಮಾಣದಲ್ಲಿ ಖರೀಸಿದಿಟ್ಟುಕೊಂಡಿದ್ದು, ಈಗ 3-4 ಪಟ್ಟು ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಮಂಗಳವಾರ ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ತಂಡವೊಂದನ್ನು ಪೊಲೀಸರು ಬಲೆಗೆ ಕೆಡವಿದ್ದಾರೆ.
ಜೂನ್ 23 ರಂದು ಬಾಬಾ ರಾಮ್‌ದೇವ್ ಕೊರೋನಾ ಗುಣಪಡಿಸಲು ರಾಮಬಾಣವಾದ ಕೊರೋನಿಲ್ ಔಷಧವನ್ನು ಕಂಡುಹಿಡಿದಿದ್ದಾಗಿಯೂ, ಕೇವಲ 14 ದಿನಗಳಲ್ಲಿ ಸೋಂಕಿತರು ಗುಣಮುಖರಾಗುವುದಾಗಿಯೂ ತಿಳಿಸಿದ್ದರು. ಇದಾದ ಮರು ದಿನವೇ ಆಯುಷ್ ಇಲಾಖೆ ಶಾಕ್ ನೀಡುತ್ತಿದ್ದಂತೆ ಬಾಬಾ ರಾಮ್ ದೇವ್ ಉಲ್ಟಾ ಹೊಡೆದಿದ್ದರು.
